ಪುತ್ತೂರು: ಈಗಾಗಲೇ ಜನ ಒಪ್ಪಿರುವ ನಾಯಕ ವಿಜಯೇಂದ್ರ ಅವರು ರಾಜ್ಯದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಹೊಸ ತಂಡ ರಚನೆಯಾಗಿದೆ. ಜಿಲ್ಲೆಯ ಅಧ್ಯಕ್ಷರ ಘೋಷಣೆಯೂ ಆಗಿದೆ ತಿಂಗಳ ಅಂತ್ಯದೊಳಗೆ ಬಿಜೆಪಿ ಜಿಲ್ಲೆಯ ಎಲ್ಲಾ ಮಂಡಲ, ಮೋರ್ಚಾಗಳ ತಂಡ ರಚನೆಯಾಗಲಿದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಹೇಳಿದರು.
ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಬಳಿಕ ಅವರು ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಮಾತನಾಡಿದರು. ಎಲ್ಲಾ ತಂಡ ರಚನೆಯಾದ ಬಳಿಕ ನಮ್ಮೆಲ್ಲರ ಗುರಿ ಒಂದೇ. ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯನ್ನಾಗಿ ಚುನಾಯಿತಗೊಳಿಸುವುದು ಎಂದ ಅವರು ಹೊಸ ತಂಡ ಮತ್ತು ಹಿಂದಿದ್ದ ತಂಡ ಜೊತೆಯಾಗಿ ಚುನಾವಣೆಯಲ್ಲಿ ಕೆಲಸ ಮಾಡಲಿದ್ದೇವೆ. ಹಾಗಾಗಿ ಎಲ್ಲರೂ ಸಂಕಲ್ಪ ಇಟ್ಟುಕೊಂಡು ಕೆಲಸವನ್ನು ಮುಂದಿನ ಎರಡು ಮೂರು ತಿಂಗಳು ಮಾಡಲಿದ್ದೇವೆ. ಮುಂದಿನ ಚುನಾವಣೆ ದೃಷ್ಟಿಯಿಂದ ನಮ್ಮ ಎಲ್ಲಾ ಸಂಘಟನೆ ಪೂರಕವಾಗಿ ಹಲವಾರು ಕಾರ್ಯಕ್ರಮ ಕೇಂದ್ರದಿಂದ ರಾಜ್ಯಕ್ಕೆ ಬರಲಿದೆ. ಆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಬೂತ್ ಮಟ್ಟದಲ್ಲಿ ಮಾಡಲು ನಮ್ಮ ಸಂಘಟನೆ ಸಜ್ಜುಗೊಳಿಸುವ ಅವಶ್ಯಕತೆ ಇದೆ. ಈ ದೃಷ್ಟಿಯಿಂದ ಹೊಸ ತಂಡಗಳು ರಚನೆಯಾಗುತ್ತದೆ. ಹೀಗೆ ಹೊಸ ತಂಡ ಮತ್ತು ಹಿಂದೆಯಿದ್ದ ತಂಡ ಎಲ್ಲರು ಒಟ್ಟಾಗಿ ಸೇರಿ ಚುನಾವಣೆ ದೃಷ್ಟಿಯಿಂದ ಕೆಲಸ ಮಾಡಲಿದ್ದೇವೆ ಎಂದರು. ಇವತ್ತು ಸುಬ್ರಹ್ಮಣ್ಯದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಹೋಗುವ ವೇಳೆ ಪುತ್ತೂರು ಮಹಾಲಿಂಗೇಶ್ವರ ದೇವರ ದರ್ಶನ ಪಡೆದು ಸಹಜವಾಗಿ ಪಕ್ಷದ ಕಚೇರಿಗೆ ಭೇಟಿ ನೀಡಿದ್ದೇನೆ ಎಂದರು. ಬಿಜೆಪಿ ಜಿಲ್ಲಾ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.