ಜಗಜ್ಯೋತಿ ನಾರಾಯಣ ಗುರುಗಳ ತತ್ವಗಳನ್ನು ಅಳವಡಿಸಿಕೊಳ್ಳಿ-ಸ್ಮಿತೇಶ್ ಬಾರ್ಯ
ಪುತ್ತೂರು: ಬಾಲ್ಯಜೀವನದಲ್ಲಿ `ನಾನು’ ಎಂದು ಕರೆಯಲ್ಪಡುವ ದಾರ್ಶನಿಕ ನಾರಾಯಣ ಗುರುಗಳು ಜಗತ್ತಿಗೆ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಮೂಲಮಂತ್ರವನ್ನು ಸಾರಿಕೊಂಡು ಜಗಜ್ಯೋತಿ ಎನಿಸಿಕೊಂಡಿದ್ದಾರೆ. ಅದೇ ನಾರಾಯಣ ಗುರುಗಳ ತತ್ವಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದುವರೆಯೋಣ ಎಂದು ಚಲನಚಿತ್ರ ನಿರ್ದೇಶಕ ಹಾಗೂ ಆಪ್ತ ಸಮಾಲೋಚಕರೂ ಆಗಿರುವ ಸ್ಮಿತೇಶ್ ಬಾರ್ಯರವರು ಹೇಳಿದರು.
ಮಾ.9ರಂದು ಶಾಂತಿಗೋಡು ಪರಕ್ಕಮೆ ದೇಯಿ ನಿಲಯದಲ್ಲಿ ಜರಗಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಗ್ರಾಮ ಸಮಿತಿ ಶಾಂತಿಗೋಡು ಇದರ 8ನೇ ಗುರುಪೂಜೆ, ಸನ್ಮಾನ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಗುರು ಸಂದೇಶ ನೀಡುವ ಮೂಲಕ ಮಾತನಾಡಿದರು. ಮನುಷ್ಯ ತನ್ನ ಜೀವಿತಾವಧಿಯಲ್ಲಿ ಎಲ್ಲರನ್ನು ಸಮಾನರಾಗಿ ನೋಡಿಕೊಳ್ಳಬೇಕು, ಇದನ್ನೇ ನಾರಾಯಣ ಗುರುಗಳು ಹೇಳಿದ್ದು. ನಮ್ಮಲ್ಲಿರುವ ರಕ್ತ, ನಾವು ಸೇವಿಸುವ ಗಾಳಿ, ನೀರು ಇದರಲ್ಲಿ ಯಾವುದೇ ಬೇಧಭಾವವಿಲ್ಲದಿರುವಾಗ ನಾವ್ಯಾಕೆ ಮತ್ತೊಬ್ಬರ ಮಾತನ್ನು ಕೇಳಿಕೊಂಡು ನಮ್ಮ ಜೀವನವನ್ನು ಹೋಗಲಾಡಿಸಬೇಕು. ನಮ್ಮಲ್ಲಿ ಚಿಂತಿಸುವ ಸ್ವತಂತ್ರತೆಯಿರಲಿ ಎಂದರು.
ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಿಲ್ಲವ ಸಮುದಾಯವನ್ನು ಸಮಾಜದಲ್ಲಿ ಎತ್ತಿ ಹಿಡಿದವರು ನಾರಾಯಣಗುರುಗಳು. ಅವರ ಹೆಸರಿನಲ್ಲಿ ಗುರುಪೂಜೆಯನ್ನು ವರ್ಷಂಪ್ರತಿ ಆಚರಿಸುವುದು ಶ್ಲಾಘನೀಯ. ಪ್ರಸ್ತುತ ವಿದ್ಯಾಮಾನದಲ್ಲಿ ಮನುಷ್ಯ ತನ್ನ ಒತ್ತಡದ ಜೀವನದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಇಂತಹ ಕಾರ್ಯಕ್ರಮಗಳನ್ನು ಮಾಡಿದಾಗ ನಮ್ಮಿಳಗೆ ಪರಸ್ಪರ ಬಾಂಧವ್ಯ ವೃದ್ಧಿಯಾಗುತ್ತದೆ ಎಂದರು.
