ಬಿಎಲ್ಎಗಳು ಸಮಪರ್ಕವಗಿ ಕಾರ್ಯನಿರ್ವಹಿಸಿದಾಗ ಬಿಜೆಪಿಯರ ಮತಗಳ್ಳತನ ತಡೆಯಲು ಸಾಧ್ಯ-ಹರೀಶ್ ಕುಮಾರ್
- ತರಬೇತಿ ಪಡೆದು ಬೂತ್ ಮಟ್ಟದಲ್ಲಿ ಅನುಷ್ಠಾನವಾದಾಗ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಲು ಸಾಧ್ಯ-ಅಶೋಕ್ ಕುಮಾರ್ ರೈ
ಪುತ್ತೂರು: ಕೇಂದ್ರ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಮತಗಳ್ಳತನದ ಬಗ್ಗೆ ಆಂದೋಲನ ನಡೆಯುತ್ತಿದೆ. ಬೂತ್ಮಟ್ಟದಲ್ಲಿ ಮತಗಳ್ಳತನ ತಡೆಯುವ ಜವಾಬ್ದಾರಿ ಬಿಎಲ್ಎಗಳ ಮೇಲಿದ್ದು, ತರಬೇತಿಯು ಬಹಳಷ್ಟು ಮಹತ್ವದ್ದಾಗಿದೆ. ಬಿಎಲ್ಎಗಳು ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡಿದಾಗ ತಲಮಟ್ಟದಿಂದ ರಾಜ್ಯ, ರಾಷ್ಟ್ರಮಟ್ಟದ ತನಕ ಬಿಜೆಪಿಯವರಿಗೆ ಮತ ಕಳ್ಳತನ ಮಾಡಲು ಆಗದಂತೆ ತಡೆಯಬಹುದು ಎಂದು ಕಾಂಗ್ರೆಸ್ನ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಪುತ್ತೂರು, ವಿಟ್ಲ ಹಾಗೂ ಉಪ್ಪಿನಂಗಡಿಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಅ.5ರಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆದ ಬಿಎಲ್ಎ (ಬೂತ್ ಲೆವೆಲ್ ಏಜೆಂಟ್)ಗಳಿಗೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸುವುದು, ಬೂತ್ನಿಂದ ಹೊರ ಹೋದವರು, ಬೋಗಸ್ ಮತದಾರರಿದ್ದರೆ ಡಿಲೀಟ್ ಮಾಡುವುದು ಬಿಎಲ್ಎ ಜವಬ್ದಾರಿ. ಸರಿಯಾದ ತರಬೇತಿ ಪಡೆದಾಗ ಮಾತ್ರ ಚುನಾವಣೆ ಪ್ರಕ್ರಿಯ ಸಮಪರ್ಕವಾಗಿ ಎದುರಿಸಲು ಸಾಧ್ಯ. ಕಾಂಗ್ರೆಸ್ ಪಕ್ಷದಿಂದ ತರಬೇತಿ ನೀಡುತ್ತಿದ್ದು, ಎಲ್ಲರೂ ಪಡೆಯಬೇಕು. ಪಕ್ಷದ ಶಿಸ್ತು, ವ್ಯವಸ್ಥಿತವಾಗಿ ಕೆಲಸ ಮಾಡಿದಾಗ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ನಾವು ಗೆಲ್ಲಲು ಸಾಧ್ಯವಿದೆ. ನಾವು ಸೋಲುವುದು ಬಿಜೆಪಿಯವರ ಕುತಂತ್ರದಿಂದ. ಪುತ್ತೂರಿನಲ್ಲಿ ಅಶೋಕ್ ರೈಯವರ ಎದುರು ನಡೆಯುವುದಿಲ್ಲ. ಮುಂಬರುವ ಎಲ್ಲಾ ಚುನಾವಣೆಯಲ್ಲಿ ಗೆಲ್ಲಲು ಸಜ್ಜಾಗಬೇಕು. ಎಲ್ಲರಿಗೂ ಒತ್ತಡ, ಕೆಲಸಗಳಿವೆ. ಬಿಜೆಪಿಯಲ್ಲಿದಂತೆ ಕೆಲಸವಿಲ್ಲದ ಯುವಕ ನಮಲ್ಲಿಲ್ಲ. ಪಕ್ಷದ ಮೇಲಿನ ಕಾಳಜಿಯಿಂದ ಪಕ್ಷದ ಸಂಘಟನೆಗೆ ಸಮಯ ಮೀಸಲಿಡಬೇಕು. ತರಬೇತಿಯಲ್ಲಿ ಶೇ.100ರಷ್ಟು ಹಾಜರಾತಿಯಿರಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಜಿಲ್ಲೆಯಲ್ಲಿ ಪ್ರಥಮ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ತಂತ್ರಜ್ಞಾನ ಬಳಸಿಕೊಂಡು ತಾಂತ್ರಿಕವಾಗಿ ಮುನ್ನಡೆಯಬೇಕು. ಜ್ಞಾನ ಅಭಿವೃದ್ಧಿ ಪಡಿಸಿಬೇಕು. ನಾವು ಅಪ್ಗ್ರೇಡ್ ಆದಾಗ ಎಲ್ಲಾ ಚುನಾವಣೆ ಗೆಲ್ಲಲು ಸಾಧ್ಯ. ಪೇಜ್ ಪ್ರಮುಖರಂತೆ ನಮ್ಮಲ್ಲಿಯೂ ಚುನಾವಣೆ ಸಮಯದಲ್ಲಿ ಕೆಲಸ ಮಾಡಬೇಕು. ಆಯಾ ಬೂತ್ನ್ನು ಭದ್ರವಾಗಿಟ್ಟುಕೊಳ್ಳಬೇಕಾದ ಹೊಣೆ ಬಿಎಲ್ಎಗಳ ಮೇಲಿದೆ. ಮುಂಬರುವ ಚುನಾವಣೆಗಳಿಗೆ ಸೀಮಿತವಾಗಿರದೆ ಮುಂದಿನ ಹತ್ತು ವರ್ಷಕ್ಕೆ ಬಿಎಲ್ಎಗಳ ಆಯಾ ಬೂತ್ನಲ್ಲಿ ಸಕ್ರೀಯವಾಗಿರವೇಕು. ಜವಾಬ್ದಾರಿ ಪಡೆದ ಬಳಿಕ ಸಮಯ ಕೊಟ್ಟು ಕರ್ತವ್ಯ ವಿಭಾಯಿಸಬೇಕು. ಆಗದಿದ್ದರೆ ಬಿಡಬೇಕು. ಯಾರೂ ಕೂಡ ಒತ್ತಡದಲ್ಲಿ ಕೆಲಸ ಮಾಡುವುದು ಬೇಡ. ಕೆಲವು ಸಮಯದಲ್ಲಿ ನಿರ್ಧಾರಗಳೂ ಆವಶ್ಯಕ. ಎಲ್ಲಾ ಹುದ್ದೆಗಳಿಗೂ ಸ್ಪರ್ಧೆಯಿದ್ದು, ಹಂತ ಹಂತವಾಗಿ ಜವಾಬ್ದಾರಿ ಪಡೆದುಕೊಂಡು ನಿರ್ವಹಣೆ ಮಾಡಬೇಕು. ಆಸಕ್ತಿಯಿಲ್ಲದಿದ್ದರೆ ಅಲ್ಲಿಗೆ ಬೇರೆ ಜನ ಮಾಡಲಾಗುವುದು. ಪಡೆದ ತರಬೇತಿಯನ್ನು ಮರೆಯದೇ ಪಕ್ಷದ ಸಾಧನೆ, ಕೆಲಸಗಳನ್ನು ಬೂತ್ ಮಟ್ಟದಲ್ಲಿ ಅನುಷ್ಠಾನ ಮಾಡಿದಾಗ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ಸಾಧ್ಯ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್, ಸಂಯೋಜಕ ಹೇಮನಾಥ ಶೆಟ್ಟಿ ಕಾವು, ಕೆಪಿಸಿಸಿ ಜಿಲ್ಲಾ ಉಸ್ತುವಾರಿ ಚಿತ್ತರಂಜನ್ ಶೆಟ್ಟಿ, ಸದಸ್ಯ ಕೌಶಲ್ ಪ್ರಸಾದ್ ಶೆಟ್ಟಿ, ಪ್ರಚಾರ ಸಮಿತಿ ಸದಸ್ಯ ಶಶಿಕಿರಣ್ ರೈ ನೂಜಿಬೈಲು, ಜಿಲ್ಲಾ ಗ್ರಾಮಾಂತರ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಅಂಚನ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಭೋದಯ ಅಳ್ವ, ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಮನೋರಾಜ್, ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಎ.