ಪುತ್ತೂರು:ಉದ್ಯೋಗ ನೀಡುವುದಾಗಿ ಹೇಳಿ ಲಕ್ಷಾಂತರ ರೂ.ಪಡೆದುಕೊಂಡು ವಂಚನೆ ಮಾಡಿರುವ ಪ್ರಕರಣದಲ್ಲಿ ಬಂಧಿತ ಮೂವರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಅವಧಿಗೆ ಪುತ್ತೂರು ಗ್ರಾಮಾಂತರ ಪೊಲೀಸರ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ರಾಮಕೃಷ್ಣ ನಾಯ್ಕ ಎಂಬವರ ಪುತ್ರಿ ಸುಮಿತ್ರ ಬಾಯಿ ಸಿ.ಆರ್(23ವ), ರಾಮಕೃಷ್ಣ ನಾಯ್ಕರ ಪುತ್ರ ರಾಹುಲ್ ಕುಮಾರ್(19ವ.) ಹಾಗೂ ಹಾಸನ ಜಿಲ್ಲೆಯ ಶಾಂತಿಗ್ರಾಮ ಸೋಂಬೇಗೌಡ ಅವರ ಪುತ್ರಿ ಸೌಂದರ್ಯ ಎಂ.ಎಸ್(21ವ) ಎಂಬವರನ್ನು ಪೊಲೀಸರು ಬಂಧಿಸಿದ್ದರು.ಬೆಂಗಳೂರು ನಗರ ನಂದಿನಿ ಲೇ ಔಟ್ 1ನೇ ಬ್ಲಾಕ್, ವಿ.ಕೆ ರಾಮಣ್ಣ 2ನೇ ಮುಖ್ಯ ರಸ್ತೆ ಎಂಬಲ್ಲಿ ಫೆ.7ರಂದು ಆರೋಪಿಗಳನ್ನು ವಶಕ್ಕೆ ಪಡೆದು ಕರೆತಂದಿದ್ದ ಪೊಲೀಸರು ಬಂಧಿಸಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಪೊಲೀಸರ ಕಸ್ಟಡಿಗೆ: ಈಗಾಗಲೇ ಹಲವು ಕಡೆಗಳಲ್ಲಿ ಈ ರೀತಿ ಆನ್‌ಲೈನ್ ವಂಚನೆ ಪ್ರಕರಣಗಳು ನಡೆದಿದ್ದು ಹಲವರು ಮೋಸ ಹೋಗಿದ್ದಾರೆ.ಈ ನಿಟ್ಟಿನಲ್ಲಿ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ನೀಡಬೇಕು ಎಂದು ಪುತ್ತೂರು ಗ್ರಾಮಾಂತರ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿತ್ರಯರನ್ನು ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಅವಧಿಗೆ ಪೊಲೀಸರ ಕಸ್ಟಡಿಗೆ ನೀಡಿ ಆದೇಶಿಸಿದೆ.
ಇದು ಘಟನೆ..:
ಅರ್ಯಾಪು ಗ್ರಾಮದ ಒಳತ್ತಡ್ಕ ನಿವಾಸಿ ನಿಶ್ಮಿತಾ ಎಂಬವರು ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.ಱಕರಾವಳಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಆಫೀಸ್ ಕೆಲಸ ಖಾಲಿ ಇದ್ದು,ನಿರುದ್ಯೋಗಿಗಳಿಗೆ ಬಂದ ದಿನವೇ ಕೆಲಸ ಸಿಗುತ್ತದೆೞ ಎಂಬುದಾಗಿ 2023ರ ಜೂನ್ 26ರ ಪತ್ರಿಕೆಯಲ್ಲಿ ಜಾಹೀರಾತೊಂದು ಪ್ರಕಟವಾಗಿತ್ತು.ಈ ಜಾಹೀರಾತಿನಲ್ಲಿ ನಮೂದಿಸಲಾಗಿದ್ದ ಫೋನ್ ನಂಬರ್‌ಗೆ ನಿಶ್ಮಿತಾರವರು ಕರೆ ಮಾಡಿ ವಿಚಾರಿಸಿದಾಗ ಕರೆಯನ್ನು ಸ್ವೀಕರಿಸಿದ ವ್ಯಕ್ತಿ, ನೀವು ಕೆಲಸಕ್ಕೆ ಸೇರ ಬಯಸಿದರೆ ಫೀಸ್ ಕೊಡಬೇಕು ಎಂಬುದಾಗಿ ತಿಳಿಸಿದ್ದ.ಆತನ ಮಾತನ್ನು ನಿಜವೆಂದು ನಂಬಿದ್ದ ನಿಶ್ಮಿತಾರವರು ತನಗೆ ಉದ್ಯೋಗ ದೊರೆಯಬಹುದೆಂಬ ಆಶಾ ಭಾವನೆಯೊಂದಿಗೆ ಕಳೆದ ಸುಮಾರು 7 ತಿಂಗಳುಗಳಿಂದ ಬೇರೆ ಬೇರೆ ದಿನಗಳಲ್ಲಿ ಗೂಗಲ್ ಪೇ ಮುಂಖಾಂತರ 2,25,001 ರೂಪಾಯಿ ಹಣವನ್ನು ಆರೋಪಿತರ ಖಾತೆಗಳಿಗೆ ಪಾವತಿ ಮಾಡಿದ್ದರು.ಆದರೆ ಯಾವುದೇ ಉದ್ಯೋಗ ನೀಡದೇ ರೂ.2,25,001 ಹಣವನ್ನು ಪಡೆದು ವಂಚಿಸಿದ್ದ ಕುರಿತು ನಿಶ್ಮಿತಾ ಅವರು 2024ರ ಜನವರಿ ತಿಂಗಳಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.