ಸಾವಿರಾರು ಪ್ರತಿಭೆಗಳ ಆಗರ ಫಿಲೋಮಿನಾದ ಚಾರಿತ್ರಿಕ ಕ್ರೀಡಾಂಗಣ-ವಂ|ಲಾರೆನ್ಸ್ ಮಸ್ಕರೇನ್ಹಸ್
ಪುತ್ತೂರು: ಶಿಕ್ಷಣ ಶಿಲ್ಫಿ ಮೊ|ಪತ್ರಾವೋರವರ ಶ್ರಮದ ಫಲವಾಗಿ ಹಾಗೂ ದೂರದೃಷ್ಟಿತ್ವದ ಚಿಂತನೆಯಿಂದ ಫಿಲೋಮಿನಾ ವಿದ್ಯಾಸಂಸ್ಥೆ ಇಂದಿಗೂ ಬಹಳ ಎತ್ತರವಾಗಿ ಬೆಳೆದು ನಿಂತಿದೆ. ಜೊತೆಗೆ ಈ ವಿದ್ಯಾಸಂಸ್ಥೆಯ ಚಾರಿತ್ರಿಕವಾದ ಕ್ರೀಡಾಂಗಣವು ಸಾವಿರಾರು ಪ್ರತಿಭೆಗಳ ಆಗರವಾಗಿದೆ ಎಂದು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್ರವರು ಹೇಳಿದರು.
ಸಾಮೆತ್ತಡ್ಕ ಯುವಕ ಮಂಡಲ ಹಾಗೂ ಸಿಝ್ಲರ್ ಸಾಪ್ಟ್ ಡ್ರಿಂಕ್ಸ್ ಸಾಮೆತ್ತಡ್ಕ ಇವರ ಜಂಟಿ ಆಶ್ರಯದಲ್ಲಿ ದಿ|ಶ್ರೀನಾಥ್ ಆಚಾರ್ಯ ಸ್ಮರಣಾರ್ಥ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜ್ ಕ್ಯಾಂಪಸ್ನಲ್ಲಿನ ಕ್ರೀಡಾಂಗಣದಲ್ಲಿ ಜ.20 ಹಾಗೂ 21 ರಂದು ಎರಡು ದಿನಗಳ ಕಾಲ ನಡೆಯುವ ಹೊನಲು-ಬೆಳಕಿನ ರಾಷ್ಟ್ರಮಟ್ಟದ ಆಹ್ವಾನಿತ ತಂಡಗಳ ನಿಗದಿತ ಓವರ್ಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ `ಸಿಝ್ಲರ್ ಟ್ರೋಫಿ’ ಟೂರ್ನಮೆಂಟ್ನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ನಮ್ಮ ಜೀವನ ಸಮಾಜಕ್ಕೆ ಒಳಿತನ್ನು ಮಾಡುವ ಚಿಂತನೆಯನ್ನು ಅಳವಡಿಸಿಕೊಂಡು ಆರೋಗ್ಯಪೂರ್ಣ ಸಮಾಜ ಕಟ್ಟುವಲ್ಲಿ ನಾವು ಶ್ರಮಿಸಬೇಕು. ವಿದ್ಯಾರ್ಥಿಗಳಲ್ಲಿನ ಖಿನ್ನತೆಯನ್ನು ಹೋಗಲಾಡಿಸಿ, ಆತ್ಮಸ್ಥೈರ್ಯವನ್ನು ಬೆಳೆಸುವಲ್ಲಿ, ಅಡೆ-ತಡೆಗಳ ಪಂಥಾಹ್ವಾನವನ್ನು ಸ್ವೀಕರಿಸುತ್ತಾ ನಾವೆಲ್ಲ ಕಾರ್ಯೋನ್ಮುಖರಾಗುತ್ತಾ ದೇವರು ಮೆಚ್ಚುವ ಕಾರ್ಯವನ್ನು ಮಾಡಬೇಕಾಗಿದೆ ಎಂದರು.