ಕೊಂಬೆಟ್ಟು ಸ್ನೇಹ ಟೆಕ್ಸ್ಟೈಲ್ಸ್ನ ಮಾಲಕರಾದ ಸತೀಶ್ ಕುಮಾರ್ರವರು ಸನ್ಮಾನಿತರನ್ನು ಸನ್ಮಾನಿಸಿ ಮಾತನಾಡಿ, ನಾವು ಮಾಡುವಂತಹ ಪ್ರತಿಯೊಂದು ಕಾರ್ಯ ಸಮಾಜಕ್ಕೆ ಕಿಂಚಿತ್ತ್ ಪ್ರಯೋಜನವಾಗಬೇಕು, ಫಲಪ್ರದವಾಗಬೇಕು. ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಅರಳಿಸಿ ಗೌರವಿಸಿದಾಗ ಅವರಿಗೆ ಮತ್ತಷ್ಟು ಸಾಧನೆ ಮಾಡಲು ಪ್ರೋತ್ಸಾಹ ನೀಡಿದಂತಾಗುತ್ತದೆ ಇದು ನಿರಂತರ ಸಾಗಲಿ, ಸಮಾಜಕ್ಕೆ ಒಳಿತನ್ನು ಮಾಡಲಿ ಎಂದರು.
ಅಧ್ಯಕ್ಷತೆ ವಹಿಸಿದ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ರವಿಕುಮಾರ್ ಕಲ್ಕಾರು, ಮುಖ್ಯ ಅತಿಥಿಗಳಾದ ಶಾಂತಿಗೋಡು ಪ್ರಗತಿಪರ ಕೃಷಿಕ ಸಚಿನ್ ನಾೖಕ್ ಸರೋಳಿ, ಪರಕ್ಕಮೆ ದೇಯಿ ನಿಲಯದ ಹಿರಿಯರು ಪಿ.ಎಸ್ ಶೇಖರ ಪೂಜಾರಿ, ನರಿಮೊಗರು ವಲಯ ಸಂಚಾಲಕ ಹರೀಶ್ ಕೈಪಂಗಳ, ತಾಲೂಕು ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ವಿಮಲ ಸುರೇಶ್ರವರು ಸಂದರ್ಭೋಚಿತವಾಗಿ ಮಾತನಾಡಿದರು.
ಅರ್ಚಕರಾದ ಜಗದೀಶ್ ಶಾಂತಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಗೌರಿ ಹೊನ್ನಪ್ಪ ಪೂಜಾರಿ ಪ್ರಾರ್ಥಿಸಿದರು. ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ಸ್ಥಾಪಕಾಧ್ಯಕ್ಷ ಆನಂದ್ ರೆಂಜಾಳರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಘವ ಬೊಳ್ಳೆಕ್ಕು, ಚಂದ್ರಶೇಖರ ಪಾದೆ, ಕೃಷ್ಣಪ್ಪ ಪೂಜಾರಿ, ಶಾಂತಿಗೋಡು ಯುವವಾಹಿನಿ ಗ್ರಾಮ ಸಮಿತಿ ಅಧ್ಯಕ್ಷ ಅಖಿನ್ ಓಲಾಡಿ, ಜಯರಾಮ ಓಲಾಡಿ, ಗಣೇಶ್ ಕೈಂದಾಡಿ,ನಾರಾಯಣ ಪೂಜಾರಿ ಬೇರಿಕೆ, ಪ್ರಮೀಳಾ ಜಗದೀಶ್ ರವರು ಅತಿಥಿಗಳಿಗೆ ಪೂಲು ಬಚ್ಚಿರೆ ನೀಡಿ ಸ್ವಾಗತಿಸಲಾಯಿತು. ಆಶಾ ಕೈಂದಾಡಿ, ನವ್ಯಶ್ರೀ, ಮೇಘಶ್ರೀ ಬೇರಿಕೆ, ಶಾಂತಿಗೋಡು ಬಿಲ್ಲವ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶ್ರಾವ್ಯ ಪಾಣಂಬುರವರು ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು. ನವ್ಯ ದಾಮೋದರ್ ಶಾಂತಿಗೋಡು ಹಾಗೂ ಚಂದ್ರಾಕ್ಷ ಪೇರಡ್ಕ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ..
