ಪುತ್ತೂರು: ಪುತ್ತೂರು ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ, ಗಾನ ಸರಸ್ವತಿ ಸಂಗೀತ ಶಾಲೆ ಪುತ್ತೂರು ಹಾಗೂ ಯಕ್ಷಚಿಣ್ಣರ ಬಳಗ ಪುತ್ತೂರು ಇವರ ಸಹಯೋಗದೊಂದಿಗೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ‘ಗಾನ-ನೃತ್ಯ-ಯಕ್ಷ ಸಂಭ್ರಮ-2024’ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಶಾಲೆಯ ಹಿರಿಯ ವಿದ್ಯಾರ್ಥಿ ಪ್ರಸ್ತುತ ವೈದ್ಯ ವೃತ್ತಿಯಲ್ಲಿರುವ ಹಾಗೂ ಮೃದಂಗ ಕಲಾವಿದ ಅಕ್ಷಯ ನಾರಾಯಣ ಕಾಂಚನ ಪುತ್ತೂರು ನೆರವೇರಿಸಿದರು. ವಿದ್ಯಾರ್ಥಿ ಜೀವನದಲ್ಲಿ ಪಠ್ಯಪೂರಕ ಚಟುವಟಿಕೆಗಳು ವಿದ್ಯಾರ್ಥಿಗಳ ಪಾಲಿಗೆ ಅವಶ್ಯಕ ಎಂಬುದಾಗಿ ತಿಳಿಸಿದರು. ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಜನ್ಮ ಪೌಂಢೇಶನ್ ಟ್ರಸ್ಟ್‌ನ ಅಧ್ಯಕ್ಷ ಹರ್ಷ ಕುಮಾರ್‌ರೈ ಮಾಡಾವು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ ವಿದುಷಿ ರಾಜಶ್ರೀ ಉಳ್ಳಾಲ ಮಾತನಾಡುತ್ತಾ, ಸಂಗೀತ, ಭರತನಾಟ್ಯ, ಯಕ್ಷಗಾನ ಈ ಮಾದರಿಯ ಕಲೆಗಳು ಇಂದು ಜಗತ್ತಿನಾದ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಸಂಸ್ಕಾರ ಭಾರತಿ ಕಲೆಯನ್ನು ಈ ಶಾಲೆಯಲ್ಲಿ ಮುಂದುವರಿಸುತ್ತಿರುವುದು ಸಂತಸದಾಯಕ ವಿಷಯ ಎಂದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ಚಂದ್ರ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾ ಮುಖ್ಯಗುರು ಆಶಾ ಬೆಳ್ಳಾರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಭರತನಾಟ್ಯ ಗುರುಗಳಾದ ವಿದುಷಿ ಪ್ರೀತಿಕಲಾ ದೀಪಕ್ ಕುಮಾರ್, ಯಕ್ಷಗಾನ ಗುರುಗಳಾದ ಚಂದ್ರಶೇಖರ್ ಸುಳ್ಯಪದವು, ಸಂಗೀತ ಗುರುಗಳಾದ ವಿದುಷಿ ಮಾಲಿನಿ ಕೃಷ್ಣ ಮೋಹನ್ ರವರಿಗೆ ಗುರುವಂದನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರೂ ಶಾಲಾ ಪೋಷಕರೂ ಆದ ಗೋಪಾಲಕೃಷ್ಣ ನೇರಳಕಟ್ಟೆಯವರು ಕಾರ್ಯಕ್ರಮ ನಿರೂಪಿಸಿ, ಗೀತಾ ಧನ್ಯವಾದ ಸಮರ್ಪಿಸಿದರು.