





ದೈವಗಳನ್ನು ಬೆಳಕಿಗೆ ತರುವುದರಿಂದ ಊರಿಗೆ ಸುಭೀಕ್ಷೆ ಬರುತ್ತದೆ: ಶ್ರೀ ಲಕ್ಷ್ಮೀಶ ತಂತ್ರಿ
ಕಷ್ಟಕ್ಕೆ ಸ್ಪಂದಿಸುವುದೇ ದೇವರ ಸೇವೆಗೆ ಸಮ: ಕಿಶೋರ್ ಕುಮಾರ್ ಪುತ್ತೂರು
ಭಾರತದಲ್ಲೇ ದೈವಗಳ ನೆಲೆಯಾದ ಪುಣ್ಯಭೂಮಿ ತುಳುನಾಡು: ನಳಿನ್ ಕುಮಾರ್ ಕಟೀಲ್
ಊರವರನ್ನು ಒಟ್ಟುಗೂಡಿಸಿಗೊಂಡು ಧರ್ಮ ಕಾರ್ಯ ನಡೆದಿದೆ: ಸಹಜ್ ರೈ ಬಳಜ್ಜ
ನಂಬಿಕೆ, ಶ್ರದ್ಧೆ ಇದ್ದಾಗ ಬದುಕು ಪರಿಪೂರ್ಣ: ಅರುಣ್ ಕುಮಾರ್ ಪುತ್ತಿಲ
ದೈವಗಳ ಪ್ರತಿಷ್ಠೆಯ ಮೂಲಕ ನಾಡಿಗೆ ಹೊಸ ಚೈತನ್ಯ: ತ್ರಿವೇಣಿ ಪಲ್ಲತ್ತಾರು
ಪ್ರೀತಿ, ವಿಶ್ವಾಸ, ಒಗ್ಗಟ್ಟು ಇದು ನಮ್ಮಲ್ಲಿ ಅತೀ ಮುಖ್ಯ: ಭವಾನಿ ಬಿ.ಆರ್
ದೇಶ, ಧರ್ಮಕ್ಕಾಗಿ ನಾವೆಲ್ಲರೂ ಒಟ್ಟು ಸೇರಬೇಕಾಗಿದೆ: ಕುಂಬ್ರ ದುರ್ಗಾಪ್ರಸಾದ್ ರೈ
ದೈವ ಶಕ್ತಿಗಳಿಂದ ಹಿಂದೂ ಸಮಾಜ ಉಳಿದಿದೆ: ಕೆ.ಸಂಜೀವ ಪೂಜಾರಿ ಕೂರೇಲು







ಪುತ್ತೂರು: ಊರಿನ ಜನರನ್ನು ಒಟ್ಟುಸೇರಿಸಿಕೊಂಡು ಅಜೀರ್ಣಾವಸ್ಥೆಯಲ್ಲಿದ್ದ ದೈವ ಶಕ್ತಿಗಳನ್ನು ಬೆಳಕಿಗೆ ತರುವ ಕೆಲಸ ಆಗಿದೆ. ಇದರಿಂದ ಈ ಊರಿಗೆ, ನಾಡಿಗೆ ಸುಭೀಕ್ಷೆ ಪ್ರಾಪ್ತಿಯಾಗುತ್ತದೆ. ಇಂತಹ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಸರ್ವರಿಗೂ ಶ್ರೀ ದೈವಗಳ ಅನುಗ್ರಹ ಇರಲಿ, ಈ ಊರು ಸಮೃದ್ಧಿಯನ್ನು ಕಾಣಲಿ ಎಂದು ಬ್ರಹ್ಮಶ್ರೀ ಕೆಮ್ಮಿಂಜೆ ಶ್ರೀ ಲಕ್ಷ್ಮೀಶ ತಂತ್ರಿಯವರು ಆಶೀರ್ವಚನ ನೀಡಿದರು.

