ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ, ಜಾತ್ರೋತ್ಸವ ಹಾಗೂ ಕ್ಷೇತ್ರದ ದೈವಗಳ ನೇಮೋತ್ಸವವು ಜ.26ರಂದು ನೆರವೇರಿತು. ವೇ.ಮೂ ಸುರೇಶ ನಕ್ಷತ್ರಿತ್ತಾಯರವರ ಉಪಸ್ಥಿತಿಯಲ್ಲಿ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯರವರ ನೇತೃತ್ವದಲ್ಲಿ ಜ.26ರಂದು ವಿವಿಧ ವೈದಿಕ ಹಾಗೂ ತಾಂತ್ರಿಕ ವಿಧಾನಗಳೊಂದಿಗೆ ನಡೆದ ಜಾತ್ರೋತ್ಸವದಲ್ಲಿ ಜ.25ರಂದು ಸಂಜೆ ಹಸಿರು ಹೊರೆಕಾಣಿಕೆ, ಉಗ್ರಾಣ ಪೂಜೆ, ದುರ್ಗಾಪೂಜೆ, ಶ್ರೀ ದೇವರಿಗೆ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಜ.26ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಪತಿಹೋಮ, ಶ್ರೀ ದೇವರಿಗೆ ಕಲಶ ಪೂಜೆ, ಕಲಶಾಭಿಷೇಕ, ನಾಗತಂಬಿಲ, ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ವಿವಿಧ ಸಾಮಾಜಿಕ, ರಾಜಕೀಯ, ಧಾರ್ಮಿಕ ಸಂಘ ಸಂಸ್ಥೆಗಳು ಮುಖಂಡರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಉತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾದಿಗಳು ಉತ್ಸವದಲ್ಲಿ ಭಾಗವಹಿಸಿದ್ದರು.
ಸಂಜೆ ದೇವರ ದರ್ಶನ ಬಲಿ:
ಜಾತ್ರೋತ್ಸವದಲ್ಲಿ ಸಂಜೆ ಕ್ಷೇತ್ರದ ದೈವಗಳಾದ ಧೂಮಾವತಿ ಹಾಗೂ ಗುಳಿಗ ದೈವಗಳ ಭಂಡಾರ ತೆಗೆದ ಬಳಿಕ ಶ್ರೀ ದೇವರ ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದ ಬಳಿಕ ಧೂಮಾವತಿ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ ಎಂದು ದೇವಸ್ಥಾನ ಹಾಗೂ ಉತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.