ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ಕುಮಾರಧಾರಾ ನದಿ ಸಂಗಮ ತಟದಲ್ಲಿರುವ 34ನೇ ನೆಕ್ಕಿಲಾಡಿಯ ಶ್ರೀ ಗುರು ರಾಘವೇಂದ್ರ ಮಠದ ಪುನರ್ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದ್ದು, ಮುಂಬರುವ ಮಾರ್ಚ್31 ರಿಂದ ಎಪ್ರಿಲ್ 4 ರ ವರೆಗೆ ಪುನರ್ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವವು ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ.ರಾಧಾಕೃಷ್ಣ ನಾೖಕ್ ತಿಳಿಸಿದರು.
ಜ.17ರಂದು ಶ್ರೀ ಮಠದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 2004 ರಲ್ಲಿ ನಿರ್ಮಾಣಗೊಂಡ ಶ್ರೀ ರಾಯರ ಮಠವು ಶಿಥಿಲಾವಸ್ಥೆಯನ್ನು ಹೊಂದಿದ ಹಿನ್ನೆಲೆಯಲ್ಲಿ ಮಠದ ಪುನರ್ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದು, 2.25 ಕೋಟಿ ವೆಚ್ಚದಲ್ಲಿ ಮಠದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಭೂ ಗರ್ಭದಿಂದಲೇ ಮಠದ ಗರ್ಭಗುಡಿಯನ್ನು ನಿರ್ಮಿಸಿದ್ದು, ರಾಯರ ಮಠವು ಮೊದಲ ಮಹಡಿಯಲ್ಲಿ ಅರ್ಥಾತ್ ಎತ್ತರದಲ್ಲಿ ನಿರ್ಮಾಣವಾಗುತ್ತಿದೆ. ಮಠದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ 600 ಆಸನ ಸಾಮರ್ಥ್ಯದ ಸಭಾಭವನ ಹಾಗೂ ನೆಲ ಮಹಡಿಯಲ್ಲಿ ಒಂದು ಸಾವಿರ ಮಂದಿಗೆ ಅನುಕೂಲ ಕಲ್ಪಿಸುವ ಭೋಜನಾಲಯದ ನಿರ್ಮಾಣ ಕಾರ್ಯವೂ ಭರದಿಂದ ನಡೆಯುತ್ತಿದೆ ಹಾಗೂ ಮಠದ ಮುಂಭಾಗದಲ್ಲಿ ರಾಜಗೋಪುರದ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ ಎಂದು ವಿವರಿಸಿದರು.
ಈಗಾಗಲೇ ಶೇ.70ರಷ್ಟು ಕಾಮಗಾರಿ ನಡೆದಿದ್ದು, ಅಂತಿಮ ಹಂತದ ಕಾಮಗಾರಿಯು ಭರದಿಂದ ಸಾಗುತ್ತಿದೆ. ಈಗಾಗಲೇ ನಡೆದಿರುವ ಎಲ್ಲಾ ಕಾಮಗಾರಿಗಳೂ ಭಕ್ತ ಜನತೆಯ ಸಹಕಾರದಿಂದಲೇ ನಡೆದಿದ್ದು, ಮುಂದಿನ ಕಾಮಗಾರಿಗಳಿಗೂ ಭಕ್ತ ಜನತೆಯ ತುಂಬು ಮನದ ಸಹಕಾರವನ್ನು ಆಪೇಕ್ಷಿಸಲಾಗುತ್ತಿದೆ ಎಂದು ತಿಳಿಸಿದ ಅವರು, ರಾಷ್ಟ್ರೀಯ ಹೆದ್ದಾರಿ ಪಾರ್ಶ್ವದಲ್ಲಿ ಶ್ರೀ ಮಠವು ಪುನರ್ ನಿರ್ಮಾಣವಾಗುತ್ತಿರುವುದರಿಂದ ಬೆಂಗಳೂರು – ಮಂಗಳೂರು ನಡುವಣದ ಹೆದ್ದಾರಿಯಲ್ಲಿ ಸಂಚರಿಸುವ ಭಕ್ತ ಜನತೆ ಇಲ್ಲಿನ ಮಠವು ಅನುಕೂಲತೆಯನ್ನು ಒದಗಿಸಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಮಠದ ಆಡಳಿತ ಮಂಡಳಿಯ ಪ್ರಮುಖರಾದ ಧನ್ಯ ಕುಮಾರ್ ರೈ, ಹರೀಶ್ ಉಪಾಧ್ಯಾಯ, ಕೆ. ಉದಯ ಕುಮಾರ್, ಎನ್. ಗೋಪಾಲ ಹೆಗ್ಡೆ, ಸ್ವರ್ಣೇಶ್ ಕುಮಾರ್, ಸದಾನಂದ ಪೂಜಾರಿ, ದಮಯಂತಿ ಉಪಸ್ಥಿತರಿದ್ದರು.
ಗುರುರಾಯರ ಕೃಪೆ: ದೊರೆತ ಉದ್ಯೋಗದ ಮೊದಲ ವೇತನ ಸಮರ್ಪಣೆ
ಪತ್ರಿಕಾಗೋಷ್ಠಿ ಪೂರ್ಣಗೊಳ್ಳುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪ್ರಜ್ಞಾ ಭಂಡಾರಿ ಶ್ರೀ ಗುರುರಾಯರ ಅನುಗ್ರಹದಿಂದ ತನಗೆ ಉದ್ಯೋಗ ದೊರಕಿದ್ದು, ಈ ಕಾರಣಕ್ಕೆ ತನ್ನ ಮೊದಲ ವೇತನವನ್ನು ರಾಯರ ಮಠದ ಪುನರ್ ನಿರ್ಮಾಣಕ್ಕೆ ಸಮರ್ಪಿಸಲು ಸಂತಸವಾಗುತ್ತಿದೆ ಎಂದು ತಿಳಿಸಿ ಮಠದ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.