ಫೆ.17ರಿಂದ ಫೆ.24ರವರೆಗೆ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ-ಮಾದರಿ ಕಾರ್ಯಕ್ರಮಕ್ಕೆ ನಡೆದಿದೆ ಭರದ ಸಿದ್ದತೆ, ದಿನನಿತ್ಯ ನೂರಾರು ಮಂದಿಯಿಂದ ಕರಸೇವೆ

0

ಪುತ್ತೂರು : ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಲ್ಪಡುವ ಏಕೈಕ ಕ್ಷೇತ್ರವಾಗಿರುವ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ದತೆ ನಡೆಯುತ್ತಿದೆ. ಮಾದರಿ ಬ್ರಹ್ಮಕಲಶೋತ್ಸವವಾಗಿ ಆಗಬೇಕೆಂಬ ನಿಟ್ಟಿನಲ್ಲಿ ಪ್ರತಿ ದಿನ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಕರಸೇವೆಯಲ್ಲಿ ಭಾಗಿಯಾಗುತ್ತಿದ್ದಾರೆ. ದೇವಸ್ಥಾನಕ್ಕೆ ಬರುವ ಸಂಪರ್ಕ ರಸ್ತೆ ಸಂಪೂರ್ಣವಾಗಿ ಅಭಿವೃದ್ದಿಯಾಗಿದೆ. ಮುಖ್ಯ ರಸ್ತೆಯಲ್ಲಿ ಮಹಾದ್ವಾರ ನಿರ್ಮಾಣವಾಗಿದೆ.

ವಲ್ಮೀಕದಲ್ಲಿ ನೆಲೆನಿಂತ ದೇವರು ಶ್ರೀ ಸುಬ್ರಹ್ಮಣ್ಯ ಸ್ವಾಮಿ:
ಪ್ರಕೃತಿ ಸೌಂದರ‍್ಯದ ನೆಲೆಬೀಡು, ತಂಪು ತಂಪು ಹಸಿರಿನಿಂದ, ಬೆಟ್ಟ, ಗುಡ್ಡ, ಬಯಲುಗಳಿಂದ ಸಮೃದ್ಧವಾದ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದಲ್ಲಿ “ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನವಿದೆ.ಇಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಪೂರ್ವಜರು ಇಲ್ಲಿ ಗುಹೆಯ ರೂಪದಲ್ಲಿದ್ದ ಸ್ಥಳದಲ್ಲಿ “ಶ್ರೀ ಸುಬ್ರಹ್ಮಣ್ಯ ದೇವರನ್ನು” ಆರಾಧಿಸುತ್ತಾ ಬರುತ್ತಿರುವ ಪುಣ್ಯ ತಾಣ.ಇಲ್ಲಿ “ವಲ್ಮೀಕ” ಹುತ್ತದ ರೂಪದಲ್ಲಿ ನೆಲೆನಿಂತ ಶ್ರೀ ಸುಬ್ರಹ್ಮಣ್ಯ ದೇವರ ದೇವಸ್ಥಾನ ಪರಮ ಪವಿತ್ರವಾಗಿದ್ದು,ಭಕ್ತರ ಶ್ರದ್ಧಾ ಭಕ್ತಿ, ಶಕ್ತಿಯ ತಾಣವಾಗಿದೆ. ತನ್ನ ಕಾರಣಿಕ ಶಕ್ತಿಗಳಿಂದ ನಂಬಿ ಬಂದ ಭಕ್ತ ಜನರಿಗೆ ತಾಯಿ ಸಮಾನ ನೆಲೆಯಾಗಿದೆ. ಪೌರಾಣಿಕ ಹಿನ್ನೆಲೆಯ ಪ್ರಕಾರ ತಾರಕಾಸುರ, ಪದ್ಮಾಸುರ ಮೊದಲಾದ ದೈತ್ಯ ರಾಕ್ಷಸರನ್ನು ಸಂಹಾರ ಮಾಡಿ, ಲೋಕ ಕಲ್ಯಾಣವನ್ನುಂಟುಮಾಡಿದ “ಶ್ರೀ ಕುಮಾರ ಸ್ವಾಮಿಯೇ” ಶ್ರೀ ಸುಬ್ರಹ್ಮಣ್ಯ ದೇವರಾಗಿ ತನ್ನನ್ನು ನಂಬಿರುವ ಭಕ್ತ ಜನರ ಅಭೀಷ್ಟಗಳನ್ನು ನೆರವೇರಿಸಿ, ದುಃಖ ದುಮ್ಮಾನಗಳನ್ನು ದೂರಮಾಡಿ, ವಿದ್ಯೆ, ಬುದ್ಧಿ, ಸ್ಥಾನ ಮಾನ ಗೌರವಗಳನ್ನು ನೀಡಿ ಅನುಗ್ರಹಿಸುತ್ತಾ ಬರುತ್ತಿದ್ದಾನೆ ಎಂಬ ಪವಿತ್ರ ನಂಬಿಕೆ ಎಲ್ಲಾ ಭಕ್ತ ಸಮುದಾಯದವರದ್ದು.