ಅವರು ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲುವಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ರಕ್ತೇಶ್ವರಿ ಶ್ರೀ ಪಂಜುರ್ಲಿ ಪರಿವಾರ ದೈವಗಳ ಸಾನಿಧ್ಯದಲ್ಲಿ ಶ್ರೀ ರಕ್ತೇಶ್ವರಿ, ಶ್ರೀ ಪಂಜುರ್ಲಿ, ಶ್ರೀ ಬೈರವ ದೈವ ಸೇರಿದಂತೆ ಸಪರಿವಾರ ದೈವಗಳ ಶಿಲಾ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ನ.7ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಭಾರತದಲ್ಲೇ ದೈವಗಳ ನೆಲೆಯಾದ ಪುಣ್ಯಭೂಮಿ ತುಳುನಾಡು: ನಳಿನ್ ಕುಮಾರ್ ಕಟೀಲ್
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ರವರು ಮಾತನಾಡಿ, ಜಗತ್ತಿನಲ್ಲಿ ದೇವ ಭೂಮಿ, ದೇವ ನಿರ್ಮಿತ ಭೂಮಿ ಇದ್ದರೆ ಅದು ಭಾರತ ದೇಶ, ಈ ಭಾರತ ದೇಶದಲ್ಲಿ ದೈವ ದೇವರುಗಳ ಆರಾಧನೆಯ ಅತ್ಯಂತ ಪುಣ್ಯ ಭೂಮಿ ಇದ್ದರೆ ನಮ್ಮ ತುಳುನಾಡು ಆಗಿದೆ.ನಾಗಾರಾಧನೆ, ದೈವರಾಧನೆ, ದೇವಾರಾಧನೆಯ ಮೂಲಕ ನಮ್ಮನ್ನೆಲ್ಲಾ ದೈವಗಳು ರಕ್ಷಣೆ ಮಾಡುತ್ತಿವೆ ಎಂದು ನಂಬಿದವರು ತುಳುವರು ಆಗಿದ್ದಾರೆ. ಈ ಭೂಮಿ ಹುಟ್ಟುವಾಗಲೆ ಹುಟ್ಟಿಕೊಂಡ ದೈವ ಶ್ರೀ ರಕ್ತೇಶ್ವರಿ ದೈವ ಆಗಿದೆ. ಇಂತಹ ರಕ್ತೇಶ್ವರಿ ದೈವದ ಪ್ರತಿಷ್ಠೆ ಇಲ್ಲಿ ಆಗಿರುವುದು ಈ ಭೂಮಿಗೆ ಈ ಊರಿಗೆ ಅತ್ಯಂತ ಪುಣ್ಯದ ಕೆಲಸ ಆಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಕಷ್ಟಕ್ಕೆ ಸ್ಪಂದಿಸುವುದೇ ದೇವರ ಸೇವೆಗೆ ಸಮ : ಕಿಶೋರ್ ಕುಮಾರ್ ಪುತ್ತೂರು
ಅತಿಥಿಗಳಾಗಿ ವಿಧಾನ ಪರಿಷತ್ತು ಸದಸ್ಯ ಕಿಶೋರ್ ಕುಮಾರ್ ಪುತ್ತೂರುರವರು ಮಾತನಾಡಿ, ಹಿಂದೂ ಸಮಾಜವನ್ನು ಒಟ್ಟುಗೂಡಿಸುವ ಮೂಲಕ ಜನರಿಗೆ ಧರ್ಮದ ಶಕ್ತಿ ತುಂಬಿಸುವ ಕೆಲಸ ಬ್ರಹ್ಮಕಲಶೋತ್ಸವಗಳಿಂದ ಆಗುತ್ತಿದೆ.ಕೇಸರಿ ಶಾಲು ತ್ಯಾಗದ ಸಂಕೇತವಾಗಿದ್ದು ಇದನ್ನು ಹಾಕಿಕೊಂಡ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಎತ್ತಿತೋರಿಸುತ್ತದೆ ಎಂದ ಕಿಶೋರ್ ಕುಮಾರ್ರವರು ಯಾರು ಕಷ್ಟದಲ್ಲಿದ್ದಾರೋ ಅವರಿಗೆ ನಮ್ಮಿಂದ ಸಾಧ್ಯವಾಗುವ ಸಹಾಯವನ್ನು ಮಾಡಿದಾಗ ದೇವರ ಅನುಗ್ರಹ ಖಂಡಿತ ಪ್ರಾಪ್ತಿಯಾಗುತ್ತದೆ. ಕಷ್ಟ ಯಾರನ್ನೂ ಬಿಟ್ಟಿಲ್ಲ ಒಂದು ತುತ್ತಿನ ಊಟಕ್ಕೂ ಇಲ್ಲಿ ಕಷ್ಟಪಡುವವರಿದ್ದಾರೆ ಆದ್ದರಿಂದ ಕಷ್ಟಕ್ಕೆ ಸ್ಪಂದಿಸುವುದು ಕೂಡ ದೇವರ ಸೇವೆಗೆ ಸಮವಾಗಿದೆ ಎಂದು ಅವರು ಹೇಳಿದರು.
