ದಿಲ್ಲಿ ಗಣರಾಜ್ಯೋತ್ಸವಕ್ಕೆ ನಗರಸಭೆ ಪೌರಕಾರ್ಮಿಕೆ-ಗುಲಾಬಿ ವಿಶೇಷ ಅತಿಥಿ

0

ರಾಜ್ಯದ ನಗರಸಭೆಗಳಿಂದ ಆಯ್ಕೆಯಾದ 6 ಮಂದಿಯಲ್ಲಿ ದ.ಕ.ಜಿಲ್ಲೆಯ ಏಕೈಕ ಮಹಿಳೆ

ಪುತ್ತೂರು:ಚಳಿ,ಗಾಳಿ ಮಳೆಯನ್ನೂ ಲೆಕ್ಕಿಸದೆ ನಿತ್ಯ ಸೇವೆ ಮಾಡುತ್ತಿರುವ ಪೌರಕಾರ್ಮಿಕರು ನಗರದ ನೈರ್ಮಲ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ಹೊಂದಿದ್ದಾರೆ.ಈ ರೀತಿ ಶ್ರಮ ವಹಿಸುತ್ತಿರುವವರಲ್ಲಿ ಓರ್ವರಾಗಿರುವ ಪುತ್ತೂರು ನಗರಸಭೆಯ ಹಿರಿಯ ಪೌರ ಕಾರ್ಮಿಕೆ ಗುಲಾಬಿ ಅವರಿಗೆ ಈ ವರ್ಷ ಜ.26ರಂದು ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ದೇಶದ ಹೆಮ್ಮೆಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲು ಅವಕಾಶ ಲಭಿಸಿದೆ.ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾಗಿರುವ ಏಕೈಕ ಪೌರಕಾರ್ಮಿಕ ಮಹಿಳೆ ಇವರಾಗಿದ್ದು ಸ್ವಚ್ಛತೆಯಲ್ಲಿ ರಾಜ್ಯದಲ್ಲಿ 3ನೇ ಸ್ಥಾನದಲ್ಲಿರುವ ಪುತ್ತೂರು ನಗರಸಭೆಗೆ ಇದೊಂದು ಹೆಗ್ಗಳಿಕೆಯಾಗಿದೆ.


ಪುತ್ತೂರು ನಗರಸಭೆಯಲ್ಲಿ ಪೌರ ಕಾರ್ಮಿಕರಾಗಿದ್ದ ದಿ.ಭಾಸ್ಕರ ಅವರ ಪತ್ನಿಯಾಗಿರುವ ಗುಲಾಬಿ ಅವರು ಸಾಲ್ಮರ ಕೇಪುಳು ನಿವಾಸಿಯಾಗಿದ್ದಾರೆ.ಪತಿ ಭಾಸ್ಕರ ಅವರ ನಿಧನದ ಬಳಿಕ ಅವರ ಕೆಲಸವನ್ನು ಅಂತರಂಗ ಶುದ್ದತೆಯಿಂದ ನಿರ್ವಹಿಸುತ್ತಿರುವ ಅವರ ಕಾರ್ಯವನ್ನು ಮೆಚ್ಚಿ ಈ ಅವಕಾಶ ಲಭಿಸಿರುವುದು ಎಲ್ಲರಿಂದ ಶ್ಲಾಘನೆ ವ್ಯಕ್ತವಾಗಿದೆ.ಚಳಿ, ಗಾಳಿ, ಮಳೆ ಎನ್ನದೆ ಸೂರ್ಯ ಉದಯಿಸುವುದಕ್ಕಿಂತ ಮುಂಚಿತವಾಗಿ ನಗರದ ಸ್ವಚ್ಛತೆಗೆ ಇಳಿಯುವ ಇವರ ಕಾರ್ಯ ಅಽಕಾರಿಗಳಿಗಷ್ಟೆ ಅಲ್ಲದೆ ಸಾರ್ವಜನಿಕರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.ಗುಲಾಬಿ ಅವರ ಪುತ್ರ ರಮೇಶ್ ಅವರು ಚಾಲಕರಾಗಿದ್ದು, ಇನ್ನೋರ್ವ ಪುತ್ರ ಪ್ರದೀಪ್ ಅವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.


ಸರಕಾರದಿಂದಲೇ ವೆಚ್ಚದ ನಿರ್ವಹಣೆ:
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ದೆಹಲಿಗೆ ಹೋಗಿ ಬರಲು ತಗಲುವ ಪ್ರಯಾಣದ ವೆಚ್ಚವನ್ನು ವಸತಿ ಸಹಿತವಾಗಿ ಕೇಂದ್ರ ವಸತಿ ಹಾಗು ನಗರ ವ್ಯವಹಾರಗಳ ಮಂತ್ರಾಲಯದ ನಿರ್ದೇಶನದಂತೆ ಹುಡ್ಕೋ ಸಂಸ್ಥೆಯಿಂದ ಭರಿಸಲಾಗುತ್ತದೆ.ಗುಲಾಬಿಯವರು ಜ.24ರಂದು ಬೆಂಗಳೂರಿನ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನದಲ್ಲಿ ಪ್ರಯಾಣಿಸಿ ಕಾರ್ಯಕ್ರಮ ಮುಗಿದು ಜ.27ರಂದು ಬೆಂಗಳೂರಿಗೆ ಹಿಂದಿರುಗಲಿದ್ದಾರೆ.

