ರಾಮಕುಂಜ: ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಕಡಬ ತಾಲೂಕು ಘಟಕ ಹಾಗೂ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿರಿಯ ಪ್ರಾಥಮಿಕ ಶಾಲೆ ರಾಮಕುಂಜ ಇದರ ಸಹಯೋಗದಲ್ಲಿ ‘ ಸ್ಪಷ್ಟ ಓದು-ಶುದ್ಧ ಬರಹ ಹಾಗೂ ಸಾಹಿತ್ಯ ಜಾಗೃತಿ’ ಕಾರ್ಯಕ್ರಮ ಫೆ.21ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ ನಾರಾಯಣ ಭಟ್ ಟಿ. ಅವರು ದೀಪ ಬೆಳಗಿಸಿ ಉದ್ಘಾಟಿಸಿ, ವಿದ್ಯಾರ್ಥಿಗಳು ಮಾತೃ ಭಾಷೆಯಲ್ಲಿ ಕಥೆ, ಕವನಗಳನ್ನು ರಚಿಸುವುದರ ಮೂಲಕ ಕನ್ನಡ ಭಾಷೆ, ನಾಡಿನ ಸಂಸ್ಕೃತಿಯನ್ನು ಬೆಳೆಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಪ್ರೋತ್ಸಾಹ ನೀಡುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ ಕಡಬ ತಾಲೂಕು ಘಟಕದ ಅಧ್ಯಕ್ಷ ಕೆ.ಸೇಸಪ್ಪ ರೈಯವರು ಮಾತನಾಡಿ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿಕೊಳ್ಳಲು ಸಾಹಿತ್ಯ ಪರಿಷತ್ತು ವಿವಿಧ ಘಟಕಗಳನ್ನಾಗಿ ಮಾಡಿ ವಿದ್ಯಾರ್ಥಿಗಳಿಗೆ ಕಥೆ, ಕವನ, ಪ್ರಬಂಧ ರಚನೆ, ಸ್ಪಷ್ಟ ಓದು ಹಾಗೂ ಶುದ್ಧ ಬರಹ ಕಾರ್ಯಕ್ರಮ ನಡೆಸುತ್ತಾ ಬಂದಿದೆ. ವಿದ್ಯಾರ್ಥಿಗಳು ಇದರಲ್ಲಿ ತೊಡಗಿಕೊಂಡು ಶಿಸ್ತು, ಕ್ರಮಬದ್ಧತೆ ಉಳಿಸಿಕೊಳ್ಳುವ ಪ್ರಯತ್ನ ಮಾಡಿ. ಉತ್ತಮ ಮೌಲ್ಯಗಳನ್ನು ಬೆಳೆಸಿಕೊಂಡಾಗ ಸಾಹಿತ್ಯ ಉಳಿಯುತ್ತದೆ ಎಂದು ಹೇಳಿದರು. ಕಸಾಪ ಕಡಬ ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡರವರು ನೀತಿ ಆಧಾರಿತ ಕಥೆಯನ್ನು ಹೇಳತ್ತಾ, ಪುಸ್ತಕಗಳನ್ನು ಓದುವುದರ ಮೂಲಕ ಸಾಹಿತ್ಯದ ಬಗ್ಗೆ ಒಲವು ಮೂಡಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿದ್ದ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಸುಶೀಲ ಸ್ವಾಗತಿಸಿದರು. ಸಾಹಿತ್ಯಾಭಿರುಚಿಯನ್ನು ಬೆಳೆಸಲು ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಶುದ್ಧ ಬರಹ ಹಾಗೂ ಸ್ಪಷ್ಟ ಓದು ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಕ.ಸಾ.ಪ ದ ವತಿಯಿಂದ ಗೌರವಿಸಲಾಯಿತು. ವೇದಿಕೆಯಲ್ಲಿ ಕ.ಸಾ.ಪದ ಸದಸ್ಯರಾದ ಹರೀಶ್ ಆಚಾರ್ಯ ಎಂ. ಉಪಸ್ಥಿತರಿದ್ದರು. ಸಹಶಿಕ್ಷಕಿ ನಿರ್ಮಲ ಕಾರ್ಯಕ್ರಮ ನಿರೂಪಿಸಿದರು. ಕ.ಸಾ.ಪ ಕೋಶಾಧಿಕಾರಿ ಬಾಲಚಂದ್ರ ಮುಚ್ಚಿಂತಾಯ ವಂದಿಸಿದರು.