ಉಪ್ಪಿನಂಗಡಿ: ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮಚಂದ್ರ ದೇವರ ಪ್ರಾಣ ಪ್ರತಿಷ್ಠೆಯ ಶುಭ ದಿನದಂದು ಈ ಭಾಗದ ದೇವಾಲಯ, ಭಜನಾ ಮಂದಿರಗಳಲ್ಲಿ ವಿಶೇಷ ಪ್ರಾರ್ಥನೆ, ಪೂಜೆ, ಭಜನಾ ಕಾರ್ಯಕ್ರಮಗಳು ಹಾಗೂ ಎಇಡಿ ಪರದೆಯಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆಯ ನೇರ ಪ್ರಸಾರ ವೀಕ್ಷಣೆ, ಅನ್ನಸಂತರ್ಪಣೆಗಳು ನಡೆದವು.
ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಮಹಾ ಪೂಜೆ, ನೇರ ಪ್ರಸಾರ ವೀಕ್ಷಣೆ ನಡೆಯಿತು. ಶ್ರೀ ಸಹಸ್ರಲಿಂಗೇಶ್ವರ ಹಾಗೂ ಶ್ರೀ ಶಾರದಾ ವನಿತಾ ಭಜನಾ ಮಂಡಳಿಯ ನೇತೃತ್ವದಲ್ಲಿ ವಿವಿಧ ಭಜನಾ ತಂಡಗಳ ಭಾಗೀಧಾರಿಕೆಯೊಂದಿಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಭಜನಾ ಸೇವೆ ನಡೆಯಿತು.
ದೇವಾಲಯದ ಪ್ರಧಾನ ಅರ್ಚಕ ಹರೀಶ್ ಉಪಾಧ್ಯಾಯ ಪ್ರಾರ್ಥನೆ ನೆರವೇರಿಸಿದರು. ಈ ಸಂದರ್ಭ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯರಾದ ಡಾ. ರಾಜಾರಾಮ್ ಕೆ.ಬಿ., ರಾಧಾಕೃಷ್ಣ ನಾಯಕ್, ಸವಿತಾ ಹರೀಶ್, ಹರಿರಾಮಚಂದ್ರ, ಪ್ರಮುಖರಾದ ಡಾ. ರಮ್ಯಾ ರಾಜಾರಾಮ, ಗೀತಾ ದಾಸರಮೂಲೆ, ಗೋಪಾಲಕೃಷ್ಣ ರೈ ಪೆರ್ನೆ, ದೇವದಾಸ ರೈ, ರೂಪೇಶ್ ಶೆಟ್ಟಿ ಅಲಿಮಾರ್, ಕೈಲಾರು ರಾಜಗೋಪಾಲ ಭಟ್, ಜನಾರ್ದನ ನೂಜ, ಸುಧಾಕರ ಶೆಟ್ಟಿ ಕೋಟೆ, ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ಸುರೇಶ್ ಅತ್ರೆಮಜಲು, ಉಷಾ ಚಂದ್ರ, ವಿದ್ಯಾಧರ ಜೈನ್, ಹರಿಪ್ರಸಾದ್ ಶೆಟ್ಟಿ, ಕಿಶೋರ್ ಜೋಗಿ, ಲೊಕೇಶ್ ಬೆತ್ತೋಡಿ, ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಉಪ್ಪಿನಂಗಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯ, ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಮುದ್ಯ ಪಂಚಲಿಂಗೇಶ್ವರ ದೇವಾಲಯ, ನೆಕ್ಕಿಲಾಡಿಯ ಶ್ರೀ ರಾಮ ಭಜನಾ ಮಂದಿರ ಸೇರಿದಂತೆ ಪರಿಸರದ ಎಲ್ಲಾ ದೇವಾಲಯ ಹಾಗೂ ಭಜನಾ ಮಂದಿರಗಳಲ್ಲಿ ವಿಶೇಷ ಪೂಜೆ , ಭಜನಾ ಸೇವೆಗಳು ನಡೆದವು. ಪೆರಿಯಡ್ಕದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಭಜನಾ ಕಾರ್ಯಕ್ರಮ ನಡೆದು, ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆಯ ನೇರ ಪ್ರಸಾರ ವೀಕ್ಷಣೆ ನಡೆಯಿತು. ಬಳಿಕ ಅನ್ನ ಸಂತರ್ಪಣೆಯಾಗಿ ಬಳಿಕ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ, ಗಿರೀಶ್ ರೈ ಕಕ್ಯೆಪದವು ಮತ್ತು ಶ್ರೀಮತಿ ಕಾವ್ಯಶ್ರೀ ಜಿ. ನಾಯಕ್ ಅವರ ಗಾನ ಮಾಧುರ್ಯದಲ್ಲಿ ಶ್ರೀ ರಾಮೋತ್ಸವದ ಯಕ್ಷ-ಗಾನ- ವೈಭವ ಕಾರ್ಯಕ್ರಮ ನಡೆಯಿತು.
ಅಟೋ ರಿಕ್ಷಾ ಚಾಲಕರ ಸೇವೆ:
5 ಶತಮಾನಗಳ ಹೋರಾಟ ಫಲಿಸಿದ, ಕನಸು ನನಸಾದ ಸಮಯದಲ್ಲಿ ಉಪ್ಪಿನಂಗಡಿ ಹಾಗೂ ಹಿರೇಬಂಡಾಡಿ ಪರಿಸರದ ಅಟೋ ಚಾಲಕರು ಹತ್ತು ಕಿ.ಮೀ. ವ್ಯಾಪ್ತಿಯ ಪ್ರಯಾಣವನ್ನು ಉಚಿತವಾಗಿ ಒದಗಿಸುವ ಮೂಲಕ ದಿನದ ಪ್ರಯಾಣಿಕರ ಸೇವೆಯನ್ನು ಶ್ರೀ ರಾಮನಿಗೆ ಸಮರ್ಪಿಸಿದರು. ಉಪ್ಪಿನಂಗಡಿಯ ಕುಲ್ದೀಪ್ ಸಪಲ್ಯ ಹಾಗೂ ಹಿರೆಬಂಡಾಡಿಯ ಹೊನ್ನಪ್ಪ ಗೌಡ ಪಂಚೇರು ಎಂಬಿಬ್ಬರು ಅಟೋ ಚಾಲಕರು ಉಚಿತ ಸೇವೆಯ ಮೂಲಕ ಶ್ರೀ ರಾಮನ ಸೇವೆ ಗೈದರು. ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆಯ ದಿನದಂದು ಬೆರಳೆಣಿಕೆ ಅಂಗಡಿ, ಹೊಟೇಲ್ಗಳು ತೆರೆಯಲ್ಪಟ್ಟದ್ದು ಬಿಟ್ಟರೆ, ಉಳಿದೆಲ್ಲಾ ಹಿಂದೂ ಬಾಂಧವರ ಅಂಗಡಿ, ಹೊಟೇಲ್ಗಳು ಮುಚ್ಚಲ್ಪಟ್ಟಿದ್ದವು. ಶಾಲೆಗಳಲ್ಲೂ ಕೂಡಾ ಮಕ್ಕಳ ಹಾಜರಾತಿ ಕಡಿಮೆಯಾಗಿತ್ತು. ಹೆಚ್ಚಿನವರು ತಮ್ಮ ತಮ್ಮ ವ್ಯಾಪ್ತಿಯ ದೇವಾಲಯ, ಭಜನಾ ಮಂದಿರಗಳಿಗೆ ಹೋಗಿ ಶ್ರೀ ರಾಮೋತ್ಸವವನ್ನು ಆಚರಿಸಿದರು.