ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರದ ವಿಜ್ರಂಭಣೆಯ 31ನೇ ವಾರ್ಷಿಕೋತ್ಸವ, ಶ್ರೀ ದೈವಗಳ ನೇಮೋತ್ಸವ

0

ಪುತ್ತೂರು:ನಾವ್ಯಾರೂ ದೇವರನ್ನು ನೋಡಿದವರಲ್ಲ. ಆದರೆ ದೇವರಿದ್ದಾನೆ ಎನ್ನುವ ನಂಬಿಕೆ ನಮ್ಮದೆಲ್ಲರದ್ದಾಗಿದೆ. ಪ್ರಸ್ತುತ ವಿದ್ಯಾಮಾನದಲ್ಲಿ ಹೆತ್ತವರನ್ನು ಆಶ್ರಮದಲ್ಲಿರಿಸುವ ಮಕ್ಕಳನ್ನು ನೋಡಿದ್ದೇವೆ. ಕಣ್ಣಿಗೆ ಕಾಣುವ, ಮಾತನಾಡುವ ದೇವರು ಅದು ನಮ್ಮ ಹೆತ್ತವರು. ಅವರನ್ನು ಗೌರವಿಸಿ, ಪೂಜಿಸುವುದೇ ನಿಜವಾದ ಧರ್ಮ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಮಾ.8ರಂದು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನಡೆದ ಚಿಕ್ಕಮುಡ್ನೂರು ಗ್ರಾಮದ ಬೆದ್ರಾಳ ಶ್ರೀ ನಂದಿಕೇಶ್ವರ ಭಜನಾ ಮಂಡಳಿ ಇದರ 31ನೇ ವರ್ಷದ ವಾರ್ಷಿಕೋತ್ಸವ, ಶ್ರೀ ದೈವಗಳ ನೇಮೋತ್ಸವ ಹಾಗೂ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕುಟುಂಬ ಜೀವನದ ಬಾಲ್ಯದಲ್ಲಿ ಎಲ್ಲವೂ ಸರಿಯಾಗಿರುತ್ತೆ. ಬಳಿಕ ಕ್ಷುಲ್ಲಕ ವಿಚಾರದಲ್ಲಿ ಸಹೋದರರ ನಡುವೆ ಕಚ್ಚಾಟ ಶುರುವಾಗುತ್ತೆ. ಪ್ರತಿಯೋರ್ವರಿಗೆ ಅವರವರ ಧರ್ಮದ ಬಗ್ಗೆ ತಿಳಿಯುವ ಅವಶ್ಯಕತೆ ಬೇಕಾಗಿದೆ. ನಮ್ಮ ನಿಜವಾದ ಮನೆ ಬಂಗಾರ ನಮ್ಮ ಮಕ್ಕಳು. ಅದೇ ಮಕ್ಕಳಿಗೆ ಹೊಳಪು ನೀಡಬೇಕು, ಅವರನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವಗಳಾಗಿ ನಿರ್ಮಾಣ ಮಾಡಬೇಕು ಎಂದ ಅವರು ರಾಜ್ಯ ಸರಕಾರ ಮಹಿಳೆಯರಿಗೆ ಗೃಹಲಕ್ಷ್ಮೀ, ಗೃಹಜ್ಯೋತಿ, ಉಚಿತ ಪ್ರಯಾಣದ ಜೊತೆಗೆ ಐದು ಗ್ಯಾರಂಟಿಗಳನ್ನು ನೀಡಿದೆ. ದೇಶದ ನಾರಿ ಶಕ್ತಿ ಗಟ್ಟಿಯಾಗಬೇಕು, ಮಹಿಳೆಯರು ಸಬಲೀಕರಣಗೊಳ್ಳಬೇಕು, ಆ ಮೂಲಕ ದೇಶ ವಿಶ್ವಗುರು ಆಗಬೇಕು ಎಂದರು.