ವಿದ್ಯಾಕ್ಷೇತ್ರದಲ್ಲಿ ಸಾಧನೆ ಮಾಡಿದ ವೀಕ್ಷಾ, ಆಶಿಶ್ ಕುಮಾರ್, ಮೋಕ್ಷಿತ್(ಎಸೆಸ್ಸೆಲ್ಸಿ), ಜೀವಿತ್ ಪಿ.ಎಸ್, ಮೋಕ್ಷಿತಾ, ಹಾರ್ದಿಕ ಪಿ(ಕ್ರೀಡಾಕ್ಷೇತ್ರ), ಶ್ರೇಯಾ ಸಿ.ಪಿ(ಇಂಜಿನಿಯರಿಂಗ್ ), ರಕ್ಷಾ ಜಗದೀಶ್ ಭಂಡಾರಿ(ಪದವಿ), ನವ್ಯಶ್ರೀ(ಸ್ನಾತಕೋತ್ತರ), ಚಂದ್ರಾಕ್ಷ ಪೇರಡ್ಕ(ಸ್ನಾತಕೋತ್ತರ), ಕೀರ್ತನ್ ಕೆ(ಪದವಿ), ಲಿಖಿನ್ ಕೊಡಂಕೀರಿ(ಬಿ.ಎಚ್.ಎಂ.ಸಿ.ಟಿ), ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಕಾರ್ಯನಿರ್ವಣಾಧಿಕಾರಿಯಾಗಿ ಎರಡು ಅವಧಿಯನ್ನು ಪೂರೈಸಿದ ಹೊನ್ನಪ್ಪ ಪೂಜಾರಿ ಕೈಂದಾಡಿ, ಶಾಂತಿಗೋಡು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿದ ಶ್ರೀಮತಿ ಆಶಾ ಸಚ್ಚೀಂದ್ರ, ಶ್ರೀಮತಿ ಶಶಿಕಲಾ, ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಾಗೇಶ್ ಸಾರಕರೆರವರನ್ನು ಗುರುತಿಸಿ ಸನ್ಮಾನಿಸಲಾಯಿತು ಹಾಗೂ ಮೂರ್ತೆದಾರರ ಸೇವಾ ಸಹಕಾರಿ ಸಂಘದ ನಿರ್ದೇಶಕ ದಾಮೋದರ್ ಸುವರ್ಣ ಮತ್ತು ಆಶಾ ಯೋಗೀಶ್ ಕೈಂದಾಡಿ, ವಿದ್ಯಾಕ್ಷೇತ್ರದಲ್ಲಿ ಸಹಕರಿಸಿದ ರಾಮಚಂದ್ರ ಬನ್ನೂರುರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ರಾರಾಜಿಸಿದ ನಾರಾಯಣ ಗುರುಗಳ ತತ್ವ ಸಿದ್ಧಾಂತಗಳ ಫಲಕಗಳು..
*ಧಾರ್ಮಿಕತೆ ವಾದಿಸಲು ಅಲ್ಲ, ಜಯಿಸಲೂ ಅಲ್ಲ, ತಿಳಿಯಲು, ತಿಳಿಸಲು ಮಾತ್ರ *ಬರಿಯ ಹುಟ್ಟಿನಿಂದ ಯಾರೂ ದೊಡ್ಡವರಾಗೋದಿಲ್ಲ *ಅನ್ಯರನ್ನು ತನಗಿಂತ ಬೇರೆಯವನೆಂದು ತಿಳಿಯದಿರುವುದೇ ಅದ್ವೈತ ಮೂಲ ಮಂತ್ರ *ನಾವು ಉಪಕಾರ ಮಾಡುತ್ತೇವೆ ಎನ್ನುವ ಭ್ರಮೆ ಸರಿ ಅಲ್ಲ *ಆತ್ಮವಿಶ್ವಾಸದ ಬಲದಿಂದ ಎಲ್ಲವನ್ನೂ ಸಂಪಾದಿಸಬಹುದು *ತನ್ನಂತೆ ಪರರಿಗೆ ಹಿತವನ್ನು ಬಯಸುವುದು ನಿಜವಾದ ಸಮಾಜಸೇವೆ *ಒಳ್ಳೆಯ ಗುಣ ಸಂಸ್ಕಾರದಿಂದ ಬೆಳಗುತ್ತದೆ *ಆತ್ಮೋದ್ಧಾರವು ಎಲ್ಲ ಜ್ಞಾನಕ್ಕಿಂತ ಮಿಗಿಲು *ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ *ಮಾನವ ಜನ್ಮ ಶ್ರೇಷ್ಟವಾದುದು, ಸತ್ಕರ್ಮಗಳಿಂದ ಜೀವನ ನಡೆಸಿ *ತನ್ನ ಕೆಲಸಗಳು ಎಲ್ಲರ ಹಿತಕ್ಕಾಗಿ ಇರಲಿ *ಎಲ್ಲರಲ್ಲೂ ಅನುಕಂಪ ಇರುವವನು ಜೀವಿ *ಒಂದೇ ಜಾತಿ, ಒಂದೇ ಮತ, ಒಂದೇ ದೇವರು *ಬದುಕು ನಿಂತ ನೀರಾಗದೆ ನಿರಂತರ ಹರಿಯುತ್ತಿರಬೇಕು ಹೀಗೆ ಅನೇಕ..