ವಿದೇಶದಲ್ಲಿ ಕುಳಿತು ವೀಕ್ಷಿಸಿದ ಅನುಭವವಾಗುತ್ತಿದೆ-ಡಾ.ದೀಪಕ್ ರೈ: ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಮಾತನಾಡಿ, ಫಿಲೋಮಿನಾ ವಿದ್ಯಾಸಂಸ್ಥೆಯ ಈ ಕ್ರೀಡಾಂಗಣದಲ್ಲಿ ಕುಳಿತು ಪಂದ್ಯವನ್ನು ವೀಕ್ಷಣೆ ಮಾಡಿದಾಗ ನಾವು ವಿದೇಶದಲ್ಲಿನ ಕ್ರೀಡಾಂಗಣದಲ್ಲಿ ಕುಳಿತು ಪಂದ್ಯವನ್ನು ವೀಕ್ಷಣೆ ಮಾಡಿದ ಅನುಭವವಾಗುತ್ತಿದೆ. ಇಂತಹ ಒಂದು ರಸದೌತಣವನ್ನು ಒದಗಿಸಿಕೊಟ್ಟಂತಹ ಪ್ರೀತಿಯ ಪಚ್ಚಣ್ಣರವರಿಗೆ ಅಭಿನಂದನೆಗಳನ್ನು ಸಲ್ಲಿಸಬೇಕಾಗಿದೆ ಎಂದರು.
ಕ್ರೀಡೆಯು ದೇಶದ ಏಕತೆ, ದೇಶಪ್ರೇಮವನ್ನು ಸಾರುತ್ತದೆ-ನವೀನ್ ಭಂಡಾರಿ:
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ಕ್ರೀಡೆಯು ದೇಶದ ಏಕತೆ ಹಾಗೂ ದೇಶಪ್ರೇಮವನ್ನು ಸಾರುತ್ತದೆ. ಪ್ರತಿಷ್ಠಿತ ಐಪಿಎಲ್, ಅಂತರ್ರಾಷ್ಟ್ರೀಯ ಪಂದ್ಯಾಟಗಳನ್ನು ಏರ್ಪಡಿಸಿದ ರೀತಿಯಲ್ಲಿ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಸಂಘಟಕರು ಇಲ್ಲಿ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.
ಕ್ರೀಡಾಕೂಟ ಫಿಲೋಮಿನಾ ವಿದ್ಯಾಸಂಸ್ಥೆಗೆ ಗೌರವ ತಂದುಕೊಟ್ಟಿದೆ-ವಂ|ಸ್ಟ್ಯಾನಿ:
ಅಧ್ಯಕ್ಷತೆ ವಹಿಸಿದ ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ ಮಾತನಾಡಿ, ಹತ್ತೂರ ತಂಡಗಳು ಪುತ್ತೂರಿನ ಫಿಲೋಮಿನಾ ಕ್ರೀಡಾಂಗಣದಲ್ಲಿ ಆಡುವಂತೆ ಮಾಡಿದ ಸಂಘಟಕರಾದ ಪ್ರಸನ್ನ ಕುಮಾರ್ ಶೆಟ್ಟಿಯವರಿಗೆ ಅಭಿನಂದನೆಗಳು. ನಯನ ಮನೋಹರ ಕ್ರೀಡಾಂಗಣದಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪಂದ್ಯವನ್ನು ವೀಕ್ಷಿಸುವ ಅವಕಾಶವನ್ನು ಸಂಘಟಕರು ಕಲ್ಪಿಸಿಕೊಟ್ಟಿದ್ದಾರೆ ಜೊತೆಗೆ ಇದು ಫಿಲೋಮಿನಾ ವಿದ್ಯಾಸಂಸ್ಥೆಗೆ ಗೌರವವನ್ನು ತಂದುಕೊಟ್ಟಿದೆ ಎಂದರು.
ಜನರ ಶ್ರೇಷ್ಟ ಸಂಪತ್ತು ಅದು ಮಾನವನ ವ್ಯಕ್ತಿತ್ವ, ಮನುಕುಲದ ಸೇವೆ-ರವಿ ಮುಂಗ್ಲಿಮನೆ:
ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಮಾತನಾಡಿ, ಜನರ ಶ್ರೇಷ್ಟ ಸಂಪತ್ತು ಎಂದರೆ ಅದು ಮಾನವನ ವ್ಯಕ್ತಿತ್ವ ಜೊತೆಗೆ ಮನುಕುಲದ ಸೇವೆ ಆಗಿದೆ. ದಿ.ಶ್ರೀನಾಥ್ ಆಚಾರ್ಯರವರು ಸಂಘಟನೆಗೆ ಸೇರಿಕೊಂಡು ಆ ಮೂಲಕ ಸಮಾಜ ಸೇವೆ ಮಾಡುತ್ತಾ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ತೋರಿಸಿಕೊಟ್ಟಿದ್ದಾರೆ ಹಾಗೆಯೇ ಸಿಝ್ಲರ್ ಪ್ರಸನ್ನ ಶೆಟ್ಟಿಯವರ ನೇತೃತ್ವದಲ್ಲಿ ಅವರ ತಂಡ ಸಮಾಜದಲ್ಲಿ ಉತ್ತಮ ಸೇವೆಗೈಯುವ ಮೂಲಕ ಮನುಕುಲದ ಸೇವೆಯನ್ನು ಮಾಡಿ ತೋರಿಸಿದ್ದಾರೆ ಎಂದರು.