ಹಿಂದೂ ಸಮಾಜ ದುರ್ಗಾಶಕ್ತಿಯಾಗಿ ಬದಲಾಗಬೇಕಿದೆ-ಮಠಂದೂರು:
ಶ್ರೀ ಕ್ಷೇತ್ರದ ತಡೆಗೋಡೆ ನಿರ್ಮಾಣಕ್ಕೆ ರೂ.30 ಲಕ್ಷ ಅನುದಾನ ನೀಡಿದ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರುರವರು ಪ್ರತಿಭಾನ್ವಿತರಿಗೆ ಸನ್ಮಾನ ನೆರವೇರಿಸಿ ಮಾತನಾಡಿ,
ದೇಶದಲ್ಲಿ ಭಗವಂತನನ್ನು ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರ, ಗರಡಿ, ನಾಗಸ್ಥಾನ ಮುಂತಾದೆಡೆ ನಾವು ಭಕ್ತಿಯಿಂದ ಕಾಣುತ್ತೇವೆ. ನರ ನಾರಾಯಣನಾಗಬಲ್ಲ, ಮಾಧವ ಮನುಷ್ಯನಾಗಬಲ್ಲ ಎಂಬಂತೆ ವ್ಯಕ್ತಿ ಭಗವಂತ ಸ್ವರೂಪಿ ಆಗಬಲ್ಲ ಇದು ಅಕ್ಷರಸಃ ಸತ್ಯ. ಭಾರತವನ್ನು ಅಧ್ಯಾತ್ಮಿಕ ರಾಷ್ಟ್ರ ಅನ್ನುತ್ತಾರೆ. ದೇಶದಲ್ಲಿ ಸರ್ವೇ ಜನ ಸುಖಿಂತೋ ಇದ್ರೆ ಅದು ಹಿಂದೂ ಧರ್ಮವಾಗಿದೆ. ಇದೇ ಹಿಂದೂ ಸಮಾಜ ಹೇಗಿದೆ ಎಂದು ಯುವ ಪೀಳಿಗೆಗೆ ತಿಳಿಸಬೇಕಾಗಿದೆ ಮಾತ್ರವಲ್ಲ ನಾರಿಶಕ್ತಿ ದುರ್ಗಾಶಕ್ತಿಯಾಗಿ ಬದಲಾಗಬೇಕಿದೆ ಎಂದರು.

ಶಾಂತಿ, ನೆಮ್ಮದಿ, ಸಹೋದರತೆ, ಪ್ರೀತಿ, ವಿಶ್ವಾಸದ ಬದುಕಿನ ಸೂಕ್ಷ್ಮತೆಯ ಅರಿವನ್ನು ಅರಿಯಬೇಕಾಗಿದೆ-ಪುತ್ತಿಲ:
ಪುತ್ತಿಲ ಪರಿವಾರದ ಮುಖಂಡ ಹಾಗೂ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಬಹುಸಂಖ್ಯಾತವುಳ್ಳ ಹಿಂದು ಸಮಾಜ ರಾಮನಿಗೆ ಅವಮಾನ, ಗೋಮಾತೆ ಹತ್ಯೆ, ತಾಯಂದಿರ, ಸಹೋದರಿಯರ ಮೇಲೆ ಅತ್ಯಾಚಾರ ಹೀಗೆ ವಿವಿಧ ಕಾರಣಗಳಿಗಾಗಿ ತುಳಿತಕ್ಕೊಳಗಾಗುತ್ತಿದೆ. ಹಿಂದು ಸಮಾಜ ಇದರಿಂದ ಎಚ್ಚೆತ್ತುಕೊಳ್ಳಬೇಕು, ಶಾಂತಿ, ನೆಮ್ಮದಿ, ಸಹೋದರತೆ, ಪ್ರೀತಿ, ವಿಶ್ವಾಸದ ಬದುಕಿನ ಸೂಕ್ಷ್ಮತೆಯ ಅರಿವನ್ನು ಅರಿಯಬೇಕಾಗಿದೆ. ಹಿಂದೂ ಸಮಾಜ ಒಗ್ಗೂಡಿಸಲು ಭಜನಾ ಮಂದಿರಗಳಿಂದ ಸಾಧ್ಯ ಎಂದರು.

