ಕಾಂಚನೋತ್ಸವ 2024 – ‘ಅಮೋಘ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ’ಕಾರ್ಯಕ್ರಮ

0

ನೆಲ್ಯಾಡಿ: ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ಅರ್ಪಿಸುವ ‘ಕಾಂಚನೋತ್ಸವ 2024’ ಹಾಗೂ 70ನೇ ವರ್ಷದ ಶ್ರೀ ತ್ಯಾಗರಾಜ, ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ, ಸ್ಥಾಪಕ ಗುರುಗಳಾದ ಸಂಗೀತರತ್ನ ಕಾಂಚನ ವೆಂಕಟಸುಬ್ರಮಣ್ಯಂ ಹಾಗೂ ಕರ್ನಾಟಕ ಕಲಾಶ್ರೀ ಕಾಂಚನ ವಿ.ಸುಬ್ಬರತ್ನಂರವರ ಪುಣ್ಯ ದಿನಾಚರಣೆ ಫೆ.3 ಮತ್ತು 4ರಂದು ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾ ಶಾಲೆಯಲ್ಲಿ ನಡೆಯಿತು.

ಫೆ.3ರಂದು ಅತಿಥಿ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಫೆ.4ರಂದು ಬೆಳಿಗ್ಗೆ ಶ್ರೀ ತ್ಯಾಗರಾಜರ ಉತ್ಸವ ಸಂಪ್ರದಾಯ ಮತ್ತು ದಿವ್ಯನಾಮ ಸಂಕೀರ್ತನೆಗಳ ವಾದ್ಯ-ಗಾಯನ ಭಜನೆಯೊಂದಿಗೆ ಕಾಂಚನ ಮನೆಯಿಂದ ಸಂಗೀತ ಶಾಲೆಯ ತನಕ ಸಂಗೀತ ನಡಿಗೆ ‘ಉಂಛ ವೃತ್ತಿ’ ನಡೆಯಿತು. ಬಳಿಕ ಶ್ರೀ ಪುರಂದರ ದಾಸರ ಪಿಳ್ಳಾರಿ ಗೀತೆಗಳು ಮತ್ತು ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿಗಾನ ನಡೆಯಿತು. ಅತಿಥಿ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಸಂಜೆ 6.30ರಿಂದ ಅಮೋಘ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ಗಾಯನದಲ್ಲಿ ವಿದ್ವಾನ್ ಭರತ್ ಸುಂದರ್, ವಯೊಲಿನ್‌ನಲ್ಲಿ ವಿದ್ವಾನ್ ಮೈಸೂರು ಕಾರ್ತಿಕ್, ಮೃದಂಗದಲ್ಲಿ ಪದ್ಮವಿಭೂಷಣ ಸಂಗೀತ ಕಲಾನಿಧಿ ವಿದ್ವಾನ್ ಉಮಯಾಲ್‌ಪುರಂ ಕೆ.ಶಿವರಾಮನ್ ಹಾಗೂ ಘಟಂನಲ್ಲಿ ವಿದ್ವಾನ್ ಗಿರಿಧರ ಉಡುಪ ಪಾಲ್ಗೊಂಡಿದ್ದರು. ಎರಡು ದಿನವೂ ಮಧ್ಯಾಹ್ನ ಹಾಗೂ ರಾತ್ರಿ ಭೋಜನದ ವ್ಯವಸ್ಥೆಯೂ ಮಾಡಲಾಗಿತ್ತು. ಸಂಸ್ಥೆಯ ಕಾರ್ಯದರ್ಶಿ ಕೆ.ರೋಹಿಣಿ ಸುಬ್ಬರತ್ನಂ, ಅಧ್ಯಾಪಕ, ಶಿಷ್ಯ-ಪ್ರಶಿಷ್ಯವೃಂದ ಹಾಗೂ ಊರ ಅಭಿಮಾನಿವೃಂದದವರು ವಿವಿಧ ಕಾರ್ಯಕ್ರಮ ನಡೆಸಿಕೊಟ್ಟರು. ಸಾವಿರಾರು ಮಂದಿ 2 ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಂಗೀತ ರಸದೌತಣ :
ಕರ್ನಾಟಕದ ತಿರುವೈಯ್ಯಾರ್ ಎಂದು ಪ್ರಸಿದ್ಧಿ ಪಡೆದಿರುವ ಸಂಗೀತ ಕ್ಷೇತ್ರವೂ ಆಗಿರುವ ಬಜತ್ತೂರು ಗ್ರಾಮದ ಕಾಂಚನದ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾ ಶಾಲೆಯಲ್ಲಿ ಎರಡು ದಿನ ನಿರಂತರ ನಡೆದ ಸಂಗೀತ ಕಾರ್ಯಕ್ರಮಗಳು ಸಂಗೀತಾಸಕ್ತರಿಗೆ ಸಂಗೀತದ ರಸದೌತಣವನ್ನೇ ಉಣಬಡಿಸಿತು. ಅದರಲ್ಲೂ ಅಮೋಘ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಈ ಬಾರಿ ಮೃದಂಗದಲ್ಲಿ ಪದ್ಮವಿಭೂಷಣ 90ರ ಹರೆಯದ ಮಹಾಮೇರು ವಿದ್ವಾಂಸ ಡಾ. ಉಮಯಾಲಪುರಂ ಕೆ.ಶಿವರಾಮನ್ ಅವರು ಭಾಗವಹಿಸಿದ್ದು ಸಂಗೀತ ಪ್ರಿಯರ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ ನೂರಾರು ಸಂಗೀತ ಪ್ರೇಮಿಗಳು ಅಮೋಘ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಸ್ವಾದಿಸಿಕೊಂಡರು. ಫೆ.4ರಂದು ಬೆಳಿಗ್ಗೆ ವೇ.ಬ್ರ.ನಾರಾಯಣ ಬಡಕಿಲ್ಲಾಯರ ನೇತೃತ್ವದಲ್ಲಿ ಗಣಹೋಮ, ಸಂಜೆ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.

LEAVE A REPLY

Please enter your comment!
Please enter your name here