ಯಾವುದೇ ಫಲಾಪೇಕ್ಷೆಯಿಲ್ಲದೆ ಸಿಝ್ಲರ್ ತಂಡ ಕಾರ್ಯನಿರ್ವಹಿಸುತ್ತಿದೆ-ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ:
ಪುತ್ತೂರು ನಗರಸಭಾ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ, ಯಾರಲ್ಲಿ ಫಲಾಪೇಕ್ಷೆಯಿಲ್ಲದ ಗುಣ ಇರುತ್ತದೋ ಅದರ ಸುತ್ತ ತಂಡ ರಚನೆ ಆಗುತ್ತದೆ ಎನ್ನುವುದಕ್ಕೆ ಸಿಝ್ಲರ್ ಪ್ರಸನ್ನ ಶೆಟ್ಟಿ ಉದಾಹರಣೆ. ಜನರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ, ಸಮಾಜಮುಖಿ ಕಾರ್ಯಗಳಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಗುಣ ಪ್ರಸನ್ನ ಶೆಟ್ಟಿಯವರ ತಂಡದ ಸದಸ್ಯರಲ್ಲಿ ಮನೆಮಾಡಿದೆ ಎಂದರು.
ಕ್ರೀಡಾಪಟುಗಳು ಪ್ರತಿಭೆಯನ್ನು ತೋರ್ಪಡಿಸುತ್ತಾ ಭವಿಷ್ಯ ಉಜ್ವಲವಾಗಲಿ-ಪ್ರಮೋದ್ ಕುಮಾರ್:
ಪುತ್ತೂರು ಪಿ.ಡಬ್ಲ್ಯೂ.ಡಿ ಇಂಜಿನಿಯರ್ ಪ್ರಮೋದ್ ಕುಮಾರ್ ಮಾತನಾಡಿ, ಕ್ರಿಕೆಟ್ಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸ್ಥಾನಮಾನವಿದೆ ಜೊತೆಗೆ ಅಸಂಖ್ಯ ಪ್ರೇಕ್ಷಕರನ್ನು ಸೆಳೆಯುವ ಗುಣ ಕೂಡ ಈ ಕ್ರಿಕೆಟ್ನಲ್ಲಿದೆ. ನಾವು ಬಾಲ್ಯದಿಂದಲೂ ಕ್ರಿಕೆಟ್ ಆಡಿಕೊಂಡು ಬೆಳೆಯುವ ಮೂಲಕ ಕ್ರಿಕೆಟ್ ಅನ್ನು ಆಸ್ವಾದಿಸುತ್ತಾ ಬಂದಿzವೆ. ಈ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುವ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ತೋರ್ಪಡಿಸುವ ಮೂಲಕ ಭವಿಷ್ಯ ಉಜ್ವಲವಾಗಲಿ ಎಂದರು.