ಸನಾತನ ಧರ್ಮದ ಆಚಾರ-ವಿಚಾರ, ಸಂಸ್ಕೃತಿ ಉಳಿಸಿದ್ದಲ್ಲಿ ಧರ್ಮವು ಉಳಿಯಬಲ್ಲುದು-ಸುಜಯ್ ತಂತ್ರಿ:
ಧಾರ್ಮಿಕ ಪ್ರವಚನ ನೀಡಿದ ಸುಜಯ್ ತಂತ್ರಿ ಉಪ್ಪಳರವರು, ದೈವ, ದೇವರು, ಗುರು-ಹಿರಿಯರು ಎನ್ನುವುದು ನಮ್ಮ ಜೀವನದ ನಾಲ್ಕು ಚಕ್ರಗಳಿದ್ದಾಗೆ. ಈ ನಾಲ್ಕು ಚಕ್ರಗಳನ್ನು ಜೋಪಾನವಾಗಿ ಕಾಪಾಡದಿದ್ದರೆ, ಗೌರವ ಕೊಡದಿದ್ದರೆ ಜೀವನ ನಶ್ವರವಾದೀತು. ಗ್ರಾಮ ಗ್ರಾಮಗಳಲ್ಲಿ ಭಜನಾ ಮಂದಿರಗಳನ್ನು ನಿರ್ಮಾಣ ಮಾಡಿಕೊಂಡು ಶ್ರದ್ಧಾಭಕ್ತಿಯೊಂದಿಗೆ ಧರ್ಮವನ್ನು ಇಂದು ಪೂಜಿಸಿಕೊಂಡು ಬರುತ್ತಿದೆ. ನಮ್ಮಲ್ಲಿ ಸತ್ಯ, ದಯೆ, ತಪಸ್ಸು, ವಿಶ್ವಾಸ, ಭಕ್ತಿ ಮೂಡಿದಾಗ ದೇವರ ಆಶೀರ್ವಾದ ಖಂಡಿತಾ ಇರುತ್ತದೆ ಜೊತೆಗೆ ನಮ್ಮ ಸನಾತನ ಧರ್ಮದ ಆಚಾರ-ವಿಚಾರಗಳು, ಸಂಸ್ಕೃತಿಯನ್ನು ಇಂದಿನ ಮಕ್ಕಳಲ್ಲಿ ಅರಿವು ಮೂಡಿಸಿದಾಗ ಮುಂದಿನ ದಿನಗಳಲ್ಲಿ ಧರ್ಮವು ಉಳಿಯಬಲ್ಲುದು ಎಂದರು.

ಶ್ರೀ ಕ್ಷೇತ್ರದಲ್ಲಿ ಹಿಂದಿನಂತೆ ಎಲ್ಲವೂ ಸುಸೂತ್ರವಾಗಿ ನಡೆಯಲಿ-ವರುಣ್ ಕುಮಾರ್ ಜೈನ್:
ಅಧ್ಯಕ್ಷತೆ ವಹಿಸಿದ ಬೆದ್ರಾಳ ಶ್ರೀ ನಂದಿಕೇಶ್ವರ ಭಜನಾ ಮಂಡಳಿ ಅಧ್ಯಕ್ಷ ವರುಣ್ ಕುಮಾರ್ ಜೈನ್ ಮಾತನಾಡಿ, ನನ್ನ ತಂದೆ ಕಳೆದ 30 ವರ್ಷಗಳಿಂದ ಈ ಭಜನಾ ಮಂದಿರದ ಅಧ್ಯಕ್ಷರಾಗಿ ಮುನ್ನೆಡುಸುತ್ತಾ ಬಂದಿರುವರು. ಪ್ರಸ್ತುತ ಅವರ ನಿಧನನಾಂತರ ನಾನು ಎಲ್ಲರ ಸಹಕಾರ ಹಾಗೂ ಆಶೀರ್ವಾದದಿಂದ ಈ ಭಜನಾ ಮಂದಿರದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇಷ್ಟು ವರ್ಷ ಈ ಕ್ಷೇತ್ರದಲ್ಲಿ ವಾರ್ಷಿಕೋತ್ಸವ, ಧಾರ್ಮಿಕ ಕಾರ್ಯಕ್ರಮ, ನೇಮ ನಡಾವಳಿ ಎಲ್ಲರ ಸಹಕಾರದೊಂದಿಗೆ ಸಾಗಿ ಬಂದಿದ್ದು ಮುಂದಿನ ದಿನಗಳಲ್ಲಿ ಇದು ಮುಂದುವರೆಯಲಿ ಎಂದರು.

