ಪುತ್ತೂರು: ಬಡ ಜನರಿಗೆ ನೀಡಲಾಗುವ 5 ಮನೆ ನಿವೇಶನಗಳನ್ನು ಮಹಮ್ಮದ್ ಆಲಿಯವರು ದುರುಪಯೋಗ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ಇಲಾಖೆಗೆ ನೀಡಿದ ದೂರು ಮತ್ತು ಕೆಮ್ಮಿಂಜೆ ಗ್ರಾಮದ ಎರಡು ಹಕ್ಕುಪತ್ರದಲ್ಲಿ ಪುರಸಭೆಯಿಂದ ಪರವಾನಿಗೆ ಪಡೆಯದೇ ಫೌಂಡೇಶನ್ ಹಾಕುವ ಕೆಲಸ ಮಾಡಿರುವುದು ಸುಳ್ಳಾದರೆ ನಾನು ಕಾಂಗ್ರಸ್ ಪಕ್ಷದಿಂದ, ಸಾಮಾಜಿಕ ಕ್ಷೇತ್ರದಿಂದ ನಿವೃತ್ತಿ ಹೊಂದಲಿದ್ದೇನೆ. ಈ ಕುರಿತು ನಾನು ನಂಬುವ ಮತ್ತು ಅವರು ನಂಬುವ ಸ್ಥಳಕ್ಕೆ ಬಂದು ಪ್ರಮಾಣ ಮಾಡಲು ಸಿದ್ಧ ಎಂದು ಇಸಾಕ್ ಸಾಲ್ಮರ ಅವರು ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದ್ದಾರೆ.
ಈ ಹಿಂದೆ ಪತ್ರಿಕಾಗೋಷ್ಠಿಗೆ ಸಂಬಂಧಿಸಿ ನಾನು ಸುಪಾರಿ ಪಡೆದು ಸುಳ್ಳು ಆರೋಪ ಮಾಡಿರುವುದಾಗಿ ಮಹಮ್ಮದ್ ಆಲಿಯವರು ವಾಟ್ಸಪ್ನಲ್ಲಿ ಸಂದೇಶ ರವಾನಿಸಿದ್ದಾರೆ. ಅವರು ತಾನೊಬ್ಬ ದೊಡ್ಡ ಜಮೀನ್ದಾರ, ನಾನು ಶ್ರೀಮಂತ. ಅದೆಲ್ಲವನ್ನು ಬಿಟ್ಟು ಬಂದವ ಎಂದು ಹೇಳಿಕೊಂಡಿದ್ದಾರೆ. ನಮಗೆ ಅದು ಉತ್ತರವಲ್ಲ. ಇವತ್ತು ಅವರ ಇನ್ನೊಂದು ಹಗರಣವನ್ನು ಬಯಲಿಗೆಳೆಯುತ್ತಿದ್ದೇನೆ. ಕೆಮ್ಮಿಂಜೆ ಗ್ರಾಮದ ಎರಡು ಹಕ್ಕುಪತ್ರದಲ್ಲಿ ಪುರಸಭೆಯಿಂದ ಪರವಾನಿಗೆ ಪಡೆಯದೇ ಫೌಂಡೇಶನ್ ಹಾಕುವ ಕೆಲಸ ಮಾಡಿದ್ದಾರೆ. ಈ ಕುರಿತು ನಾನು ನಗರಸಭೆ, ತಹಸೀಲ್ದಾರ್, ಸಹಾಯಕ ಕಮೀಷನರ್ಗೆ ಅರ್ಜಿ ಸಲ್ಲಿಸಿದ್ದೇನೆ. ಮುಂದಿನ ದಿನ ಎಲ್ಲಾ ದಾಖಲೆಗಳನ್ನು ಸಲ್ಲಿಸುತ್ತೇನೆ. ನಾನು ಸುಳ್ಳು ಹೇಳುವುದಾಗಿ ಆರೋಪ ಮಾಡಿದರೆ ಎಲ್ಲಾ ದಾಖಲೆಗಳನ್ನು ಮಿನಿ ವಿಧಾನಸಭೆ ಮುಂದೆ ಮತ್ತು ನಗರಭೆ ಕಟ್ಟಡದ ಮುಂದೆ ಟೇಬಲ್ ಹಾಕಿ ಅಲ್ಲಿ ದಾಖಲೆಗಳನ್ನು ಪ್ರದರ್ಶನ ಮಾಡಲಿದ್ದೇನೆ. ಇದರ ಜೊತೆಗೆ ನನ್ನ ಆರೋಪ ಸುಳ್ಳು ಎಂದು ದಾಖಲಾದರೆ, ನಾನು ಕಾಂಗ್ರೆಸ್ ಪಕ್ಷ ಮತ್ತು ಸಾಮಾಜಿಕ ಕಾರ್ಯದಿಂದ ನಿವೃತ್ತಿ ಹೊಂದಲಿದ್ದೇನೆ ಎಂದು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅದ್ದು ಪಡೀಲ್ ಉಪಸ್ಥಿತರಿದ್ದರು.