‘ನನ್ನ ಧರ್ಮಪತ್ನಿಯ ಫೋಟೋ ಹಾಕಿ ಅಪಪ್ರಚಾರ ಮಾಡಲಾಗುತ್ತಿದೆ’-ಫೆಸ್ಬುಕ್ ನಕಲಿ ಖಾತೆಗಳ ಹಾವಳಿಗೆ ಸರಕಾರ ಕಡಿವಾಣ ಹಾಕಬೇಕಿದೆ- ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಹರೀಶ್ ಪೂಂಜ ಆಗ್ರಹ

0

ಬೆಳ್ತಂಗಡಿ: ನನ್ನ ಧರ್ಮಪತ್ನಿಯ ಫೋಟೋ ಹಾಕಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅಳಲು ವ್ಯಕ್ತಪಡಿಸಿರುವ ಶಾಸಕ ಹರೀಶ್ ಪೂಂಜ ಅವರು ಫೆಸ್‌ಬುಕ್‌ನ ನಕಲಿ ಖಾತೆಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ ಘಟನೆ ವಿಧಾನಸಭಾ ಅಧಿವೇಶನದಲ್ಲಿ ನಡೆದಿದೆ. ಹರೀಶ್ ಪೂಂಜರ ಆಗ್ರಹಕ್ಕೆ ಧ್ವನಿಗೂಡಿಸಿರುವ ಸಚಿವ ದಿನೇಶ್ ಗುಂಡೂರಾವ್ ಅವರು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.


