ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಸನ್ನಿಧಿಯಲ್ಲಿ ಶಿವರಾತ್ರಿ ಸಂಭ್ರಮ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವವು ಭಾರೀ ಸಂಖ್ಯೆಯ ಭಕ್ತರ ಭಾಗೀಧಾರಿಕೆಯಲ್ಲಿ ರುದ್ರಾಭಿಷೇಕ ಪಂಚಾಮೃತಾಭಿಷೇಕ, ಭಜನೆಯೊಂದಿಗೆ ಮಾ.08ರಂದು ನಡೆಯಿತು.

ಅನಾದಿಕಾಲದಿಂದಲೂ ಪೂಜಿಸಿಕೊಂಡು ಬರುತ್ತಿದ್ದ ನೇತ್ರಾವತಿ ನದಿ ಗರ್ಭದಲ್ಲಿನ ಉದ್ಭವ ಲಿಂಗಕ್ಕೆ ಈ ಬಾರಿ ನದಿಯಲ್ಲಿ ಅಣೆಕಟ್ಟಿನ ಹಿನ್ನೀರು ನಿಂತ ಕಾರಣ ಯಾವುದೇ ತೆರನಾದ ಪೂಜಾ ವಿಧಿ ವಿಧಾನಗಳನ್ನು ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ಭಕ್ತಾದಿಗಳಿಗೆ ಸ್ವಯಂ ಅಭಿಷೇಕದ ಅವಕಾಶ, ಅರ್ಘ್ಯ ಶಿವಪೂಜಾದಿ ವಿಧಿ ವಿಧಾನಗಳು ನಡೆಯಲಿಲ್ಲ. ಆದರೂ ದೇವಾಲಯದಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವರಿಗೆ ಸಿಯಾಳಾಭಿಷೇಕ, ರುದ್ರಾಭಿಷೇಕ , ಪಂಚಾಮೃತಾಭಿಷೇಕ ಸೇವೆಯನ್ನು ಭಕ್ತರು ಸಲ್ಲಿಸಿ ಕೃತಾರ್ಥರಾದರು. ರಾತ್ರಿ ವೇಳೆ ದೇವಾಲಯದಲ್ಲಿ ಏಕಶತರುದ್ರ ಹಾಗೂ ರುದ್ರಪಾರಾಯಣ ನಡೆದವು. ರಾತ್ರಿ ಬಲಿ ಹೊರಟು ಉತ್ಸವ, ಮಹಾಪೂಜೆಯೂ ನಡೆಯಿತು.

ಶಿವರಾತ್ರಿಯ ಅಹೋರಾತ್ರಿ ಭಜನಾ ಸೇವೆ:
ಈವರೆಗೆ ಉದ್ಭವ ಲಿಂಗದ ಮುಂಭಾಗದಲ್ಲಿ ನಡೆಯುತ್ತಿದ್ದ ನಾಮ ಸಂಕೀರ್ತನಾ ಭಜನಾ ಕಾರ್ಯಕ್ರಮವು ಈ ಬಾರಿ ದೇವಳದ ಕಾಳಿಕಾಂಬಾ ವೇದಿಕೆಯಲ್ಲಿ ನಡೆಸಲಾಗಿದ್ದು, 24 ಭಜನಾ ತಂಡಗಳಿಂದ 24 ಗಂಟೆ ಭಜನಾ ಸೇವೆಯು ನಡೆದು ಭಕ್ತ ಜನತೆಯ ಮೆಚ್ಚುಗೆಯನ್ನು ಪಡೆಯಿತು. ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮಹಾಪಾತ್ರ, ಸಹಿತ ಹಲವಾರು ಪ್ರಮುಖರು ಶ್ರೀ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಗೌಡ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಮಾಜಿ ಸದಸ್ಯರಾದ ರಾಧಾಕೃಷ್ಣ ನಾೖಕ್, ಕೃಷ್ಣರಾವ್ ಅರ್ತಿಲ, ಡಾ. ರಾಜಾರಾಮ ಕೆ.ಬಿ., ಕಂಗ್ವೆ ವಿಶ್ವನಾಥ ಶೆಟ್ಟಿ, ಸೋಮನಾಥ್, ಸುಭಾಸ್ ಜೈನ್, ಐ.ಪುರುಷೋತ್ತಮ ನಾಯಕ್, ಶರತ್ ಕೋಟೆ, ಜಯಂತ ನಾಯಕ್, ಕೃಷ್ಣ ಕೋಟೆ, ಸುಂದರ ಆದರ್ಶನಗರ, ಸುರೇಶ್, ಸುಭದ್ರಾ ಭಟ್ ಮತ್ತಿತರರು ಭಾಗವಹಿಸಿದ್ದರು. ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿ ಪದ್ಮನಾಭ ಕುಲಾಲ್, ದಿವಾಕರ ಗೌಡ, ಕೃಷ್ಣ ಪ್ರಸಾದ್ ಬಡಿಲ ಮತ್ತಿತರರು ಮುಂಚೂಣಿಯಲ್ಲಿ ನಿಂತು ವಿವಿಧ ಕಾರ್ಯಗಳನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here