ಕಡಬ: ಅನಾರೋಗ್ಯ ಪೀಡಿತರಾಗಿ ಜೋಪಾಡಿ ಮನೆಯಲ್ಲಿ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದ ಕಡಬ ತಾಲೂಕಿನ ಬಲ್ಯ ಗ್ರಾಮದ ಕುದ್ರಡ್ಕ ನಿವಾಸಿ ಕೃಷ್ಣ ನಾಯ್ಕ್ ಅವರ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಅವರಿಗೆ ಚಿಕಿತ್ಸೆ ಕೊಡಿಸಿ ಬೆಳ್ತಂಗಡಿಯ ಸಿಯೋನ್ ಅನಾಥಾಶ್ರಮಕ್ಕೆ ದಾಖಲಿಸಿದೆ.
ವಯೋವೃದ್ದರಾಗಿದ್ದ ಕೃಷ್ಣ ನಾಯ್ಕ ಅವರು ಕುದ್ರಡ್ಕದಲ್ಲಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದರು. ಇವರ ಏಕೈಕ ಪುತ್ರಿಯೂ ವಿಶೇಷ ಚೇತನಳಾಗಿದ್ದು ಬೆಥನಿ ಆಶ್ರಮದಲ್ಲಿದ್ದಾರೆ. ಇತ್ತೀಚೆಗೆ ಕೃಷ್ಣ ನಾಯ್ಕ ಅವರಿಗೆ ಆರೋಗ್ಯವೂ ಕೈಕೊಟ್ಟಿದ್ದರಿಂದ ನಡೆದಾಡಲು ಅಸಾಧ್ಯವಾಗಿತ್ತು. ಸ್ಥಳೀಯ ನಿವಾಸಿ ಐಸಮ್ಮ ಮತ್ತು ಅವರ ಮನೆಯವರು ಇವರಿಗೆ ಪ್ರತಿನಿತ್ಯ ಅನ್ನ, ಆಹಾರ ನೀಡಿ ಮನೆ ಶುಚಿಗೊಳಿಸಿ ಸಹಕರಿಸುತ್ತಿದ್ದರು. ಮಲಗಿದ್ದಲ್ಲಿಯೇ ಇದ್ದ ಕೃಷ್ಣ ನಾಯ್ಕ್ ಅವರಿಗೆ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್‌ನಿಂದ ಪರಿಶಿಷ್ಠ ಪಂಗಡಕ್ಕೆ ಕಾದಿರಿಸಿದ್ದ ಅನುದಾನದಲ್ಲಿ ಆರ್ಥಿಕ ನೆರವು ನೀಡಲಾಗಿತ್ತು. ಅಲ್ಲದೇ ಗ್ರಾ.ಪಂ.ನಿಂದ ಕೃಷ್ಣ ನಾಯ್ಕ್ ಅವರ ಮನೆಗೆ ನಿರಂತರ ಭೇಟಿ ನೀಡಿ ಅವರ ಆರೋಗ್ಯದ ಬಗ್ಗೆ ಗಮನ ಹರಿಸಲಾಗುತಿತ್ತು. ಇತ್ತೀಚೆಗೆ ಕೃಷ್ಣ ನಾಯ್ಕ ಅವರಿಗೆ ನಡೆದಾಡಲು ಸಾಧ್ಯವಾಗದೇ ಮಲಗಿದಲ್ಲಿಯೇ ಇರುವುದನ್ನು ಗಮನಿಸಿ ಗ್ರಾ.ಪಂ.ನಿಂದ ಅವರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಕೃಷ್ಣ ನಾಯ್ಕ್ ಅವರು 7 ದಿನಗಳ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ. ಅವರು ಮತ್ತೆ ಮನೆಗೆ ಹೋಗಿ ಒಬ್ಬಂಟಿಯಾಗಿ ಜೀವನ ನಡೆಸಲು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಗ್ರಾ.ಪಂ.ನಿಂದ ಸಿಡಿಪಿಒ ಪುತ್ತೂರು ಹಾಗೂ ಕಡಬ ಸಮುದಾಯ ಆರೋಗ್ಯದವರ ಸಹಕಾರದೊಂದಿಗೆ ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲು ಗ್ರಾಮದ ನೆರಿಯ ಎಂಬಲ್ಲಿರುವ ಸಿಯೋನ್ ಅನಾಥಶ್ರಮಕ್ಕೆ ಸೇರಿಸಲಾಗಿದೆ. ಗ್ರಾ.ಪಂ.ಅಧ್ಯಕ್ಷೆ ಸುಮನ, ಸದಸ್ಯರಾದ ಮಹಮ್ಮದಾಲಿ, ಸುಧೀರ್ ದೇವಾಡಿಗ, ಪಿಡಿಒ ಆನಂದ ಅವರು ಕೃಷ್ಣ ನಾಯ್ಕ್ ಅವರ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ್ದರು.