ಪುತ್ತೂರು: ಜಿಲ್ಲಾ ಧಾರ್ಮಿಕ ಪರಿಷತ್ನ ಸದಸ್ಯರಾಗಿ ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶಿವನಾಥ ರೈ ಮೇಗಿನಗುತ್ತುರವರನ್ನು ನೇಮಕಗೊಳಿಸಿ ಸರಕಾರದ ಅಧೀನ ಕಾರ್ಯದರ್ಶಿ ಕೆ.ಪಿ ಹೇಮಂತರಾಜು ಆದೇಶಿಸಿದ್ದಾರೆ.
ಆದೂರು ಏಳ್ನಾಡು ಗುತ್ತು ಕಿಟ್ಟಣ್ಣ ರೈ ಮತ್ತು ಮೇಗಿನಗುತ್ತು ಸುಂದರಿ ರೈ ದಂಪತಿ ಪುತ್ರನಾಗಿರುವ ಶಿವನಾಥ ರೈ ಮೇಗಿನಗುತ್ತು ಕಲ್ಪಣೆ ಸರ್ವೆ ಸ.ಹಿ.ಪ್ರಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಸರ್ವೆ ಎಸ್ಜಿಎಂ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಗುತ್ತು ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿಎಸ್ಸಿ ಶಿಕ್ಷಣ ಪಡೆದಿರುತ್ತಾರೆ. ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇವರು ಭಕ್ತಕೂಡಿ ಶ್ರೀರಾಮ ಭಜನಾ ಮಂದಿರದ ಪುನರ್ ನಿರ್ಮಾಣದ ರೂವಾರಿಯಾಗಿ, 14 ವರ್ಷಗಳ ಕಾಲ ಅಧ್ಯಕ್ಷರಾಗಿ, ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಪುನರ್ ನಿರ್ಮಾಣ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಬ್ರಹ್ಮಕಲಶೋತ್ಸವದ ಸಂಚಾಲಕ, ಸರಕಾರಿ ಪ್ರೌಢಶಾಲೆ ಕಲ್ಪನೆ ಸರ್ವೆ ಇದರ ಕಾರ್ಯಧ್ಯಕ್ಷ ಹಾಗೂ ಬೆಳ್ಳಿ ಹಬ್ಬದ ಅಧ್ಯಕ್ಷರಾಗಿ ರಂಗಮಂದಿರ ನಿರ್ಮಾಣ ಹಾಗೂ ಶಾಲಾ ಅಭಿವೃದ್ಧಿ ಕಾರ್ಯಗಳು, ವಿದ್ಯಾನಿಧಿ ಯೋಜನೆಯ ಮೂಲಕ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ, ಸ್ಪರ್ಶ ಸಹಾಯವಾಣಿ ಮುಖಾಂತರ ಕೊರೋನಾ ಸಂದರ್ಭದಲ್ಲಿ 625ಕ್ಕಿಂತಲೂ ಮಿಕ್ಕಿ ಕಿಟ್ ವಿತರಣೆ, ಆಯುಷ್ಮಾನ್ ಕಾರ್ಡ್ ಶಿಬಿರವನ್ನು ಮಾಡಿ 600ಕ್ಕೂ ಮಿಕ್ಕಿ ಉಚಿತ ಆಯುಷ್ಮಾನ್ ಕಾರ್ಡ್ ವಿತರಣೆ ಮಾಡಿರುತ್ತಾರೆ.
ಇವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಮಿಕ ವಿಭಾಗದ ಮಾಜಿ ಕಾರ್ಯದರ್ಶಿ, ಪುತ್ತೂರು ಬ್ಲಾಕ್ ಕಾರ್ಮಿಕ ಘಟಕದ ಮಾಜಿ ಅಧ್ಯಕ್ಷ, ಸರ್ವೆ ವಲಯದ ಕಾಂಗ್ರೆಸ್ ಮಾಜಿ ಅಧ್ಯಕ್ಷರಾಗಿರುತ್ತಾರೆ. ಪ್ರಸ್ತುತ ಇವರು ಮುಂಡೂರು ಗ್ರಾ.ಪಂ ಮಾಜಿ ಸದಸ್ಯ, ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 4ನೇ ಅವಧಿಗೆ ನಿರ್ದೇಶಕರಾಗಿ ಹಾಗೂ ಸರ್ವೆ ಸುಬ್ರಹ್ಮಣ್ಯ ದೇವಸ್ಥಾನದ ಜಾತ್ರೆ ಹಾಗೂ ಉತ್ಸವದಿಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.