“ವಲ್ಮೀಕ”ಕ್ಕೆ ಪೂಜೆ ಸಲ್ಲುವ ಶ್ರೀ ಕ್ಷೇತ್ರ ನಳೀಲಿನಲ್ಲಿ ಶ್ರೀ ಸುಬ್ರಹ್ಮಣ್ಯ ದೇವರು ಸುಮಾರು ಐದರಿಂದ ಐದೂವರೆ ಅಡಿ ಎತ್ತರವಿರುವ “ವಲ್ಮೀಕ” ಹುತ್ತದಲ್ಲಿ ನೆಲೆ ನಿಂತು ದಿನನಿತ್ಯ ಶ್ರೀ ಅರ್ಚಕರಿಂದ ಪೂಜೆ ಕೈಗೊಳ್ಳುವರು, ಆಳೆತ್ತರಕ್ಕೆ ಬೆಳೆದು ನಿಂತ ಈ “ವಲ್ಮೀಕ”ವು ಕೆಲವೊಮ್ಮೆ ಪವಾಡ ಸದೃಶವಾಗಿ ಕಿರಿದಾಗುವುದೂ ಇದೆ. ನಾಗಾರಾಧನೆ, ನಾಗತಂಬಿಲ, ಶ್ರೀ ಸತ್ಯನಾರಾಯಣ ಪೂಜೆ ಇತ್ಯಾದಿ ಪವಿತ್ರ ಕಾರ್ಯಕ್ರಮಗಳು ಶ್ರೀಕ್ಷೇತ್ರದಲ್ಲಿ ನಡೆದುಕೊಂಡು ಬರುತ್ತಿರುವುದು, ಎಲ್ಲರ ಭಕ್ತಿ, ಶ್ರದ್ಧೆ, ನಂಬಿಕೆಗಳಿಗೆ ಕಾರಾಣವಾಗಿದೆ. ತನ್ನದೇ ಆದ ಕಾರಣಿಕ ಶಕ್ತಿ ಹೊಂದಿರುವ ಶ್ರೀ ಕ್ಷೇತ್ರದ ದೇವರು ಶ್ರೀ ಸುಬ್ರಹ್ಮಣ್ಯ ಸಂತಾನ ಭಾಗ್ಯ ಇಲ್ಲದವರಿಗೆ ಸಂತಾನ ಭಾಗ್ಯ, ವಿವಾಹ ಆಗದವರಿಗೆ ಕಂಕಣ ಭಾಗ್ಯ, ಶನಿದೋಷ ನಿವಾರಣೆ, ಸರ್ಪದೋಷ ನಿವಾರಣೆಗಾಗಿ ಪ್ರಾರ್ಥಿಸುವ ತನ್ನ ಭಕ್ತಜನರಿಗೆ ಅನುಗ್ರ ನೀಡುತ್ತಾ ಬರುತ್ತಿದ್ದಾರೆ ಎಂಬ ನಂಬಿಕೆ ಸದಾ ಜೀವಂತವಾಗಿದೆ. ಶ್ರೀ  ಸುಬ್ರಹ್ಮಣ್ಯ ದೇವರು ನಂಬಿದವರನ್ನು ಕೈ ಬಿಡುವುದಿಲ್ಲ ಎಂಬುದಕ್ಕೆ ಇಲ್ಲಿಯ ಬೆಳವಣಿಗೆಯೇ ಕಾರಣ ನಿದರ್ಶನವಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ಇಲ್ಲಿಗೆ ಬರುವಾಗ ಬಯಲುದಾರಿಯಾಗಿ ಬರಬೇಕಾಗಿತ್ತು. ಇದೀಗ ಕ್ಷೇತ್ರದ ಸಂಪೂರ್ಣ ಚಿತ್ರಣವೇ ಬದಲಾಗಿದೆ.

