ಕಾಣಿಯೂರು: ದರ್ಬೆ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪ ರಸ್ತೆಯ ಸನಿಹದಲ್ಲಿ ಹಾದು ಹೋಗುತ್ತಿರುವ ಅಪಾಯಕಾರಿ ಹೊಳೆಗೆ ಕೊನೆಗೂ ತಡೆಬೇಲಿ ನಿರ್ಮಾಣಗೊಂಡಿದೆ. ಆ ಮೂಲಕ ಸಂಬಂಧಪಟ್ಟ ಇಲಾಖೆಯವರು ಸ್ಪಂದಿಸಿದ್ದಾರೆ. ಕಾಣಿಯೂರು ಸಮೀಪ ಕೂಡುರಸ್ತೆ ಬಾಂತೈ ಎಂಬಲ್ಲಿ ರಸ್ತೆಯ ಸೇತುವೆಯ ಕೆಳಭಾಗದಲ್ಲಿ ಹೊಳೆಯಲ್ಲಿ ನೀರು ಹರಿದು ಹೋಗುತ್ತಿದ್ದು, ಸೇತುವೆ ಸಮೀಪ ಸಮರ್ಪಕ ತಡೆಬೇಲಿ ಇಲ್ಲದೇ ಇಲ್ಲಿ ಅಪಾಯದ ಸ್ಥಿತಿಯಲ್ಲಿತ್ತು. ಅಲ್ಲದೇ ಮೂರು ಮಾರ್ಗ ಸೇರುವ ರಸ್ತೆಯೂ ಇದಾಗಿದ್ದು, ಸೇತುವೆ ಸಮೀಪ ಅಪಾಯಕಾರಿ ತಿರುವುಗಳು ವಾಹನ ಸವಾರರ ಪಾಲಿಗೆ ಕಂಟಕವಾಗಿ ಕಾಡುತ್ತಿತ್ತು. ವಾಹನಗಳು ಎದುರು ಬದುರಾಗುವ ಸಂದರ್ಭದಲ್ಲಿ ಸೈಡ್ ಕೊಡಲು ಚಾಲಕರು ಭಯಪಡುವ ಸನ್ನಿವೇಶ ಇಲ್ಲಿಯದ್ದಾಗಿತ್ತು, ರಾಜ್ಯ ಹೆದ್ದಾರಿಯಾಗಿರುವ ಈ ರಸ್ತೆಯ ಮೂಲಕ ಅದೆಷ್ಟೋ ವಾಹನಗಳು ಸಂಚಾರಿಸುತ್ತಿದ್ದು, ರಸ್ತೆಗೆ ಹೊಂದಿಕೊಂಡೇ ಹೊಳೆ ಇರುವ ಕಾರಣ ಸ್ವಲ್ಪ ಎಚ್ಚರ ತಪ್ಪಿದ್ದರೂ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿವೆ. ಅಪಾಯಕಾರಿಯಾಗಿರುವ ಈ ರಸ್ತೆಯಲ್ಲಿ ಯಾವುದೇ ವಾಹನಗಳು ಸೈಡ್ ಕೊಡುಂವತಿಲ್ಲ, ಓವರ್ಟೇಕ್ ಮಾಡುವಂತಿಲ್ಲ. ಈ ಪ್ರದೇಶಗಳಲ್ಲಿ ಹಲವು ಅಪಘಾತ ಸನ್ನಿವೇಶಗಳು ನಡೆದಿದ್ದು, ಅಪಾಯಕಾರಿ ಸ್ಥಳವಾಗಿರುವುದರಿಂದ ಇಲ್ಲಿಗೆ ತಡೆಬೇಲಿಯ ಅಗತ್ಯವಿತ್ತು. ಅತ್ಯಂತ ಅಪಾಯಕಾರಿ ಸ್ಥಳವಾದ ಇಲ್ಲಿ ಪ್ರಯಾಣಿಕರು ಆತಂಕದಿಂದಲೇ ಪ್ರಯಾಣಿಸುತ್ತಿದ್ದು, ಇದೀಗ ತಡೆಬೇಲಿ ನಿರ್ಮಾಣದಿಂದ ಸಮಸ್ಯೆ ಬಗೆಹರಿದಿವೆ.
ಸುದ್ದಿ ವರದಿ ಫಲಶೃತಿ
ದರ್ಬೆ- ಕಾಣಿಯೂರು- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪ ಕೂಡುರಸ್ತೆ ಬಾಂತೈ ಎಂಬಲ್ಲಿಯ ರಸ್ತೆಯ ಸೇತುವೆಯ ಬದಿಯಲ್ಲಿಯೇ ಅಪಾಯಕಾರಿ ಹೊಳೆಯೊಂದಿದ್ದು, ಸಮರ್ಪಕವಾದ ತಡೆಗೋಡೆಯಿಲ್ಲದೇ ಸಾರ್ವಜನಿಕರಲ್ಲಿ ಆತಂಕ ಉಂಟಾಗಿರುವ ಬಗ್ಗೆ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಕೆಲ ದಿನಗಳ ಹಿಂದೆ ವರದಿ ಪ್ರಕಟಗೊಂಡಿತ್ತು.