ನೆಲ್ಯಾಡಿ: ಚತುಷ್ಪಥ ಕಾಮಗಾರಿ ಹಿನ್ನೆಲೆಯಲ್ಲಿ ನೆಲ್ಯಾಡಿ ಪೇಟೆಯಲ್ಲಿ ನಿರ್ಮಾಣಗೊಂಡಿರುವ ಅಪೂರ್ಣ ಹಂತದ ಹೈವೇ ಡಿವೈಡರ್ ತೆರವು ಮಾಡಿಕೊಡುವಂತೆ ಹಾಗೂ ನೆಲ್ಯಾಡಿ ಪೇಟೆಯ ಉಳಿವಿಗಾಗಿ ಫ್ಲೈ ಓವರ್ ರಚನೆ ಮಾಡುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಸಂಬಂಧ ಸಾರ್ವಜನಿಕರಿಂದ ನೆಲ್ಯಾಡಿ ಹಾಗೂ ಕೌಕ್ರಾಡಿ ಗ್ರಾ.ಪಂ.ಗೆ ಫೆ.7ರಂದು ಮನವಿ ಸಲ್ಲಿಸಲಾಯಿತು.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಶಿರಾಡಿ ಘಾಟಿಯ ತಪ್ಪಲಿನಲ್ಲಿರುವ ನೆಲ್ಯಾಡಿ ಪ್ರಮುಖ ಪಟ್ಟಣವಾಗಿ ಬೆಳೆದಿದೆ. ನೆಲ್ಯಾಡಿ ಅತೀ ವೇಗವಾಗಿಯೂ ಅಭಿವೃದ್ಧಿ ಹೊಂದುತ್ತಿದೆ. ಅಗತ್ಯ ಸಾಮಾನು, ಕೃಷಿಗೆ ಸಂಬಂಧಪಟ್ಟ ಉಪಕರಣ, ರಸಗೊಬ್ಬರ ಖರೀದಿ, ಅಡಿಕೆ, ತೆಂಗು, ರಬ್ಬರ್ ಇತ್ಯಾದಿ ಪ್ರಮುಖ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಪರಿಸರದ ಗ್ರಾಮಸ್ಥರು ನೆಲ್ಯಾಡಿ ಪೇಟೆಯನ್ನೇ ಅವಲಂಬಿಸಿದ್ದೇವೆ. ಆದರೆ ಇದೀಗ ಚತುಷ್ಪಥ ಕಾಮಗಾರಿಯಿಂದ ನೆಲ್ಯಾಡಿ ಪೇಟೆಯ ಮಧ್ಯೆ ಡಿವೈಡರ್ ಹಾದು ಹೋಗಿರುವುದರಿಂದ ದೈನಂದಿನ ವ್ಯವಹಾರಕ್ಕೆ ತೊಂದರೆಯಾಗಿದೆ. ನೆಲ್ಯಾಡಿಯಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಆಗ್ರಹಿಸಿ ಮನವಿ, ಪ್ರತಿಭಟನೆ ನಡೆದಿರುವುದರಿಂದ ಡಿವೈಡರ್ ಕಾಮಗಾರಿ ಅರ್ಧದಲ್ಲಿ ನಿಂತಿದೆ. ಇದರಿಂದಾಗಿ ಪೇಟೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಸಂಚರಿಸಲು ಗ್ರಾಹಕರಿಗೆ ಸಾಧ್ಯವಾಗದೆ ಪರದಾಡುವಂತೆ ಆಗಿದೆ. ಆದ್ದರಿಂದ ನೆಲ್ಯಾಡಿ ಪೇಟೆಯ ಭವಿಷ್ಯದ ದೃಷ್ಟಿಯಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನೆಲ್ಯಾಡಿ ಪೇಟೆಯ ಮಧ್ಯೆ ಡಿವೈಡರ್ ನಿರ್ಮಾಣ ಮಾಡಿರುವುದನ್ನು ಒಂದೆರಡು ಕಡೆ ತಕ್ಷಣ ತೆರವು ಮಾಡಿ ಕೊಡುವ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡುವಂತೆ ಹಾಗೂ ಡಿವೈಡರ್ ತೆರವು ಮಾಡಿ ನೆಲ್ಯಾಡಿ ಪೇಟೆಯ ಉಳಿವಿಗಾಗಿ ಪಿಲ್ಲರ್ ಬಳಸಿ ಫ್ಲೈ ಓವರ್ ಮಾಡಿಕೊಡುವ ಸಂಬಂಧ ಸೂಕ್ತ ಕ್ರಮಕೈಗೊಳ್ಳುವಂತೆಯೂ ಮನವಿಯಲ್ಲಿ ಒತ್ತಾಯಿಸಲಾಗಿದೆ. ಸಾಯಿಕೃಷ್ಣಭವನ ಹೋಟೆಲ್ನ ಗಣೇಶ್ ಹಾಗೂ ಲಕ್ಷ್ಮೀ ವಾಚ್ ವರ್ಕ್ಸ್ನ ಜನಾರ್ದನ ಅವರು ಸಾರ್ವಜನಿಕರ ಪರವಾಗಿ ನೆಲ್ಯಾಡಿ ಗ್ರಾ.ಪಂ.ನಲ್ಲಿ ಅಧ್ಯಕ್ಷ ಸಲಾಂ ಬಿಲಾಲ್ ಹಾಗೂ ಪಿಡಿಒ ಆನಂದ ಗೌಡ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಗ್ರಾ.ಪಂ.ಸದಸ್ಯರಾದ ಜಯಾನಂದ ಬಂಟ್ರಿಯಾಲ್, ಅಬ್ದುಲ್ ಜಬ್ಬಾರ್, ಮಹಮ್ಮದ್ ಇಕ್ಬಾಲ್, ರವಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕೌಕ್ರಾಡಿ ಗ್ರಾ.ಪಂ.ನಲ್ಲಿ ದಿನೇಶ್ ಎಂ.ಟಿ.ಅವರು ಸಾರ್ವಜನಿಕರ ಪರವಾಗಿ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲು ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಕೆ.ಎಂ.ಹನೀಫ್, ಟಿ.ಎಂ.ಕುರಿಯಾಕೋಸ್, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು. ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡುವುದಾಗಿ ಎರಡೂ ಗ್ರಾ.ಪಂ.ನ ಅಧ್ಯಕ್ಷರು ಭರವಸೆ ನೀಡಿದರು. ಗ್ರಾ.ಪಂ.ಗೆ ಮನವಿ ಸಲ್ಲಿಕೆ ಸಂದರ್ಭದಲ್ಲಿ ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಎ.ಕೆ.ವರ್ಗೀಸ್, ಉಪಾಧ್ಯಕ್ಷರಾದ ಸರ್ವೋತ್ತಮ ಗೌಡ, ಬಾಲಕೃಷ್ಣ ಬಾಣಜಾಲು, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಸಿ.ಹೆಚ್., ಜೊತೆ ಕಾರ್ಯದರ್ಶಿ ಉಷಾ ಅಂಚನ್, ಕೋಶಾಧಿಕಾರಿ ಸತೀಶ್ ದುರ್ಗಾಶ್ರೀ, ಪ್ರಮುಖರಾದ ಕೆ.ಪಿ.ತೋಮಸ್, ಗಣೇಶ್ ರಶ್ಮಿ, ಎಂ.ಕೆ.ಇಬ್ರಾಹಿಂ, ನಾಝೀಂ ನೆಲ್ಯಾಡಿ, ರವಿಪ್ರಸಾದ್ ಗುತ್ತಿನಮನೆ, ರವಿಕುಮಾರ್ ಸುರಕ್ಷಾ, ದಿನೇಶ್ ಎಂ.ಟಿ., ಮುತ್ತಾಲಿಬ್ ನೆಲ್ಯಾಡಿ, ನಝೀರ್ ಹೊಸಮಜಲು, ರಾಜ ಜ್ಯೋತಿಕಾ ಫ್ಯಾನ್ಸಿ ಮತ್ತಿತರರು ಉಪಸ್ಥಿತರಿದ್ದರು.