ಬರಗಾಲದಲ್ಲೂ ಇಲ್ಲಿ ನೀರ ಸೆಲೆ:
ಕ್ಷೇತ್ರದ ಸುತ್ತ ಮುತ್ತ ಬಯಲು ಗದ್ದೆ- ತೋಟಗಳು ಬರಗಾಲದ ಕಾಲದಲ್ಲೂ ಹಚ್ಚ ಹಸಿರಾಗಿರುವ ತಾಣ. ದೇವಸ್ಥಾನದ ಸುತ್ತೆಲ್ಲಾ ಜಿಣುಗುವ ನೀರ ಸೆಲೆ ಇಲ್ಲಿಯ ವಿಶೇಷತೆ.

ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆಯಾಗುವ ಏಕೈಕ ಕ್ಷೇತ್ರ
ಶ್ರೀ ಕ್ಷೇತ್ರ ನಳೀಲಿನಲ್ಲಿ ಪ್ರಧಾನವಾಗಿ ಹುತ್ತಕ್ಕೆ ಪೂಜೆ ಸಲ್ಲುತ್ತದೆ.ಇಲ್ಲಿ ಸಂತಾನ ಭಾಗ್ಯಕ್ಕಾಗಿ,ಕಂಕಣ ಭಾಗ್ಯ,ಜಲ ಪ್ರಾಪ್ತಿಗೆ ವಿಶೇಷವಾಗಿ ಪ್ರಾರ್ಥಿಸಿಕೊಂಡು ತಮ್ಮ ಇಷ್ಟಾರ್ಥ ಈಡೇರಿಸಿಕೊಂಡ ಭಕ್ತರು ಹಲವರಿದ್ದಾರೆ.

ಹೊರರಾಜ್ಯದಿಂದಲೂ ಭಕ್ತರ ಆಗಮನ:
ಶ್ರೀ ಕ್ಷೇತ್ರಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತಾದಿಗಳು ಆಗಮಿಸಿ ವಿಶೇಷ ಸೇವೆ ಮಾಡಿಸುತ್ತಿದ್ದಾರೆ.ಶ್ರೀ ಕ್ಷೇತ್ರಕ್ಕೆ ಕೇರಳ ,ತಮಿಳುನಾಡು,ಮಹಾರಾಷ್ಟ್ರ,ಆಂದ್ರಪ್ರದೇಶ,ತೆಲಂಗಾಣ ರಾಜ್ಯದಿಂದಲೂ ಭಕ್ತರು ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ.ವಿವಿಧ ತರವಾಡು ಕ್ಷೇತ್ರಗಳ ಪ್ರಶ್ನಾಚಿಂತನೆಯಲ್ಲೂ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಕುರಿತೂ ಕಂಡುಬರುತ್ತಿದೆ.ಹೀಗೆ ಶ್ರೀಕ್ಷೇತ್ರಕ್ಕೆ ಉತ್ಸವದ ಸಮಯದ ಹೊರತಾಗಿಯೂ ಇತರ ದಿನಗಳಲ್ಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ.ಇಲ್ಲಿ ವಿಶೇಷವಾಗಿ ನಾಗರಪಂಚಮಿ, ಗಣೇಶ ಚತುರ್ಥಿ,ಚಂಪಾಷಷ್ಟಿ ಮಹೋತ್ಸವ, ದೀಪಾವಳಿ ಉತ್ಸವ,ಸಂಕ್ರಮಣದಂದು ರಂಗಪೂಜೆ ,ಸಂಕಷ್ಟಿಯಂದು ಗಣಹೋಮ ,ವಾರ್ಷಿಕ ಜಾತ್ರೋತ್ಸವ,ಶ್ರೀ ಸತ್ಯನಾರಾಯಣ ಪೂಜೆ ನಡೆಯುತ್ತದೆ.

