ಪುತ್ತೂರು: ಕೊಳ್ತಿಗೆ ಗ್ರಾಮದ ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದ ಶ್ರೀ ದೇವರ ಸನ್ನಿಧಿಯಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಜ.20 ರಿಂದ ಆರಂಭಗೊಂಡು 23 ರ ತನಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಿತು.
ಜ.20 ರಂದು ಬೆಳಿಗ್ಗೆ ಉಗ್ರಾಣ ಮುಹೂರ್ತ ನಡೆದು ಭಕ್ತಾಧಿಗಳಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯುವ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು. ಜ.21 ರಂದು ಬೆಳಿಗ್ಗೆ ಆಶ್ಲೇಷ ಬಲಿಪೂಜೆ, ನಾಗನ ಕಟ್ಟೆಯಲ್ಲಿ ಕಲಶಾಭಿಷೇಕ, ತಂಬಿಲ ಸೇವೆ, ಶ್ರೀ ಮಹಾವಿಷ್ಣು ಆರಾಧನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಇದೇ ದಿನ ಬೆಳಿಗ್ಗೆ ಶ್ರೀ ಷಣ್ಮುಖದೇವ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಸಂಜೆ ದುಗ್ಗಳದಿಂದ ಶ್ರೀ ಉಳ್ಳಾಕ್ಲು ದೈವದ ಭಂಡಾರವು, ನಾಲಕದಿಂದ ಶ್ರೀ ರಾಜನ್ ದೈವ(ಶಿರಾಡಿ)ದ ಭಂಡಾರವು ಹೊರಟು ಶ್ರೀ ದೇವರ ಸನ್ನಿಧಿಗೆ ಆಗಮಿಸುವ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು. ರಾತ್ರಿ ಶ್ರೀ ದೇವರಿಗೆ ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ಪಲ್ಲಕ್ಕಿ ಉತ್ಸವ, ರಥೋತ್ಸವ, ಕಟ್ಟೆಪೂಜೆ, ಅಶ್ವತ್ಥ ಕಟ್ಟೆಪೂಜೆ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ಜ.22 ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಕಲಶಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ಪಲ್ಲಕ್ಕಿ ಉತ್ಸವ, ರಥೋತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ಬಳಿಕ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ ಬಳಿಕ ವೈಧಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ಇರ್ವೆರು ಉಳ್ಳಾಕ್ಲುರವರ ಭಂಡಾರ ದುಗ್ಗಳಕ್ಕೆ ನಿರ್ಗಮನ ಕಾರ್ಯಕ್ರಮ ನಡೆಯಿತು.
ರಾತ್ರಿ ಶ್ರೀ ದೇವರಿಗೆ ರಂಗಪೂಜೆ ಬಳಿಕ ವ್ಯಾಘ್ರ ಚಾಮುಂಡಿ, ವಾರಾಹಿ ದೈವದ ನೇಮೋತ್ಸವ, ಕಾಣಿಕೆ, ಹರಕೆ ಸಮರ್ಪಣೆ, ಪ್ರಸಾದ ವಿತರಣೆ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಜ.23 ರಂದು ಬೆಳಿಗ್ಗೆ ಶ್ರೀ ರಕ್ತೇಶ್ವರಿ, ಧೂಮ್ರ-ಧೂಮಾವತಿ ಮತ್ತು ಶಿರಾಡಿ ದೈವಗಳ ನೇಮ ನಡಾವರಿ, ಕಾಣಿಕೆ ಹರಕೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಊರ ಪರವೂರ ಸಾವಿರಕ್ಕೂ ಅಧಿಕ ಭಕ್ತಾಧಿಗಳು ಶ್ರೀ ದೇವರ ಅನ್ನಪ್ರಸಾದ ಸ್ವೀಕರಿಸಿದರು. ದೇವಳದ ಪ್ರಧಾನ ಅರ್ಚಕ ಜಯರಾಮ ಬಡೆಕಿಲ್ಲಾಯರವರು ವೈಧಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಉತ್ಸವ ಸಮಿತಿ ಅಧ್ಯಕ್ಷ ತೀರ್ಥಾನಂದ ಗೌಡ ದುಗ್ಗಳ, ಆಡಳಿತಾಧಿಕಾರಿ ಮಂಜುನಾಥ ಬಿ, ವ್ಯವಸ್ಥಾಪನಾ ಸಮಿತಿಯ ಪ್ರಭಾರ ಅಧ್ಯಕ್ಷ ನೇಮಿರಾಜ ಪಾಂಬಾರು ಹಾಗೂ ಉಪಸಮಿತಿ ಸದಸ್ಯರು, ಊರಿನ ಸಮಸ್ತ ಭಕ್ತಾಭಿಮಾನಿಗಳು, 1ಕವಳೆ, 4 ಸ್ಥಳಮನೆ ಮತ್ತು 16 ಬಾರಿಕೆ ಮನೆತನಗಳ ಮುಖ್ಯಸ್ಥರುಗಳು ಸೇರಿದಂತೆ ಊರಪರವೂರ ನೂರಾರು ಭಕ್ತಾಧಿಗಳು ಜಾತ್ರೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾದರು.
ಸಾಂಸ್ಕೃತಿಕ ಕಾರ್ಯಕ್ರಮ
ಜಾತ್ರೋತ್ಸವದ ಅಂಗವಾಗಿ ಜ.20 ರಂದು ಸಂಜೆ ಗಾನ ಸರಸ್ವತಿ ಸಂಗೀತ ಕಲಾ ಶಾಲೆ ನೆಹರುನಗರ ಪುತ್ತೂರು ಇವರಿಂದ ಸಂಗೀತ ಕಾರ್ಯಕ್ರಮ, ಜ.21 ರಂದು ಸಂಜೆ ಸಮರ ಸೌಗಂಧಿಕಾ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ನೂರಾರು ಭಕ್ತಾಧಿಗಳು, ಕಲಾಭಿಮಾನಿಗಳು ಕಾರ್ಯಕ್ರಮ ವೀಕ್ಷಣೆ ಮಾಡಿದರು.