ಊರವರನ್ನು ಒಟ್ಟುಗೂಡಿಸಿಗೊಂಡು ಧರ್ಮ ಕಾರ್ಯ ನಡೆದಿದೆ: ಸಹಜ್ ರೈ ಬಳಜ್ಜ
ವಿಜಯ ಸಾಮ್ರಾಟ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷ, ಉದ್ಯಮಿ ಸಹಜ್ ರೈ ಬಳಜ್ಜ ಮಾತನಾಡಿ, ಪರ್ಪುಂಜ, ರಾಮಜಾಲು ಈ ಭಾಗದಲ್ಲಿ ನಿರಂತರವಾಗಿ ಧರ್ಮ ಕಾರ್ಯಗಳು ನಡೆಯುತ್ತಿರುವುದನ್ನು ನಾನು ಕಂಡಿದ್ದೇನೆ. ಈ ಭಾಗದ ಮಹಿಳೆಯರ ಹಾಗೂ ಯುವಕರ ತಂಡವು ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ. ಊರವರನ್ನು ಒಟ್ಟು ಸೇರಿಸಿಕೊಂಡು ಅತ್ಯಂತ ವ್ಯವಸ್ಥಿತವಾಗಿ ಇಲ್ಲಿ ಬ್ರಹ್ಮಕಲಶೋತ್ಸವ ನಡೆದಿದೆ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲೇ ಪರ್ಪುಂಜ ಅತ್ಯಂತ ಪ್ರಸಿದ್ಧಿಯನ್ನು ಪಡೆಯಲಿ ಎಂದು ಹೇಳಿ ಶುಭ ಹಾರೈಸಿದರು.

ನಂಬಿಕೆ, ಶ್ರದ್ಧೆ ಇದ್ದಾಗ ಬದುಕು ಪರಿಪೂರ್ಣ: ಅರುಣ್ ಕುಮಾರ್ ಪುತ್ತಿಲ
ಹಿಂದೂ ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ನಮ್ಮಲ್ಲಿ ನಂಬಿಕೆ ಮತ್ತು ಶ್ರದ್ಧೆ ಇದ್ದಾಗ ನಮ್ಮ ಬದುಕು ಪರಿಪೂರ್ಣತೆಯನ್ನು ಪಡೆಯಲು ಸಾಧ್ಯವಿದೆ ಏಕೆಂದರೆ ನಂಬಿಕೆಯ ಆಧಾರದಲ್ಲಿ ಬದುಕು ನಿಂತಿದೆ, ನಮ್ಮ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕೆಲಸ ನಮ್ಮಿಂದ ಆಗಬೇಕು ಎಂದ ಪುತ್ತಿಲರವರು, ಹಿಂದೂ ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ ಕೀರ್ತಿ ಪರ್ಪುಂಜಕ್ಕೆ ಸಲ್ಲುತ್ತದೆ ಎಂದು ಹೇಳಿ ಶುಭ ಹಾರೈಸಿದರು.
