ಉಪ್ಪಿನಂಗಡಿ: ಹೆಲ್ಮೆಟ್ ಕಳವು ದೂರು-ಮತ್ತೆ ಕಳವಿಗೆ ಬಂದಾತ ಪೊಲೀಸ್ ವಶ

0

ಉಪ್ಪಿನಂಗಡಿ: ಬ್ಯಾಂಕ್ ಶೆಡ್‌ನಲ್ಲಿ ನಿಲ್ಲಿಸಿದ್ದ ಬೈಕ್‌ನಲ್ಲಿ ತೂಗು ಹಾಕಿದ್ದ ಹೆಲ್ಮೆಟ್‌ನ್ನು ಕಳವು ಮಾಡಿರುವ ಬಗ್ಗೆ ಇಲ್ಲಿನ ಸಹಕಾರಿ ವ್ಯವಸಾಯಿಕ ಸಂಘದ ಸಿಬ್ಬಂದಿ ದೇವರಾಜ್ ಹೆಚ್.ಯು. ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.


ದೇವರಾಜ್ ಅವರು ಜ.26ರಂದು ಬೆಳಗ್ಗೆ 9.30ಕ್ಕೆ ಸಂಘದ ಶೆಡ್‌ನಲ್ಲಿ ತನ್ನ ಬೈಕ್ ನಿಲ್ಲಿಸಿ ಹೆಲ್ಮೆಟನ್ನು ಬೈಕ್‌ನ ಹ್ಯಾಂಡಲ್‌ನಲ್ಲಿ ತೂಗು ಹಾಕಿ ಸಂಘದ ಅಮೃತ ಮಹೋತ್ಸವದ ಪೂರ್ವಭಾವಿ ತಯಾರಿಯ ಕೆಲಸಕ್ಕೆ ಹೋಗಿದ್ದು, ಕೆಲಸ ಮುಗಿಸಿ ಸಂಜೆ 4.30ಕ್ಕೆ ಬೈಕ್ ನಿಲ್ಲಿಸಿದ್ದಲ್ಲಿಗೆ ಬಂದಾಗ ಬೈಕ್‌ನಲ್ಲಿ ತೂಗು ಹಾಕಿದ್ದ ಹೆಲ್ಮೆಟ್ ಕಳವಾಗಿರುವುದು ಕಂಡುಬಂದಿದೆ. ಬಳಿಕ ಸಂಸ್ಥೆಯ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಕೆಎಲ್ 14, ಜೆ 7569 ನಂಬರ್‌ನ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬರು ಹೆಲ್ಮೆಟ್ ಕಳವುಗೈದ ಬಗ್ಗೆ ಸಂಶಯವಿದೆ ಎಂದು ದೂರು ನೀಡಿದ್ದಾರೆ.


ಮತ್ತೆ ಕದಿಯಲು ಬಂದು ಸಿಕ್ಕಿ ಬಿದ್ದ ಕಳ್ಳ:
ಹೆಲ್ಮೆಟ್ ಕಳವು ಪ್ರಕರಣದ ಬಗ್ಗೆ ದೂರು ನೀಡಿದ ಬೆನ್ನಿಗೆಯೇ ಜನವರಿ 29 ರಂದು ಮತ್ತೆ ಬ್ಯಾಂಕ್ ವಠಾರಕ್ಕೆ ಬಂದಿದ್ದ ಹೆಲ್ಮೆಟ್ ಕಳ್ಳನನ್ನು ಹಿಡಿದು ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೊಪ್ಪಿಸಿದ್ದಾರೆ. ಪ್ರಾರಂಭದಲ್ಲಿ ತಾನು ಕಳ್ಳತನವನ್ನು ಮಾಡಿಲ್ಲ ಎಂದು ವಾದಿಸಿದ ಈ ಕಳ್ಳ ಬಳಿಕ ತಾನು ಕಳವು ಮಾಡಿದ್ದ 9 ಹೆಲ್ಮೆಟ್‌ಗಳನ್ನು ಪೊಲೀಸರಿಗೊಪ್ಪಿಸಿರುವುದಾಗಿ ತಿಳಿದು ಬಂದಿದೆ. ಕಳವು ಮಾಡಿರುವ ಹೆಲ್ಮೆಟ್ ಗಳನ್ನು ಬೀದಿ ಬದಿಯ ಹೆಲ್ಮೆಟ್ ವ್ಯಾಪಾರಿಗಳಿಗೆ ಮಾರಾಟ ಮಾಡುವುದು ಈ ಕಳ್ಳನ ದಿನ ನಿತ್ಯದ ಕಾಯಕವಾಗಿದೆ ಎಂದು ತಿಳಿದು ಬಂದಿದೆ. ದೇವರಾಜ್ ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here