20 ವರ್ಷಗಳಲ್ಲಿ ಬೆಳಗಿದ ಕ್ಷೇತ್ರ:
ಇಪ್ಪತ್ತು ವರ್ಷಗಳ ಹಿಂದೆ ಅಂದರೆ 2004ರಲ್ಲಿ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವದ ನಂತರ ಶ್ರೀ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಅಭೂತಪೂರ್ವ  ಬೆಳವಣಿಗೆ ಕಂಡಿದೆ. ಅರ್ಚಕರ ಮನೆ, ಅತಿಥಿ ಗೃಹ, ಪಾಕ ಶಾಲೆ, ಅನ್ನ ಛತ್ರ, ದೇವಸ್ಥಾನದ ಸುತ್ತು ಚಪ್ಪರ ನಿರ್ಮಿಸುವ ಮೂಲಕ ದೇವಸ್ಥಾನದ ಪರಿಧಿಯನ್ನು ನಿರ್ಮಿಸಿಕೊಂಡು ಅಭಿವೃದ್ಧಿ ಕಾರ್ಯಗಳು ನಡೆದಿರುತ್ತವೆ. ಬಂದು ಹೋಗಲು ಸುಸಜ್ಜಿತವಾದ ಮಾರ್ಗ ನಿರ್ಮಾಣಗೊಂಡಿದೆ. ಭಕ್ತ ಜನರ ವಿಶಾಲ ಮನೋಭಾವನೆಯೊಂದಿಗೆ ದೈವಾನುಗ್ರಹ ಲಭಿಸಿದೆ. ಇದೀಗ ಶ್ರೀ ಕ್ಷೇತ್ರವು ಮತ್ತೊಮ್ಮೆ ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಂಡಿದೆ. ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವವು ಫೆ.17ರಿಂದ ಫೆ.24ರವರೆಗೆ ನಡೆಯಲಿದೆ.