ದೈವಗಳ ಪ್ರತಿಷ್ಠೆಯ ಮೂಲಕ ನಾಡಿಗೆ ಹೊಸ ಚೈತನ್ಯ: ತ್ರಿವೇಣಿ ಪಲ್ಲತ್ತಾರು
ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಹಿರಿಯರು ಆರಾಧನೆ ಮಾಡಿಕೊಂಡು ಬಂದಿದ್ದ ಈ ರಾಮಜಾಲುವಿನ ದೈವಿಕ ಶಕ್ತಿಗಳಿಗೆ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಾಡಿಸುವ ಮೂಲಕ ಈ ಊರಿಗೆ ಹೊಸ ಚೈತನ್ಯವನ್ನು ತುಂಬಿಸುವ ಮೂಲಕ ಆಗಿದೆ. ಇದರಿಂದ ಈ ಊರಿಗೆ ಸುಭೀಕ್ಷೆಯಾಗಲಿದೆ ಇದರ ಹಿಂದೆ ಸೇವೆ ಮಾಡಿದ ಭಕ್ತರಿಗೆ ಶ್ರೀ ದೈವಗಳ ಅನುಗ್ರಹ ಪ್ರಾಪ್ತಿಯಾಗಲಿ, ಊರು ಸಮೃದ್ಧಿಯಿಂದ ಕೂಡಿರಲಿ ಎಂದು ಹೇಳಿ ಶುಭ ಹಾರೈಸಿದರು.
ದೇಶ, ಧರ್ಮಕ್ಕಾಗಿ ನಾವೆಲ್ಲರೂ ಒಟ್ಟು ಸೇರಬೇಕಾಗಿದೆ : ಕುಂಬ್ರ ದುರ್ಗಾಪ್ರಸಾದ್ ರೈ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ, ಕಲಾವಿದ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ, ಒಳಮೊಗ್ರು ಗ್ರಾಮದಲ್ಲಿ ದೇವಸ್ಥಾನಗಳು ಇಲ್ಲದಿದ್ದರೂ ದೈವಸ್ಥಾನಗಳು, ದೈವ ಸಾನಿಧ್ಯಗಳು ಬಹಳಷ್ಟಿವೆ ಆದ್ದರಿಂದ ಇದನ್ನು ದೈವಗಳ ಪುಣ್ಯ ಭೂಮಿ ಎಂದು ಕರೆಯಬಹುದಾಗಿದೆ. ಕುಕ್ಕುಮುಗೇರು ಉಳ್ಳಾಕುಲು, ಪಲ್ಲತ್ತಾರು ಮಲೆ ಉಳ್ಳಾಕುಲು, ರಾಮಜಾಲು ಬ್ರಹ್ಮಬೈದೆರ್ಕಳು ಹಾಗೇ ರಾಮಜಾಲು ಶ್ರೀ ರಕ್ತೇಶ್ವರಿ ಸಾನಿಧ್ಯ ಹೀಗೆ ಬಹಳಷ್ಟು ದೈವಸ್ಥಾನಗಳನ್ನು ನಾವು ಇಲ್ಲಿ ಕಾಣಬಹುದಾಗಿದೆ. ತುಳುವರು ಕೃಷಿಕರು ನಮ್ಮ ಕೃಷಿಗೆ ಸಮಸ್ಯೆ ಉಂಟಾದಾಗ ನಾವು ದೈವಗಳ ಮೊರೆ ಹೋಗುವುದು ಸಹಜ ಆದ್ದರಿಂದ ಧರ್ಮ ಕಾರ್ಯವನ್ನು ಮಾಡುವ ಮೂಲಕ ಈ ದೇಶ, ಧರ್ಮಕ್ಕಾಗಿ ನಾವೆಲ್ಲರೂ ಒಟ್ಟು ಸೇರಬೇಕಾದ ಅಗತ್ಯತೆ ಇದೆ ಎಂದು ಹೇಳಿ ಶುಭ ಹಾರೈಸಿದರು.

ಪ್ರೀತಿ, ವಿಶ್ವಾಸ, ಒಗ್ಗಟ್ಟು ಇದು ನಮ್ಮಲ್ಲಿ ಅತೀ ಮುಖ್ಯ : ಭವಾನಿ ಬಿ.ಆರ್
ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಭವಾನಿ ಜಯರಾಮ್ರವರು ಮಾತನಾಡಿ, ಪ್ರೀತಿ, ವಿಶ್ವಾಸ ಮತ್ತು ಒಗ್ಗಟ್ಟಿನಿಂದ ಮಾತ್ರ ಇಂತಹ ಧರ್ಮ ಕಾರ್ಯಗಳು ಯಶಸ್ವಿಯಾಗಲು ಸಾಧ್ಯ ಎಂಬುದನ್ನು ರಾಮಜಾಲುವಿನಲ್ಲಿ ಕಾಣಬಹುದಾಗಿದೆ. ಇಲ್ಲಿ ನೆಲೆಯಾದ ತಾಯಿ ರಕ್ತೇಶ್ವರಿ ನಮ್ಮೆಲ್ಲರ ಕಾಪಾಡಲಿ, ಈ ಭೂಮಿಗೆ ಹೊಸ ಚೈತನ್ಯವನ್ನು ಕರುಣಿಸಲಿ ಎಂದು ಹೇಳಿ ಶುಭ ಹಾರೈಸಿದರು.