ಹರೀಶ್ ಪೂಂಜ ಆಗ್ರಹ-ದಿನೇಶ್ ಗುಂಡೂರಾವ್ ಸ್ಪಂದನೆ:
ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವ ಕೆಲಸ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಮುಖ್ಯಮಂತ್ರಿ, ಪೊಲೀಸ್ ಇಲಾಖೆ, ರಾಜ್ಯಪಾಲರ ಹೆಸರಿನಲ್ಲಿ ನಕಲಿ ಖಾತೆಗಳು ಇರುವ ಕುರಿತು ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ನಕಲಿ ಫೆಸ್ಬುಕ್ ಹಾವಳಿಯನ್ನು ತಡೆಗಟ್ಟಲು ಮೊಕದ್ದಮೆ ದಾಖಲಿಸುವುದು ಒಂದು ಮಾತ್ರ ದಾರಿಯಲ್ಲ. ಈ ಕಂಪನಿಗಳನ್ನು ಹಿಡಿತಕ್ಕೆ ತರುವ ಕೆಲಸವನ್ನು ಸರ್ಕಾರ ಮಾಡಬೇಕು. ಸರ್ಕಾರದ ಪೊಲೀಸ್ ಇಲಾಖೆ, ಸಿಓಡಿ ಮೂಲಕ ನಕಲಿ ಫೆಸ್ಬುಕ್ ಖಾತೆಯನ್ನು ನಿರ್ವಹಣೆ ಮಾಡುತ್ತಿರುವ ಮೊಬೈಲ್ ನಂಬರ್ ಹಾಗೂ ಆ ಮೊಬೈಲ್ ಫೋನ್ ಯಾರು ಖರೀದಿಸಿದ್ದಾರೆ ಎಂಬುದನ್ನು ಪತ್ತೆ ಹಚ್ಚಿದರೆ ಈ ನಕಲಿ ಖಾತೆಗಳ ಹಾವಳಿಯನ್ನು ತಡೆಗಟ್ಟಲು ಸಾಧ್ಯವಿದೆ ಎಂದು ಶಾಸಕ ಹರೀಶ್ ಪೂಂಜ ಅವರು ವಿಧಾನಸಭಾ ಅಧಿವೇಶನದಲ್ಲಿ ಗಮನ ಸೆಳೆದಿದ್ದಾರೆ. ನನ್ನ ಧರ್ಮಪತ್ನಿಯ ಫೋಟೋ ಹಾಕಿ ಬೇರೆ ಬೇರೆ ನಕಲಿ ಪೆಸ್ಬುಕ್ ಖಾತೆಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ತೇಜೋವಧೆ ಮಾಡುವ ಕಾರ್ಯ ನಡೆಯುತ್ತಿದೆ. ಈ ವಿಚಾರ ಕುರಿತು ಎಲ್ಲಾ ಶಾಸಕರ ಅನುಭವಕ್ಕೆ ಬಂದಿದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದು ಹರೀಶ್ ಪೂಂಜ ಒತ್ತಾಯಿಸಿದರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರತಿಕ್ರಿಯಿಸಿ ವರ್ತಮಾನ ಕಾಲದಲ್ಲಿ ಸುಳ್ಳು ಸುದ್ದಿಗಳು, ಅಪಪ್ರಚಾರಗಳು ಹರಿದಾಡುತ್ತಿದೆ. ಸ್ಪಷ್ಟನೆ ನೀಡುವ ಮೊದಲೇ ಸುಳ್ಳು ಸುದ್ದಿ ಹರಿದಾಡಿರುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳ ದುರುಪಯೋಗದ ವಿರುದ್ಧ ನಿರಂತರ ಆಂದೋಲನ ನಡೆಸಿದ್ದ ಸುದ್ದಿ ಬಳಗ
ಫೆಸ್‌ಬುಕ್, ವಾಟ್ಸಾಪ್ ಮುಂತಾದ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಮಾಡುತ್ತಿರುವುದರ ವಿರುದ್ಧ ಸುದ್ದಿ ಬಿಡುಗಡೆ ಪತ್ರಿಕಾ ಬಳಗ ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ನಿರಂತರವಾಗಿ ಆಂದೋಲನ ನಡೆಸಿತ್ತು. ಬಲಾತ್ಕಾರದ ಬಂದ್ ನಡೆಸುವುದರ ವಿರುದ್ಧ ಸುದ್ದಿ ಬಳಗ ನಿರಂತರ ಅಭಿಯಾನ ನಡೆಸಿತ್ತು. ಬಂದ್‌ಗೆ ಕರೆ ಕೊಟ್ಟವರೇ ನಷ್ಟ ಭರಿಸುವಂತಾಗಬೇಕು ಎಂದು ಆಂದೋಲನ ನಡೆಸಲಾಗಿತ್ತು. ನಂತರದ ಬೆಳವಣಿಗೆಯಲ್ಲಿ ಕೇಂದ್ರ ಸರಕಾರ ಮತ್ತು ಸುಪ್ರೀಂಕೋರ್ಟ್ ಕೂಡ ಬಂದ್ ನಡೆಸುವುದರ ವಿರುದ್ಧ ತೀರ್ಪು ನೀಡಿತ್ತು. ಆ ಮೂಲಕ ಸುದ್ದಿ ಬಳಗದ ಹೋರಾಟ ಯಶಸ್ವಿಯಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್‌ಗೆ ಕರೆ ಕೊಡುವ ಸಂಪ್ರದಾಯಕ್ಕೆ ತಿಲಾಂಜಲಿ ಹಾಕಲಾಗಿತ್ತು. ಇದೇ ವೇಳೆ ಸುದ್ದಿ ಬಿಡುಗಡೆ ಪತ್ರಿಕಾ ಬಳಗ ಸೋಶಿಯಲ್ ಮೀಡಿಯಾದ ದುರುಪಯೋಗದ ವಿರುದ್ಧ ನಿರಂತರ ಜನಜಾಗೃತಿ ಮೂಡಿಸಿ ಆಂದೋಲನ ರೂಪಿಸಿತ್ತು. ನಕಲಿ ಖಾತೆಗಳ ಮೂಲಕ ಜನಸಾಮಾನ್ಯರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿರುವವರ ವಿರುದ್ಧ ಸುದ್ದಿ ಬಳಗ ಸಮರ ಸಾರಿತ್ತು. ನಂತರದ ಬೆಳವಣಿಗೆಯಲ್ಲಿ ಕೇಂದ್ರ ಸರಕಾರ ಸಾಮಾಜಿಕ ಜಾಲತಾಣಗಳ ದುರುಪಯೋಗ ಮಾಡುವುದನ್ನು ತಡೆಯಲು ಹಲವು ಕ್ರಮ ಕೈಗೊಂಡಿತ್ತು. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಕೂಡ ಸಾಮಾಜಿಕ ಜಾಲತಾಣಗಳ ನಿಯಂತ್ರಣಕ್ಕೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸರಕಾರಕ್ಕೆ ಸೂಚಿಸಿದ್ದರು. ರಾಜ್ಯ ಸರಕಾರ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲು ವಿಶೇಷ ತಂಡ ರಚನೆ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಿತ್ತು.

LEAVE A REPLY

Please enter your comment!
Please enter your name here