ದೇವಸ್ಥಾನದ ಗರ್ಭಗುಡಿ ಹಾಗೂ ಪ್ರಸಾದ ಮಂಟಪಕ್ಕೆ ತಾಮ್ರ ಹೊದಿಸಲಾಗಿದೆ. ನೆಲಕ್ಕೆ ಗ್ರಾನೈಟ್ ಅಳವಡಿಸಲಾಗಿದೆ. ಸುಂದರವಾದ ಭಕ್ತ ಪ್ರಧಾನ ವಸಂತ ಮಂಟಪವು ನಿರ್ಮಾಣಗೊಂಡಿದೆ. ಇಲ್ಲಿನ ದೈವಸ್ಥಾನದ ಶ್ರೀ ವ್ಯಾಘ್ರಚಾಮುಂಡಿ, ಶ್ರೀ ರುದ್ರಚಾಮುಂಡಿ, ಶ್ರೀ ರಕ್ತೇಶ್ವರಿ ಗುಡಿ, ಶ್ರೀ ಗುಳಿಗ, ಪರಿವಾರ ದೈವಗಳಾಗಿ ಭಕ್ತ ಜನರ ಬದುಕನ್ನು ಪಾವನಗೊಳಿಸಿದೆ. ಶ್ರೀ ನಾಗನ ಕಟ್ಟೆ ನಿರ್ಮಾಣಗೊಂಡಿದ್ದು  ಆಶ್ಲೇಷ ಬಲಿ, ಸರ್ಪ ಸಂಸ್ಕಾರ, ರಂಗಪೂಜೆ, ಕಾರ್ತಿಕ ಪೂಜೆ, ನಾಗತಂಬಿಲ ಮೊದಲಾದ ಸೇವೆಗಳು ಯಥಾ ಪ್ರಕಾರವಾಗಿ ನಡೆಯುತ್ತವೆ. ಭಕ್ತ ವೃಂದದವರಿಂದ ಕಳೆದ ಕೆಲವು ತಿಂಗಳುಗಳಿಂದ ಕರ ಸೇವೆ ನಡೆಯುತ್ತಿದ್ದು ಹಬ್ಬದ ವಾತಾವರಣ ಶ್ರೀ ಕ್ಷೇತ್ರದಲ್ಲಿ ಆರಂಭಗೊಂಡಿರುವುದು ಜನ-ಮನದ ಭಕ್ತಿ, ಶ್ರದ್ಧೆ ಉತ್ಸಾಹಗಳಿಗೆ ಕಾರಣವಾಗಿದೆ. ಮನೆ – ಮನಗಳಲ್ಲಿ ಸಂಭ್ರಮೋಲ್ಲಾಸ ಮನೆ ಮಾಡಿದೆ.

ಗಿರಿಧರ ಶೆಟ್ಟಿ ಅವರ ಸೇವಾರೂಪದಲ್ಲಿ ಮಹಾದ್ವಾರ ನಿರ್ಮಾಣ:
ಮಾಡಾವು-ಬೆಳ್ಳಾರೆ ರಸ್ತೆಯ ಅಂಕತಡ್ಕದಿಂದ ಸ್ವಲ್ಪ ಮುಂದಕ್ಕೆ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ನೂತನ ಮಹಾದ್ವಾರ ನಿರ್ಮಾಣವಾಗಿದೆ.ದೇವಸ್ಥಾನಕ್ಕೆ ನೂತನ ಮಹಾದ್ವಾರ ನಿರ್ಮಾಣವಾಗಬೇಕೇಂಬ ಆಡಳಿತ ಮಂಡಳಿಯ ಕನಸಿಗೆ ಕೈ ಜೋಡಿಸಿದ್ದು ಮಂಗಳೂರು ಸಾಗರ್‌ಕನ್ ಸ್ಟ್ರಕ್ಷನ್‌ನ ಗಿರಿಧರ ಶೆಟ್ಟಿ ಅವರು.ಸಾಮಾಜಿಕ ಹಾಗೂ ಧಾರ್ಮಿಕ ,ಉದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಚತುರತೆಯಿಂದ ಕಾರ್ಯ ನಿರ್ವಹಿಸುತ್ತಿರುವ ಮಂಗಳೂರು ಸಾಗರ್‌ ಕನ್ ಸ್ಟ್ರಕ್ಷನ್‌ನ ಗಿರಿಧರ ಶೆಟ್ಟಿ ಅವರು ಶ್ರೀಕ್ಷೇತ್ರಕ್ಕೆ ಮಹಾದ್ವಾರವನ್ನು ಸೇವಾ ರೂಪದಲ್ಲಿ ನಿರ್ಮಿಸಿಕೊಟ್ಟಿದ್ದಾರೆ.ಇದರ ನಿರ್ಮಾಣ ಕಾಮಗಾರಿಯನ್ನು ಪುತ್ತೂರಿನ ಕುಂಕುಮ್‌ಅಸೋಸಿಯೇಟ್ಸ್‌ನವರು ಕ್ಲಪ್ತ ಸಮಯದಲ್ಲಿ ನಿರ್ವಹಿಸಿದ್ದಾರೆ.

ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವದ ಸಿದ್ದತೆಯಲ್ಲಿದ್ದಾಗ ದೇವಸ್ಥಾನದ ಸಂಪರ್ಕ ರಸ್ತೆಯೂ ಕಾಂಕ್ರೀಟಿಕರಣವಾಗಬೇಕೆಂಬ ಬಯಕೆ ಊರ ಭಕ್ತರಲ್ಲಿತ್ತು.ಇದಕ್ಕೆ ಪೂರಕವಾಗಿ ಕ್ಷೇತ್ರದ ಭಕ್ತರೂ ,ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅಶೋಕ್‌ಕುಮಾರ್‌ರೈ ಅವರು ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆಗೆ ಆಗಮಿಸಿ ಸಲಹೆ ಸೂಚನೆಗಳನ್ನು ನೀಡಿದರು.ಆ ಸಂದರ್ಭದಲ್ಲಿ ಕ್ಷೇತ್ರ ಭಕ್ತಾದಿಗಳ ಹಾಗೂ ಆಡಳಿತ ಮಂಡಳಿಯ ಆಶಯದಂತೆ ಅಶೋಕ್‌ಕುಮಾರ್‌ರೈ ಅವರನ್ನು ಶ್ರೀಕ್ಷೇತ್ರ ನಳೀಲು ಇದರ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.ಇದಕ್ಕೆ ಪೂರಕವಾಗಿ ದೇವಸ್ಥಾನದ ಸಂಪರ್ಕ ರಸ್ತೆಯನ್ನು ಬ್ರಹ್ಮಕಲಶೋತ್ಸವಕ್ಕೆ ಮುನ್ನ ಅಭಿವೃದ್ದಿ ಮಾಡುವ ಭರವಸೆಯನ್ನು ಶಾಸಕ ಆಶೋಕ್‌ಕುಮಾರ್‌ರೈ ನೀಡಿದರು.

ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆಯಲ್ಲಿ ನೀಡಿದ ಭರವಸೆಯಂತೆ ಶಾಸಕ ಆಶೋಕ್‌ಕುಮಾರ್‌ರೈ ಅವರು ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಂಪರ್ಕ ರಸ್ತೆಯ ಅಭಿವೃದ್ದಿಗೆ 20 ಲಕ್ಷ ರೂ.ಅನುದಾನ ನೀಡಿದ್ದು, ರಸ್ತೆಯ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯಾಗಿದೆ.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಂದ 10ಲಕ್ಷ ರೂ ಅನುದಾನ:
ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯಭಾಗ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದು,ಆ ಭಾಗದಲ್ಲಿ ರಸ್ತೆ ಅಭಿವೃದ್ದಿ ನಿಟ್ಟಿನಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಕ್ತವೃಂದ ಶಾಸಕಿ ಭಾಗೀರಥಿ ಮುರುಳ್ಯ ಅವರಲ್ಲಿ ಮನವಿ ಮಾಡಿದಾಗ ,ಮನವಿಗೆ ಪೂರಕವಾಗಿ ಸ್ಪಂದಿಸಿ 10 ಲಕ್ಷ ರೂ ಅನುದಾನ ನೀಡಿದ್ದಾರೆ.ಅದರ ಗುದ್ದಲಿಪೂಜೆ ನಡೆದಿದ್ದು,ಬ್ರಹ್ಮಕಲಶೋತ್ಸವದ ಬಳಿಕ ಕಾಮಗಾರಿ ಆರಂಭವಾಗಲಿದೆ.