ದೈವ ಶಕ್ತಿಗಳಿಂದ ಹಿಂದೂ ಸಮಾಜ ಉಳಿದಿದೆ : ಕೆ.ಸಂಜೀವ ಪೂಜಾರಿ ಕೂರೇಲು
ಸಭಾಧ್ಯಕ್ಷತೆ ವಹಿಸಿದ್ದ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ಮಾತನಾಡಿ, ಒಳಮೊಗ್ರು ದೈವಗಳು ನೆಲೆಸಿರುವ ಪುಣ್ಯಭೂಮಿಯಾಗಿದೆ ಅದರಲ್ಲೂ ರಾಮಜಾಲು ಜಿಲ್ಲೆಯಲ್ಲೇ ಪ್ರಸಿದ್ಧಿ ಪಡೆದುಕೊಂಡಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ.ಇದೀಗ ಶ್ರೀ ರಕ್ತೇಶ್ವರಿ ಸಾನಿಧ್ಯದ ಅಭಿವೃದ್ಧಿ ಕೂಡ ನಡೆದಿರುವುದು ರಾಮಜಾಲುವಿಗೆ ಮತ್ತಷ್ಟು ಧಾರ್ಮಿಕ ಶಕ್ತಿಯನ್ನು ತುಂಬಿಸಿದೆ ಎಂದು ಅವರು ಹೇಳಿದರು. ನಾಡಲ್ಲಿ ಧರ್ಮ, ಸಂಸ್ಕೃತಿ, ಸಂಸ್ಕಾರ ಉಳಿಯಬೇಕಾದರೆ ದೈವಸ್ಥಾನ, ದೇವಸ್ಥಾನಗಳ ಅಭಿವೃದ್ಧಿಯಾಗಬೇಕು, ದೈವ ಶಕ್ತಿಗಳಿಂದ ಮಾತ್ರ ಧರ್ಮದ ಉಳಿವು ಸಾಧ್ಯ,ಹಿಂದೂ ಸಮಾಜ ಉಳಿಯಬೇಕಾದರೆ ದೈವ ದೇವರಗಳಿಗೆ ಶಕ್ತಿ ತುಂಬಿಸುವ ಕೆಲಸ ನಿರಂತರ ನಡೆಯಬೇಕು ಎಂದು ಹೇಳಿ ಶುಭ ಹಾರೈಸಿದರು.
ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ, ಕುಂಬ್ರದ ಜನಪ್ರಿಯ ಉದ್ಯಮಿ ಕುಂಬ್ರ ಮೋಹನದಾಸ ರೈ ಮಾತನಾಡಿ, ಹಲವು ದಾನಿಗಳ ಸಹಕಾರ ಹಾಗೇ ಈ ಭಾಗದ ಮಹಿಳೆಯರ, ಯುವಕರ ಶ್ರಮ ಸೇವೆಯೊಂದಿಗೆ ದೈವ ದೇವರುಗಳ ಅನುಗ್ರಹದಿಂದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಈ ಪುಣ್ಯ ಕಾರ್ಯದಲ್ಲಿ ಪಾಲು ಪಡೆದ ಸಮಸ್ತ ಭಕ್ತರಿಗೆ ಶ್ರೀ ದೈವಗಳ ಅನುಗ್ರಹ ಸದಾ ಇರಲಿ ಎಂದು ಹೇಳಿ ಶುಭ ಹಾರೈಸಿದರು. ಗೌರವ ಅಧ್ಯಕ್ಷ ಬಾರಿಕೆ ನಾರಾಯಣ ರೈ ಮಾತನಾಡಿ, ಕೋಟಿ ಚೆನ್ನಯರು ನೆಲೆಯಾದ ರಾಮಜಾಲು ಪುಣ್ಯಭೂಮಿಯಲ್ಲಿ ಶ್ರೀ ರಕ್ತೇಶ್ವರಿ ಪರಿವಾರ ದೈವಗಳ ಪ್ರತಿಷ್ಠೆ ನಡೆದಿದೆ. ತೌಳವ ವಂಶದವರಾದ ತುಳುವರು ದೈವಾರಾಧಕರು, ನಾಗ ದೇವರ ಆರಾಧನೆ ಇಲ್ಲಿ ಪ್ರಮುಖವಾಗಿದೆ. ಹಿರಿಯರು ಆರಾಧನೆ ಮಾಡಿಕೊಂಡು ಬಂದಿರುವ ದೈವಗಳಿಗೆ ಹೊಸ ಚೈತನ್ಯ ಕೊಡುವ ಕೆಲಸವನ್ನು ಈ ಭಾಗದ ಜನರು ಮಾಡಿದ್ದಾರೆ ಇದು ಧರ್ಮ ಕಾರ್ಯವಾಗಿದೆ, ಇದರಿಂದ ಭಗವಂತನ ಅನುಗ್ರಹ ಪ್ರಾಪ್ತಿ ಸಾಧ್ಯ ಎಂದು ಹೇಳಿ ಶುಭ ಹಾರೈಸಿದರು.
ಸನ್ಮಾನದ ಗೌರವಾರ್ಪಣೆ
ಈ ಸಂದರ್ಭದಲ್ಲಿ ಸಾನಿಧ್ಯದ ಹಿಂದೆ ಕೆಲಸ ಮಾಡಿದವರನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ನಡೆಯಿತು. ಶಿಲಾ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ನೆರವೇರಿಸಿದ ತಂತ್ರಿ ಕೆಮ್ಮಿಂಜೆ ಶ್ರೀ ಲಕ್ಷ್ಮೀಶ ತಂತ್ರಿ, ವಾಸ್ತು ಶಿಲ್ಪಿ ದಿವಾಕರ ಆಚಾರ್ಯ, ಮೇಸ್ತ್ರೀ ರಾಧಾಕೃಷ್ಣ ಗೌಡ ಪರ್ಪುಂಜ, ಪೈಂಟರ್ ಶ್ರೀಧರ ಗೌಡ ಶೇಡಿಗುಂಡಿ, ಅಡುಗೆ ಪಾಕ ತಜ್ಞ ಸುರೇಶ್ ನಾಯಕ್,ಛಾಯಾಗ್ರಹಕ ಕಿಶೋರ್ ಕುಮಾರ್ ರೈ ಪುಂಡಿಕಾಯಿ, ಸೌಂಡ್ ಲೈಟಿಂಗ್ಸ್ನ ಯೋಗೀಶ್ ಕಾವು ಹಾಗೂ ಕರ ಸೇವೆಯಲ್ಲಿ ಪಾಲ್ಗೊಂಡ ಸ್ನೇಹ ಯುವಕ ಮಂಡಲ ಮತ್ತು ಸ್ನೇಹ ಮಹಿಳಾ ಮಂಡಲದ ಪದಾಧಿಕಾರಿಗಳನ್ನು, ಕರಸೇವಕರನ್ನು ಶಾಲು, ಸ್ಮರಣಿಕ ನೀಡಿ ಸನ್ಮಾನಿಸಿ ಗೌರವಿಸಲಾಯಿತು ಅಲ್ಲದೆ ಸಮಿತಿಯ ಗೌರವ ಅಧ್ಯಕ್ಷರುಗಳನ್ನು ಶಾಲು,ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ರಾಮಜಾಲು ಶ್ರೀ ರಕ್ತೇಶ್ವರಿ ಪರಿವಾರ ದೈವಗಳ ಆಡಳಿತ ಸಮಿತಿ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಪ್ರಧಾನ ಕಾರ್ಯದರ್ಶಿ ಹರಿಹರ ಕೋಡಿಬೈಲು, ಕಾರ್ಯಾಧ್ಯಕ್ಷ ಅನಿಲ್ ರೈ ಬಾರಿಕೆ, ಕೋಶಾಧಿಕಾರಿ ಪ್ರಮೀಳಾ ಎಸ್, ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಅತಿಥಿ ಪರ್ಪುಂಜ, ಉಪಾಧ್ಯಕ್ಷ ಶೀನಪ್ಪ ನಾಯ್ಕ ಗುರಿಕುಮೇರು, ಗೌರವ ಅಧ್ಯಕ್ಷರುಗಳಾದ ಪ್ರೇಮ್ರಾಜ್ ರೈ ಪರ್ಪುಂಜ, ಚನಿಯಪ್ಪ ನಾಯ್ಕ ಗುರಿಕುಮೇರು ಉಪಸ್ಥಿತರಿದ್ದರು. ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗಣೇಶ್ ಕೋಡಿಬೈಲು ಸ್ವಾಗತಿಸಿದರು. ಶ್ರೇಯಾ ಮತ್ತು ರಕ್ಷಾ ಪ್ರಾರ್ಥಿಸಿದರು. ರಾಕೇಶ್ ರೈ ಪರ್ಪುಂಜ, ರಾಜೇಶ್ ಪೂಜಾರಿ ಪಿದಪಟ್ಲ, ನಿತಿನ್ ಗೌಡ ಪರ್ಪುಂಜ, ವಿಪಿನ್ ಶೆಟ್ಟಿ, ರೇಖಾ ರೈ ಪರ್ಪುಂಜ, ರಾಜೇಶ್ ಗೌಡ ಪಿದಪಟ್ಲ, ಪ್ರಮೀಳಾ ಎಸ್, ಅಶ್ವಿನ್ ಪೂಜಾರಿ ಪಿದಪಟ್ಲ, ಕಿಶನ್ ಗೌಡ ಪರ್ಪುಂಜ, ನಾಗೇಶ್ ರೈ ಪರ್ಪುಂಜ, ಸುರೇಶ್ ಪೂಜಾರಿ, ಜಗದೀಶ ಗೌಡ ಶೇಡಿಗುಂಡಿ, ರಿತೇಶ್ ಗೌಡ,ಶರತ್, ಪವನ್, ಸುಜಿತ್ ಪಿದಪಟ್ಲ ಅತಿಥಿಗಳಿಗೆ ಶಾಲು ನೀಡಿ ಸ್ವಾಗತಿಸಿದರು. ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ರತನ್ ರೈ ಕುಂಬ್ರ ವಂದಿಸಿದರು. ಮಹೇಶ್ ರೈ ಕೇರಿ ಮತ್ತು ಹರೀಶ್ ರೈ ಜಾರುತ್ತಾರು ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸಮಿತಿಯ ಸಂಚಾಲಕರು, ಸಹ ಸಂಚಾಲಕರು ಮತ್ತು ಸದಸ್ಯರುಗಳು ಸಹಕರಿಸಿದ್ದರು.

‘ಕಾಂತಾರ’ ದ ಮೂಲಕ ವಿದೇಶದಲ್ಲೂ ತುಳುನಾಡ ದೈವದ ಕಾರಣಿಕತೆ
ತುಳುನಾಡಿನ ದೈವಗಳ ಕಾರಣಿಕತೆ ಇಲ್ಲಿನ ದೈವಗಳ ವಿಶೇಷತೆಯನ್ನು ಇಂದು ಅಮೇರಿಕಾ, ಜಪಾನ್, ಜರ್ಮನ್ ಇತ್ಯಾದಿ ವಿದೇಶಗಳಲ್ಲೂ ಜನರು ಅರಿತುಕೊಳ್ಳುವ ಕೆಲಸ ‘ಕಾಂತಾರ’ ಸಿನಿಮಾದಿಂದ ಆಗಿದೆ. ಅಲ್ಲಿನ ಜನರಿಗೆ ನಮ್ಮ ತುಳುನಾಡಿನ ದೈವರಾಧನೆಯ ಪರಿಚಯವನ್ನು ಮಾಡಿಸುವ ಕೆಲಸ ಆಗಿರುವುದು ಶ್ಲಾಘನೀಯ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಉಳ್ಳಾಕ್ಲು ಕುದುರೆಯ ಮೇಲೆ ಹೋಗುತ್ತಿದ್ದರು…!
