ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ದೀಪ ಪ್ರದಾನ ಕಾರ್ಯಕ್ರಮ

0

ಬದುಕಿನಲ್ಲಿ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡಾಗ ಜೀವನದ ಪಯಣ ಸುಗಮ- ಡಾ. ಶ್ರೀಧರ ಎಚ್ ಜಿ

ಪುತ್ತೂರು: ಬದುಕಿನಲ್ಲಿ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡಾಗ ಜೀವನದ ಪಯಣ ಸುಗಮವಾಗುತ್ತದೆ. ಎದುರಾಗುವ ಆಪತ್ತುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಪರಿಹರಿಸುವಲ್ಲಿ ವ್ಯಕ್ತಿತ್ವದ ಗಟ್ಟಿತನ ಪ್ರಕಟಗೊಳ್ಳುತ್ತದೆ. ಧೈರ್ಯವನ್ನು ಕಳೆದುಕೊಳ್ಳದೆ ಛಲದಿಂದ ಮುನ್ನಡೆದರೆ ವ್ಯಕ್ತಿ ಮೌಲ್ಯದ ಉತ್ತಮ ಪ್ರತಿನಿಧಿಯಾಗಿ ಮೂಡಿ ಬರಲು ಸಾಧ್ಯವಾಗುತ್ತದೆ ಎಂದು ಪುತ್ತೂರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ) ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ.ಶ್ರೀಧರ ಎಚ್ ಜಿ ಹೇಳಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ದೀಪ ಪ್ರದಾನ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಗೊಡುಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಕಲಿಯುವ ವಿಚಾರಗಳು, ಬೆಳೆಸಿಕೊಳ್ಳುವ ಮೌಲ್ಯಗಳು, ಪಡೆಯುವ ವಿದ್ಯೆ ಎಲ್ಲವೂ ಮುಂದಿನ ಬಾಳಿನಲ್ಲಿ ದಾರಿದೀಪವಾಗುವುದು. ವಿದ್ಯಾರ್ಥಿಗಳು ತಮ್ಮಲ್ಲಿನ ಪ್ರತಿಭೆಯನ್ನು ಗೌರವಿಸಿ, ಪ್ರತಿಭೆಯನ್ನು ಸಮಾಜಕ್ಕೆ ತೋರ್ಪಡಿಸುವಂತಾಗಬೇಕು. ನಮ್ಮ ಭವಿಷ್ಯವನ್ನು ನಾವೇ ನಿರ್ಧರಿಸಬೇಕು. ಕಷ್ಟಗಳು ಬಂದಾಗ ಎದೆಗುಂದದೆ ಪ್ರಯತ್ನವನ್ನು ನಿರಂತರವಾಗಿ ಮುಂದುವರಿಸಿದಾಗ ತಮ್ಮ ಗುರಿಯನ್ನು ಸಾಧಿಸಲು ಸಾಧ್ಯ. ಪಂಚೇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಉತ್ತಮ ಗುರಿಯ ಕಡೆಗೆ ವಿದ್ಯಾರ್ಥಿಗಳು ಗಮನ ಹರಿಸಬೇಕು. ಪಠ್ಯವನ್ನು ಮೀರಿದ ಜೀವನ ಪಾಠವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಕಠಿಣ ಪರಿಸ್ಥಿತಿಯನ್ನು ಎದುರಿಸುವ ಇಚ್ಛಾಶಕ್ತಿ, ಆತ್ಮಸ್ಥೈರ್ಯಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯೆ, ವಿನಯ, ರಾಷ್ಟ್ರಪ್ರಜ್ಞೆಗಳನ್ನು ಮೈಗೂಡಿಸಿಕೊಂಡು ಸಮಾಜವು ಗುರುತಿಸುವಂಥ ಕಾರ್ಯಗಳನ್ನು ಕೈಗೊಳ್ಳಬೇಕು. ಕಾಲೇಜಿನಲ್ಲಿ ಕಲಿತ ಪ್ರತಿಭಾನ್ವಿತ ಕುಡಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಬೇರೆ ಬೇರೆ ಕ್ಷೇತ್ರಗಳಲ್ಲಿ ತನ್ನತನದ ಛಾಪು ಒತ್ತುವುದರೊಂದಿಗೆ ದೇಶದ ಭವಿಷ್ಯವನ್ನು ಉಜ್ವಲಗೊಳಿಸಬೇಕು. ಬದಲಾಗುತ್ತಿರುವ ಜಗತ್ತಿನ ವೇಗಕ್ಕೆ ಸರಿಯಾಗಿ ನಾವು ಬದಲಾಗದಿದ್ದರೆ ಬದಲಾವಣೆಗಳು ನಮ್ಮನ್ನು ಬದಲಾಯಿಸಿಬಿಡುತ್ತದೆ. ಕಾಲೇಜಿನಲ್ಲಿ ಕಲಿತ ವಿದ್ಯಾಲಯದ ಚಿಂತನೆಯನ್ನು ದೈನಂದಿನ ಬದುಕಿನಲ್ಲಿ ಅನುಷ್ಠಾನಗೊಳಿಸಬೇಕು. ಉತ್ತಮ ನಾಗರೀಕತೆಯ ಮೂಲಕ ಇನ್ನೊಬ್ಬರಿಗೆ ಮಾದರಿಯಾಗಿ ಬದುಕಬೇಕು ಎಂದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಮಾತನಾಡಿ ವಿದ್ಯಾರ್ಥಿಗಳು ತಮ್ಮಲ್ಲಿನ ಸೋಮರಿತನವನ್ನು ಬಿಟ್ಟು ಸತತ ಅಧ್ಯಯನದ ಮೂಲಕ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮಲ್ಲಿನ ದೌರ್ಬಲ್ಯದಿಂದ ಹೊರಬಂದು ಭಾವನಾತ್ಮಕ ಸ್ಥಿರತೆಯನ್ನು ಗಟ್ಟಿ ಮಾಡಿಕೊಂಡಾಗ ನಮ್ಮಲ್ಲಿನ ಶಕ್ತಿಯು ಹೊರಹೊಮ್ಮಲು ಸಾಧ್ಯವಾಗುತ್ತದೆ. ಯಾವುದೇ ಕ್ಷೇತ್ರವಾದರೂ ಅದನ್ನು ಆರಿಸಿ ಸಾಧನೆ ಮಾಡುತ್ತಾ ಮುಂದುವರೆಯಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಗೋಪಾಲಕೃಷ್ಣ ಭಟ್ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಕಲಿಯುವ ವಿಚಾರಗಳು, ಬೆಳೆಸಿಕೊಳ್ಳುವ ಮೌಲ್ಯಗಳು,ಪಡೆಯುವ ವಿದ್ಯೆ ಎಲ್ಲವೂ ಮುಂದಿನ ಬಾಳಿನಲ್ಲಿ ದಾರಿದೀಪವಾಗುವುದು. ತಮ್ಮ ಯಶಸ್ಸಿಗೆ ಕಾರಣರಾದ ವ್ಯಕ್ತಿಗಳನ್ನು ನಾವು ಎಂದೂ ಮರೆಯಬಾರದು. ಶಿಕ್ಷಣದ ಎಲ್ಲ ಆಯಾಮಗಳನ್ನು ಗ್ರಹಿಸುವ ಸಾಮರ್ಥ್ಯವನ್ನು ಪಡೆಯಬೇಕು ಎಂದರು.

ದೀಪ ಪ್ರದಾನ ಕಾರ್ಯಕ್ರಮ:
ಕಾರ್ಯಕ್ರಮದಲ್ಲಿ ಜ್ಞಾನಸ್ವರೂಪಿಯಾದ ದೀಪವನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು. ಹಿರಿಯ ವಿದ್ಯಾರ್ಥಿಗಳ ಮಾರ್ಗದರ್ಶನದೊಂದಿಗೆ ಕಿರಿಯ ವಿದ್ಯಾರ್ಥಿಗಳು ಮುನ್ನಡೆಯಬೇಕೆಂಬುದು ಈ ಕಾರ್ಯಕ್ರಮದ ಆಶಯವಾಗಿತ್ತು. ಬಳಿಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಅನಿಕಾ, ನಿಶ್ಮಿತಾ, ಮಿಥುನ್, ಸದಾನಂದ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಕಾಲೇಜಿನ ಉಪನ್ಯಾಸಕರಾದ ಶ್ರೀಧರ ಶೆಟ್ಟಿಗಾರ್ ಮತ್ತು ಕವಿತಾ ತಮ್ಮ ಹಿತನುಡಿಗಳ ಮೂಲಕ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ಕೃಷ್ಣ ಪ್ರಕಾಶ ಬಳ್ಳಂಬಟ್ಟು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕಿ ದೀಕ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿ ಮುರಳಿ ಪಿ ಜಿ ವಂದಿಸಿದರು.

LEAVE A REPLY

Please enter your comment!
Please enter your name here