ದಾನಿಗಳಿಗೆ ಗೌರವ:
ಶ್ರೀ ಕ್ಷೇತ್ರದಲ್ಲಿ ದೈವದ ಪೀಠ ನೀಡಿದ ಅಶೋಕ್ ನಾಯೈಕ್ ಪಾಂಡಿ, ಶೌಚಾಲಯ ನಿರ್ಮಾಣಕ್ಕೆ ವಿವಿಧ ರೀತಿಯಲ್ಲಿ ಸಹಕರಿಸಿದ ರಾಜಕುಮಾರ್ ರೈ ಬೆದ್ರಾಳ, ಹರೀಶ್ ಕುಲಾಲ್ ಬೆದ್ರಾಳ, ಸತೀಶ್ ಪೂಜಾರಿ ಮುಕ್ವೆ, ಕೇಶವ ಪೂಜಾರಿ ಬೆದ್ರಾಳ, ಗಂಗಾಧರ್ ಗೌಡ, ಪ್ರಸಾದ್ ಆಚಾರ್ಯ, ಕಿಶನ್ ರೈ, ಅನೂಪ್ ಟಿ.ವಿ, ಪ್ರವೀಣ್ ಶೆಟ್ಟಿ, ಉದಯ ತಂತ್ರಿ ಕೆಮ್ಮಿಂಜೆ, ಸುಜಯ ತಂತ್ರಿ ಕೆಮ್ಮಿಂಜೆ, ವರುಣ್ ಕುಮಾರ್ ಜೈನ್, ಮನೋಜ್ ಕುಮಾರ್ ಟಿ.ವಿ, ರೋಹಿಣಿ ಕೇಶವ ಪೂಜಾರಿ, ಪ್ರದೀಪ್ ಪೂಜಾರಿ ರಾಗಿದಕುಮೇರು, ಶಿವಪ್ರಸಾದ್ ಕೂಡಮರ, ಗಣೇಶ್ ಗೌಡ, ಹರ್ಷಿತ್, ಪ್ರಜ್ವಲ್, ಪ್ರಕಾಶ್, ಜಯರಾಮ ಆಚಾರ್ಯ, ಹಿಂದೂ ಜಾಗರಣಾ ವೇದಿಕೆ ಬೆದ್ರಾಳ ಘಟಕ, ವಸಂತ್ ನಾಯ್ಕ್ ಬೆದ್ರಾಳ ರವರುಗಳನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಉದ್ಯಮಿ ಉಮೇಶ್ ನಾಡಾಜೆ ಮಂಗಳೂರು, ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಉದ್ಯಮಿ ಶಿವರಾಂ ಆಳ್ವ ಬಳ್ಳಮಜಲುಗುತ್ತು, ಪ್ರೊ ಕಬಡ್ಡಿ ಕ್ರೀಡಾಪಟು ಪ್ರಶಾಂತ್ ರೈ, ಪ್ರವೀಣ್ ಭಂಡಾರಿ, ಗಂಗಾಧರ್ ಶೆಟ್ಟಿ ಕೈಕಾರ ಸಹಿತ ಹಲವರು ಉಪಸ್ಥಿತರಿದ್ದರು.

ಕೀರ್ತನಾ, ಗಾನವಿ, ಗಹನಾರವರು ಪ್ರಾರ್ಥಿಸಿದರು. ನಂದಿಕೇಶ್ವರ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಕೇಶವ ಪೂಜಾರಿ ಬೆದ್ರಾಳ ಸ್ವಾಗತಿಸಿ, ಸಮಿತಿ ಸದಸ್ಯರಾದ ಮನೋಜ್ ಕುಮಾರ್ ಟಿ.ವಿ ವಂದಿಸಿದರು. ಕೃಷ್ಣಪ್ಪ ಗೌಡ, ಮಾಜಿ ನಗರಸಭಾ ಸದಸ್ಯ ನವೀನ್ ಚಂದ್ರ ನಾೖಕ್‌, ಪದ್ಮನಾಭ ಪೂಜಾರಿ ಬೆದ್ರಾಳ, ನಾಗೇಶ್ ಪೂಜಾರಿ, ಕೋಶಾಧಿಕಾರಿ ಪ್ರವೀಣ್ ಶೆಟ್ಟಿರವರು ಅತಿಥಿಗಳಿಗೆ ಹೂ ನೀಡಿ ಗೌರವಿಸಲಾಯಿತು. ಸನ್ಮಾನಿತರ ಪರಿಚಯವನ್ನು ಗಾನವಿ, ಕಿಶೋರ್, ಹರೀಶ್ ಕುಲಾಲ್, ಗಂಗಾಧರ್ ಗೌಡರವರು ನೀಡಿದರು. ನೇಮಾಕ್ಷ ಸುವರ್ಣ ಅಮ್ಮುಂಜರವರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಮೃದ್ಧಿ ಮ್ಯೂಸಿಕಲ್ ಪುತ್ತೂರು ತಂಡದಿಂದ ಕ್ತಭಾವ, ಜಾನಪದ ಗೀತೆ, ಭರತನಾಟ್ಯ, ಪಟ್ಟಾಭಿರಾಮ ಸುಳ್ಯ ಇವರಿಂದ ಮಿಮಿಕ್ರಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಲ್ಪಟ್ಟಿತು.