ರಾಮಜಾಲು ಪ್ರದೇಶಕ್ಕೆ ತನ್ನದ ಆದ ಇತಿಹಾಸವಿದೆ. ಇಲ್ಲಿ ಬ್ರಹ್ಮರ ಆರಾಧನೆ ನಡೆಯುತ್ತದೆ. ಕೋಟಿ ಚೆನ್ನಯರ ಸಾನಿಧ್ಯವಿದೆ. ಈ ಹಿಂದೆ ಈ ಭಾಗದಲ್ಲಿ ಉಳ್ಳಾಕ್ಲು ಕುದುರೆಯ ಮೇಲೆ ಹೋಗುತ್ತಿದ್ದರು ಎನ್ನಲಾಗಿದೆ. ಇಂತಹ ಪುಣ್ಯ ಭೂಮಿಯಲ್ಲಿ ಶ್ರೀ ರಕ್ತೇಶ್ವರಿ ಪರಿವಾರ ದೈವಗಳ ಪ್ರತಿಷ್ಠೆ ನಡೆದಿದೆ ಎಂದು ಹಿರಿಯರಾದ ಬಾರಿಕೆ ನಾರಾಯಣ ರೈ ಹೇಳಿದರು.
ಶ್ರೀ ರಕ್ತೇಶ್ವರಿ ಪರಿವಾರ ದೈವಗಳ ಶಿಲಾ ಪ್ರತಿಷ್ಠೆ, ಕಲಶಾಭಿಷೇಕ
ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲು ಪ್ರದೇಶದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ರಕ್ತೇಶ್ವರಿ ಶ್ರೀ ಪಂಜುರ್ಲಿ ಪರಿವಾರ ದೈವಗಳ ಸಾನಿಧ್ಯದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ಶ್ರೀ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ರಕ್ತೇಶ್ವರಿ ಶ್ರೀ ಪಂಜುರ್ಲಿ ಪರಿವಾರ ದೈವಗಳ ಶಿಲಾ ಪ್ರತಿಷ್ಠಾ ಕಲಶಾಭಿಷೇಕ ನಡೆಯಿತು.ನ.6 ರಂದು ಸಂಜೆ ತಂತ್ರಿಗಳು ಸಾನಿಧ್ಯಕ್ಕೆ ಆಗಮಿಸಿದರು. ತಂತ್ರಿಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.ಬಳಿಕ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹ, ಸ್ಥಳ ಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ ನಡೆದು ವಾಸ್ತು ಪೂಜಾ ಬಲಿ, ನೂತನ ಬಿಂಬ ಜಲಾಧಿವಾಸದ ಬಳಿಕ ಸೇರಿದ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಅನ್ನಪ್ರಸಾದ ವಿತರಣೆ ನಡೆಯಿತು. ನ.7ರಂದು ಬೆಳಿಗ್ಗೆ 7ರಿಂದ ಶ್ರೀ ಮಹಾಗಣಪತಿ ಹೋಮ, ಕಲಶ ಪೂಜೆ ನಡೆದು 10.೦4 ರಿಂದ 10.58ರ ಧನು ಲಗ್ನದಲ್ಲಿ ಶ್ರೀ ರಕ್ತೇಶ್ವರಿ ಪರಿವಾರ ದೈವಗಳ ಶಿಲಾ ಪ್ರತಿಷ್ಠೆ ನಡೆದು ಕಲಶಾಭಿಷೇಕ, ತಂಬಿಲ ಸೇವೆ ಬಳಿಕ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆದು ಭಕ್ತಾಧಿಗಳಿಗೆ ಅನ್ನಪ್ರಸಾದ ವಿತರಣೆ ನಡೆಯಿತು. ಊರ ಪರವೂರ ನೂರಾರು ಭಕ್ತಾಧಿಗಳು ಆಗಮಿಸಿ ಪ್ರಸಾದ, ಅನ್ನಪ್ರಸಾದ ಸ್ವೀಕರಿಸಿದರು.