2017ರಲ್ಲಿ ಸಿಂಗಾಪುರ ಅಧ್ಯಯನ ಪ್ರವಾಸ ಮಾಡಿದ್ದರು
ಗುಲಾಬಿ ಅವರು 2017ರಲ್ಲಿ ಸಿಂಗಾಪುರಕ್ಕೆ ಸ್ವಚ್ಛತಾ ನಿರ್ವಹಣೆ ಕುರಿತ ಅಧ್ಯಯನ ಪ್ರವಾಸ ಮಾಡಿದ್ದರು.ಪುತ್ತೂರು ನಗರಸಭೆಯಿಂದ ಪೌರ ಕಾರ್ಮಿಕರಾದ ಯಶೋದಾ ಮತ್ತು ಗುಲಾಬಿ ಅವರು ಸಿಂಗಾಪುರಕ್ಕೆ ಅಧ್ಯಯನ ಪ್ರವಾಸ ಕೈಗೊಂಡಿದ್ದರು.ಇದೀಗ ಗುಲಾಬಿ ಅವರಿಗೆ ದೆಹಲಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸುವ ಅವಕಾಶ ಲಭಿಸಿದೆ.

ದ.ಕ.ಜಿಲ್ಲೆಯಿಂದ ಒಬ್ಬರೇ ಆಯ್ಕೆ
2024ರ ಜ.26ರಂದು ನಡೆಯುವ ಗಣರಾಜ್ಯೋತ್ಸವಕ್ಕೆ ಈ ಬಾರಿ ಮಹಿಳಾ ಪೌರ ಕಾರ್ಮಿಕರ ಪಟ್ಟಿ ಕಳುಹಿಸುವಂತೆ ಸರಕಾರದಿಂದ ಸೂಚನೆ ಬಂದಿತ್ತು.ಅದರಂತೆ ನಮ್ಮಲ್ಲಿಂದ ಗುಲಾಬಿಯವರ ಹೆಸರನ್ನು ಕಳುಹಿಸಿದ್ದೆವು.ರಾಜ್ಯದಲ್ಲಿ ಒಟ್ಟು 22 ನಗರ ಸ್ಥಳೀಯ ಸಂಸ್ಥೆಗಳಿಂದ 22 ಮಹಿಳಾ ಪೌರ ಕಾರ್ಮಿಕರು ಹಾಗು ಅವರ ಸಂಗಾತಿ ಅಥವಾ ಸಂಬಂಧಿಕರೊಬ್ಬರಿಗೆ ವಿಶೇಷ ಅತಿಥಿಯಾಗಿ ಭಾಗವಹಿಸಲು ಅವಕಾಶವಿದೆ.22 ಮಹಿಳೆಯರ ಪೈಕಿ ರಾಜ್ಯದ ಒಟ್ಟು ನಗರಸಭೆಗಳಿಂದ 6 ಮಂದಿ ಆಯ್ಕೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದ ಪುತ್ತೂರು ನಗರಸಭೆಯಿಂದ ಗುಲಾಬಿ ಅವರೋರ್ವರೇ ಆಯ್ಕೆಯಾಗಿದ್ದು ಇದು ಸಂತೋಷ ತಂದಿದೆ.ಗುಲಾಬಿ ಅವರೊಂದಿಗೆ ಅವರ ಪುತ್ರ ರಮೇಶ್ ಅವರಿಗೆ ದೆಹಲಿ ತೆರಳಲು ಅವಕಾಶವಿದೆ.ಜ.23ರಂದು ಪುತ್ತೂರು ನಗರಸಭೆಯಿಂದ ಕಾರು ಮೂಲಕ ಅವರನ್ನು ಬೆಂಗಳೂರಿಗೆ ಬಿಡುತ್ತೇವೆ.ಜ.24ರಂದು ಬೆಳಿಗ್ಗೆ ಗಂಟೆ 11.30ಕ್ಕೆ ವಿಶೇಷ ವಿಮಾನದ ಮೂಲಕ ಅವರು ದೆಹಲಿಗೆ ತೆರಳಲಿದ್ದಾರೆ.ಜ.27ಕ್ಕೆ ಹಿಂದಿರುಗಲಿದ್ದಾರೆ-

ಮಧು ಎಸ್ ಮನೋಹರ್, ಆಯುಕ್ತರು ನಗರಸಭೆ ಪುತ್ತೂರು

LEAVE A REPLY

Please enter your comment!
Please enter your name here