ಸಾಂಸ್ಕೃತಿಕ ಲೋಕದ ಅನಾವರಣ:
ಫೆ.17ರಿಂದ ಫೆ.22ರವರೆಗೆ ಪ್ರತಿದಿನ ಬೆಳಿಗ್ಗೆಯಿಂದ ರಾತ್ರಿಯವರೆಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.ಫೆ.17ರಣದು ಸಂಜೆ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು* ಇವರು ಅರ್ಪಿಸುವ ಕೊಲ್ಲೂರು ಶ್ರೀ ಮೂಕಾಂಬಿಕಾ ನೃತ್ಯರೂಪಕ, ಫೆ.18ರಂದು ಬೆಳಿಗ್ಗೆ 11 ರಿಂದ  ಪಾಲಕ್ಕಾಡ್ ಕೈಲಾಸಪತಿ, ವಿದ್ವಾನ್ ಸಿ.ಪಿ.ವ್ಯಾಸವಿಠಲ್, ವಿದ್ವಾನ್ ನಿಕ್ಷಿತ್, ಪ್ರಾರ್ಥನಾ, ಆರಾಧನಾ ಇವರಿಂದ ಗಾಯನ ಗೋಷ್ಟಿ, ಮಧ್ಯಾಹ್ನ ಗಂಟೆ 1.30ರಿಂದ ಯಕ್ಷಶ್ರೀ ಹವ್ಯಾಸಿ ಬಳಗ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 5ರಿಂದ ವಿಶ್ವಮೋಹನ ನೃತ್ಯ ಕಲಾ ಶಾಲೆ ಕಡಬ ಇವರಿಂದ ನೃತ್ಯ ವೈಭವ ,ರಾತ್ರಿ 9 ರಿಂದ ದೇವದಾಸ್ ಕಾಪಿಕಾಡ್ ಅವರ ಚಾಪರ್ಕ ಕಲಾವಿದ ರಿಂದ ನಾಟಕ – ಪುದರ್ ದೀದಾಂಡ್ ನಡೆಯಲಿದೆ.

ಫೆ.19ರಿಂದ ಧೀಶಕ್ತಿ ಮಹಿಳಾ ಯಕ್ಷ ಬಳಗ ತೆಂಕಿಲ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ ಸಂಜೆ 4 ರಿಂದ ಮಣಿಕ್ಕರ ಹಿ.ಪ್ರಾ.ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 5 ರಿಂದ ಸುಸ್ವರ ಮೆಲೋಡಿಯಸ್ ಉಪ್ಪಿನಂಗಡಿ ಇವರಿಂದ ಭಕ್ತಿ-ಭಾವ-ಸಂಗಮ, ರಾತ್ರಿ 9 ರಿಂದ ಕಲಾ ಸಂಗಮ ಕಲಾವಿದರಿಂದಶಿವದೂತೆ ಗುಳಿಗೆ ಪ್ರದರ್ಶನವಾಗಲಿದ ಫೆ.20ರಂದು ಮಧ್ಯಾಹ್ನ1.30ರಿಂದ ಶ್ರವಣರಂಗ ಸಾಂಸ್ಕೃತಿಕ ಪ್ರತಿಷ್ಠಾನ ಸವಣೂರು ಇವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 4 ರಿಂದ ಮಣಿಕ್ಕರ ಸರಕಾರಿ ಪ್ರೌಢಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 5 ರಿಂದ  ಜಾಝ್‌ & ಮ್ಯೂಸಿಕ್‌JAAZ &  ಪಾಲ್ತಾಡು ಇವರಿಂದ ಭಕ್ತಿ ಸಂಗೀತ, ರಾತ್ರಿ 9 ರಿಂದ  ಮಯೂರ ಪ್ರತಿಷ್ಠಾನ ರಿ.ಮಂಗಳೂರು ಇವರಿಂದ ಶರಣ ಸೇವಾ ರತ್ನ – ಶ್ರೀನಿವಾಸ ಕಲ್ಯಾಣ ಯಕ್ಷಗಾನ ಬಯಲಾಟ, ಫೆ.21ರಂದು ಮಧ್ಯಾಹ್ನ 2 ರಿಂದ ಧೀಶಕ್ತಿ ಬಾಲಿಕಾ ಯಕ್ಷ ಬಳಗ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 4ರಿಂದ ಪಾಲ್ತಾಡಿ ಸ.ಹಿ.ಪ್ರಾ. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 5ರಿಂದ ಕಲಾಮಂದಿರ ಬೆಳ್ಳಾರೆ ಇವರಿಂದ ನೃತ್ಯ ಸಂಭ್ರಮ, ರಾತ್ರಿ 9 ರಿಂದ ಅಮ್ಮ ಕಲಾವಿದೆರ್ ಕುಡ್ಲ ಇವರಿಂದ ಅಲೇ…! ಬುಡಿಯೆರ್ ಗೆ…ನಾಟಕ ಪ್ರದರ್ಶನವಾಗಲಿದೆ. ಫೆ.22ರಂದು ಮಧ್ಯಾಹ್ನ 2ರಿಂದ ಗುರುಕುಲಾ ಕಲಾ ಕೇಂದ್ರ ಪುರುಷರಕಟ್ಟೆಇವರಿಂದ ನೃತ್ಯ-ಗಾನ-ಸಂಭ್ರಮ, ಸಂಜೆ 5.30ರಿಂದ ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಇವರಿಂದ ಸತೀಶ್ ಶೆಟ್ಟಿ ಪಟ್ಲ ಸಾರಥ್ಯದಲ್ಲಿ *ಕಲ್ಯಾಣತ್ರಯ ಯಕ್ಷಗಾನ ಬಯಲಾಟ ನಡೆಯಲಿದೆ.

