ಪುತ್ತೂರು:ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರ ಬ್ಯಾಗ್‌ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದ ಪರ್ಸ್ ಕಳವಾದ ಘಟನೆ ಫೆ.12ರಂದು ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಮೈಸೂರಿಗೆ ಹೊರಟ ಬಸ್‌ನಲ್ಲಿ ನಡೆದಿದೆ.
ವಿಟ್ಲ ಕಾನತಡ್ಕ ನಿವಾಸಿ ಹರೀಶ್ ಎಂಬರ ಪತ್ನಿ ರೇಷ್ಮಾ ಅವರು ಚಿನ್ನಾಭರಣವಿದ್ದ ಪರ್ಸ್ ಕಳೆದುಕೊಂಡವರು.ಮೂಲತಃ ಗುಂಡ್ಲುಪೇಟೆಯವರಾಗಿರುವ ರೇಷ್ಮಾ ಅವರು ಫೆ.12ರಂದು ಮಗಳೊಂದಿಗೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮೈಸೂರಿಗೆ ತೆರಳುವ ಬಸ್ಸೇರಿದ್ದರು.ಉಚಿತ ಪ್ರಯಾಣಕ್ಕಾಗಿ ಬಸ್ ನಿರ್ವಾಹಕರಿಗೆ ಆಧಾರ್ ಕಾರ್ಡ್ ತೋರಿಸುವ ಸಂದರ್ಭ ಬ್ಯಾಗ್‌ನ ಒಳಗೆ ಇದ್ದ ಚಿನ್ನಾಭರಣವಿದ್ದ ಸಣ್ಣ ಪರ್ಸ್ ಕಳವಾಗಿರುವುದು ಬೆಳಕಿಗೆ ಬಂದಿತ್ತು.ತಕ್ಷಣ ಈ ವಿಚಾರವನ್ನು ನಿರ್ವಾಹಕರ ಗಮನಕ್ಕೆ ತಂದು ಬಸ್ಸಲ್ಲಿದ್ದ ಪ್ರಯಾಣಿಕರಲ್ಲಿ ವಿಚಾರಿಸಲಾಗಿತ್ತು.ಆದರೆ ಯಾವುದೇ ಪ್ರಯೋಜನವಾಗದೇ ಇದ್ದಾಗ ರೇಷ್ಮಾ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಕಳವಾದ ಪರ್ಸ್‌ನಲ್ಲಿ ಒಟ್ಟು ಸುಮಾರು 136 ಗ್ರಾಮ್‌ಗಳಷ್ಟು ಚಿನ್ನಾಭರಣವಿತ್ತು.ಅಂದಾಜು ಮೌಲ್ಯ ರೂ.7,94,೦೦೦ ಎಂದು ದೂರಿನಲ್ಲಿ ತಿಳಿಸಲಾಗಿದೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.