ಪುತ್ತೂರು ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ನಗರಸಭಾ ಸದಸ್ಯರಾದ ಮನೋಹರ್ ಕಲ್ಲಾರೆ, ಯೂಸುಫ್ ಡ್ರೀಮ್ಸ್, ಮೆಸ್ಕಾಂ ಎಇಇ ರಾಮಚಂದ್ರ, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಪುತ್ತೂರು ಜುಮ್ಮಾ ಮಸೀದಿ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ ಎಂ.ಪೆರುವಾಯಿ, ಉದ್ಯಮಿ ಚಿಕ್ಕಪ್ಪ ನ್ಯಾಕ್ ಅರಿಯಡ್ಕ, ಸಂತ ಫಿಲೋಮಿನಾ ಕಾಲೇಜು ಕ್ಯಾಂಟೀನ್ನ ಆನಂದ ಶೆಟ್ಟಿ, ದಿ.ಶ್ರೀನಾಥ್ ಆಚಾರ್ಯ ಪತ್ನಿ ರಶ್ಮಿ ಶ್ರೀನಾಥ್ ಆಚಾರ್ಯ, ಸಹೋದರ ಪ್ರೇಮನಾಥ್ ಆಚಾರ್ಯ ಬೆಂಗಳೂರು, ಆರ್ಜಿಯುಎಚ್ಎಸ್ ಸೆನೆಟ್ ಸದಸ್ಯ ಡಾ.ಶರಣ್ ಶೆಟ್ಟಿ, ಕನ್ನಡ ಸ್ಪೋರ್ಟ್ಸ್ ಚಾನೆಲ್ನ ಕೋಟ ರಾಮಕೃಷ್ಣ ಆಚಾರ್ಯ, ಸುಳ್ಯ ಎಸಿಎಫ್ ಪ್ರವೀಣ್ ಶೆಟ್ಟಿ, ಪಂಜ ಆರ್ಎಫ್ಒ ಗಿರೀಶ್, ಎನ್ಎಸ್ಯುಐ ಫಾರೂಕ್ ಬಾಯಬೆ, ನಗರಸಭೆ ಮಾಜಿ ಸದಸ್ಯ ನವೀನ್ಚಂದ್ರ ನಾಕ್ ಸಹಿತ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪಂದ್ಯಾಟದ ಆಯೋಜಕ, ಸಿಝ್ಲರ್ ಗ್ರೂಪ್ಸ್ ಮಾಲಕ ಪ್ರಸನ್ನ ಕುಮಾರ್ ಶೆಟ್ಟಿ, ಸಾಮೆತ್ತಡ್ಕ ಯುವಕ ಮಂಡಲದ ಅಧ್ಯಕ್ಷ ರೋಶನ್ ರೆಬೆಲ್ಲೋ, ಕಾರ್ಯದರ್ಶಿ ಲೋಹಿತ್ ಪೆ.ಜೆ, ಕೋಶಾಧಿಕಾರಿ ಕವನ್ ನಾಕ್, ಹಿರಿಯರಾದ ಸೂರಜ್ ಶೆಟ್ಟೆ ಸಾಮೆತ್ತಡ್ಕರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಬಾಲಕೃಷ್ಣ ರೈ ಪೊರ್ದಾಲ್ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ಅಂಪೈರ್ ಮದನ್ ವಿಶಿಷ್ಟ ನೃತ್ಯ..ಪ್ರೇಕ್ಷಕರಿಂದ ಕರತಾಡನ…
ಮೈದಾನದ ಅಂಪೈರ್ಗಳಾಗಿ ಕಾರ್ಯ ನಿರ್ವಹಿಸುತ್ತಿರುವವವರ ಪೈಕಿ ಓರ್ವರಾದ ಉದ್ದುದ್ದ ಗಡ್ಡಧಾರಿ ಹಾಗೂ ಕೇಶರಾಶಿ ಹೊಂದಿರುವ ಮದನ್ ಮಡಿಕೇರಿರವರು ಬ್ಯಾಟುಗಾರ ಬಾರಿಸಿದ ಪ್ರತೀ ಬೌಂಡರಿ ಹಾಗೂ ಸಿಕ್ಸರ್ಗಳಿಗೆ ತನ್ನ ವಿಶಿಷ್ಟ ನೃತ್ಯ ಭಂಗಿಯಿಂದ ಮೈದಾನದ ನಾಲ್ಕು ಧಿಕ್ಕಿಗೂ ಬೌಂಡರಿ ಹಾಗೂ ಸಿಕ್ಸರ್ಗಳನ್ನು ಕೈಸನ್ನೆಯಿಂದ ತೋರಿಸುವ ಮೂಲಕ ನೋಡುಗರ ಗಮನಸೆಳೆದರಲ್ಲದೆ, ಪ್ರೇಕ್ಷಕರಿಂದ ಅದ್ಭುತ ಶಿಳ್ಳೆ ಹಾಗೂ ಚಪ್ಪಾಳೆಯ ಕರತಾಡನ ಈ ಸಂದರ್ಭದಲ್ಲಿ ವ್ಯಕ್ತವಾಗಿತ್ತು ಅಲ್ಲದೆ ಆಟಗಾರರಿಗೆ ಇನ್ನೂ ಹೆಚ್ಚಿನ ಬೌಂಡರಿ ಹಾಗೂ ಸಿಕ್ಸರ್ಗಳನ್ನು ಬಾರಿಸುವಂತೆ ಪ್ರಚೋದಿಸುವಂತಿತ್ತು.