ಉಪ್ಪಿನಂಗಡಿ: ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್, ಜೇಸಿಐ ಉಪ್ಪಿನಂಗಡಿ ಘಟಕ, ರೋಟರಿ ಕ್ಲಬ್ ಉಪ್ಪಿನಂಗಡಿ, ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಉಪ್ಪಿನಂಗಡಿ ಹಾಗೂ ನೇತ್ರಾವತಿ ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ಸಂಯುಕ್ತಾಶ್ರಯದಲ್ಲಿ ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್‌ನ ಸಹಯೋಗದೊಂದಿಗೆ ಉಪ್ಪಿನಂಗಡಿಯಲ್ಲಿ ರಕ್ತದಾನ ಶಿಬಿರ ನಡೆಯಿತು.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಶಿಬಿರವನ್ನು ಧನ್ವಂತರಿ ಕ್ಲಿನಿಕ್‌ನ ವೈದ್ಯ ಡಾ. ನಿರಂಜನ್ ರೈ ಉದ್ಘಾಟಿಸಿ, ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು. ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್‌ನ ವೈದ್ಯಾಧಿಕಾರಿ ರಕ್ತದ ಅವಶ್ಯಕತೆ, ರಕ್ತದ ಗುಂಪುಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ಕೃಷ್ಣಾನಂದ ಹಾಗೂ ಡಿ ಗ್ರೂಫ್ ನೌಕರರಾದ ಚರಣ್ ಕುಮಾರ್ ಮತ್ತು ಮುರಳೀಧರ ಅವರನ್ನು ಅವರು ನೀಡುವ ಉತ್ತಮ ಸೇವೆಗಾಗಿ ಗೌರವಿಸಲಾಯಿತು.
ವೇದಿಕೆಯಲ್ಲಿ ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ಅನುರಾಧಾ ಆರ್. ಶೆಟ್ಟಿ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ, ನೇತ್ರಾವತಿ ಅಟೋ ಚಾಲಕ- ಮಾಲಕರ ಸಂಘದ ಅಧ್ಯಕ್ಷ ಫಾರೂಕ್ ಝಿಂದಗಿ, ಜೇಸಿಐ ಉಪ್ಪಿನಂಗಡಿ ಘಟಕದ ಅಧ್ಯಕ್ಷೆ ಲವೀನಾ ಪಿಂಟೋ, ಜೇಸಿಐ ವಲಯ 15ರ ಸಂಯೋಜಕ ಶೇಖರ ಗೌಂಡತ್ತಿಗೆ ಉಪಸ್ಥಿತರಿದ್ದರು. ಶಿಬಿರದಲ್ಲಿ 32 ಯುನಿಟ್ ರಕ್ತ ಸಂಗ್ರಹವಾಯಿತು.
ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಪ್ರಶಾಂತ್ ಕುಮಾರ್ ರೈ ಬಿ. ಸ್ವಾಗತಿಸಿದರು. ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್ ವಂದಿಸಿದರು. ಟ್ರಸ್ಟ್ ಕಾರ್ಯದರ್ಶಿ ಕೆ.ವಿ. ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.