ಧಾರ್ಮಿಕ ಕಾರ್ಯಕ್ರಮ..
ಗುರುವಾರದಂದು ರಾತ್ರಿ ಪುರುಷರಕಟ್ಟೆ ಶ್ರೀದುರ್ಗಾ ಭಜನಾ ಮಂಡಳಿ, ಕೆಮ್ಮಿಂಜೆ ಶ್ರೀರಾಮ ಭಜನಾ ಮಂಡಳಿ, ಸೇರಾಜೆ ಶ್ರೀ ಶಾರದಾಂಬ ಭಜನಾ ಮಂಡಳಿ, ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ, ಬೆದ್ರಾಳ ಶ್ರೀ ನಂದಿಕೇಶ್ವರ ಭಜನಾ ಮಂಡಳಿ, ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ಶುಕ್ರವಾರದಂದು ಬೆಳಿಗ್ಗೆ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಗಣಹೋಮ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ನಾಗ ಮತ್ತು ದೈವಗಳಿಗೆ ತಂಬಿಲ ಸೇವೆ, ಪ್ರಸಾದ ವಿತರಣೆ, ಸಾಯಂಕಾಲ ನಂದಿಕೇಶ್ವರ ಭಜನಾ ಮಂದಿರದ ಮಕ್ಕಳಿಂದ ಕುಣಿತ ಭಜನೆ, ಶ್ರೀ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ, ರಾತ್ರಿ ಶ್ರೀ ರಕ್ತೇಶ್ವರಿ, ಶ್ರೀ ಕಲ್ಲುರ್ಟಿ ಮತ್ತು ಶ್ರೀ ಗುಳಿಗ ದೈವಗಳ ನಡಾವಳಿ ಜರಗಿತು. ಮಧ್ಯಾಹ್ನ ಹಾಗೂ ರಾತ್ರಿ ಶ್ರೀ ಕ್ಷೇತ್ರದ ಅಧ್ಯಕ್ಷ ದಿ.ಶ್ರೀಪಾಲ್ ಜೈನ್‌ರವರ ಸ್ಮರಣಾರ್ಥ ಅಗಲಿದ ಶ್ರೀಪಾಲ್ ಜೈನ್‌ರವರ ಮನೆಯವರಿಂದ ಅನ್ನಸಂತರ್ಪಣೆ ನಡೆಯಿತು.

ಸನ್ಮಾನ..
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀ ಕ್ಷೇತ್ರದ ರಿಷಿತ್(ವಿದ್ಯಾಕ್ಷೇತ್ರ), ವೈಗಾ ಹಾಗೂ ಕಿರಣ್ ಕುಮಾರ್(ಕ್ರೀಡಾಕ್ಷೇತ್ರ) ಮತ್ತು ನಂದಿಕೇಶ್ವರ ಭಜನಾ ತಂಡದ ವಸಂತ್ ನಾಕ್‌ರವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕುಣಿತ ಭಜನೆಯಲ್ಲಿ ಪಾಲ್ಗೊಂಡ ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರದ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ, ಪ್ರಮಾಣಪತ್ರ ವಿತರಿಸಲಾಯಿತು.

ಮೌನ ಪ್ರಾರ್ಥನೆ..
ಇತ್ತೀಚೆಗೆ ಅಗಲಿದ ನಂದಿಕೇಶ್ವರ ಭಜನಾ ಮಂದಿರದ ಸ್ಥಾಪಕ ಅಧ್ಯಕ್ಷ ಶ್ರೀಪಾಲ್ ಜೈನ್ ರವರ ಸ್ಮರಣಾರ್ಥ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲೆಂದು ಭಗವಂತನಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here