ಭಜನಾ ಸಂಕೀರ್ತನೆ
ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ 9ರಿಂದ ಜಿಲ್ಲೆಯ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ.

ದೇವರ ಸಂಕಲ್ಪದಂತೆ ಎಲ್ಲಾ ಕಾರ್ಯ-ಸಂತೋಷ್‌ ಕುಮಾರ್‌ ರೈ
ದೇವಸ್ಥಾನದಲ್ಲಿ ಎಲ್ಲಾ ಕಾರ್ಯಗಳು ದೇವರ ಸಂಕಲ್ಪದಂತೆ ನಡೆಯುತ್ತಿದೆ.ನಂಬಿದ ಭಕ್ತರನ್ನು ನಳೀಲು ಶ್ರೀ ಸುಬ್ರಹ್ಮಣ್ಯ ದೇವರು ಎಂದಿಗೂ ಕೈ ಬಿಡುವುದಿಲ್ಲ.ಕ್ಷೇತ್ರದ ಬೆಳವಣಿಗೆಯಲ್ಲಿ ಭಕ್ತಾದಿಗಳೂ ನಿರಂತರವಾಗಿ ಸಹಕಾರ ನೀಡುತ್ತಿದ್ದಾರೆ.20 ವರ್ಷಗಳ ಬಳಿಕ ಮತ್ತೆ ಶ್ರೀಕ್ಷೇತ್ರವು ಬ್ರಹ್ಮಕಲಶೋತ್ಸವಕ್ಕೆ ಅಣಿಯಾಗಿದೆ.ಎಲ್ಲಾ ದೇವತಾ ಕಾರ್ಯಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.
-ಸಂತೋಷ್‌ಕುಮಾರ್‌ರೈ ನಳೀಲು ,ಆಡಳಿತ ಮೊಕ್ತೇಸರರು ,ಅಧ್ಯಕ್ಷರು ಬ್ರಹ್ಮಕಲಶೋತ್ಸವ ಸಮಿತಿ ಶ್ರೀ ಕ್ಷೇತ್ರ ನಳೀಲು

LEAVE A REPLY

Please enter your comment!
Please enter your name here