ಎಂ ಪ್ರವೀಣಚಂದ್ರ ಆಳ್ವ, ಮುರಳೀಧರ ರೈ ಮಠಂತಬೆಟ್ಟು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಾಧ್ಯಕ್ಷ ಚಂದ್ರಪ್ರಭಾ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿದರು. ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ವಂದಿಸಿದರು. ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಭಂಡಾರಿ, ಶರೂನ್ ಸಿಕ್ಚೆರಾ ವಂದೇ ಮಾತರಂ ಹಾಡಿದರು. ಸಭಾ ಕಾರ್ಯಕ್ರಮದ ಬಳಿಕ ನಡೆದ ತರಬೇತಿ ಕಾರ್ಯಾಗಾರದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ 224 ಬೂತ್ಗಳ ಏಜೆಂಟ್ಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಎಷ್ಟು ಅಭಿವೃದ್ಧಿ ಮಾಡಿದರೂ, ಗ್ಯಾರಂಟಿ ನೀಡಿದರೂ ತಲಮಟ್ಟದಲ್ಲಿ ಕೆಲಸ ಮಾಡದಿದ್ದರೆ ಗೆಲ್ಲಲು ಸಾಧ್ಯವಿಲ್ಲ. ಚುನಾವಣಾ ಸಮಯದಲ್ಲಿ ಬಿಜೆಪಿಯವರು ಮಂಡೆ ತಿರುಗಿಸುತ್ತಾರೆ. ಮೊನ್ನೆ 10, 12 ಮಂದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಅವರು ಪಕ್ಷದಲ್ಲಿ ನಿಲ್ಲುವುದಿದ್ದರೆ ಮಾತ್ರ ಬರಬೇಕು. ಸಂಜೆ ಆ ಕಡೆ ಹಿಂದಿರುಗಿ ಹೋಗುವುದಾದರೆ ಬರಬಾರದು ಎಂದು ಸರಿಯಾಗಿ ತಿಳಿಸಿಯೇ ಸೇರ್ಪಡೆಗೊಳಿಸಲಾಗಿದೆ. ನಾಲ್ಕು ದಿನಗಳ ನಂತರ ವಾಪಸ್ ಅಗಿದ್ದಾರೆ. ನಿಮ್ಮ ಕೆಲಸ ತೆಗೆಯುತ್ತೇವೆ. ನೀನು ಕ್ಯಾಂಪ್ಕೋದಲ್ಲಿ ಕೆಲಸ ಮಾಡುತ್ತಿದ್ದಿಯಾ ಎಂದು ನಾಲ್ಕೈದು ದಿನಗಳಲ್ಲಿ ತಲೆ ತಿರುಗಿಸಿ ಅವರನ್ನು ಬದಲಾವಣೆ ಮಾಡುತ್ತಾರೆ. ಅವರು ಸೇರಿದ್ದಾರೆ ಎಂದು ನಾವು ಸೇರಿಸಿ ಮನೆಯಲ್ಲಿ ಮಲಗಿದರೆ ಅವರು ತಿರುಗಿ ಹೋಗುತ್ತಾರೆ. ಈಗಲೂ ನಮ್ಮ ಪರವಾಗಿದ್ದಾರೆ. ಬೇರೆ ಒತ್ತಡದಿಂದ ಹೋಗಿದ್ದಾರೆ. ಇದಕ್ಕೆಲ್ಲಾ ತರಬೇತಿ ಆವಶ್ಯಕ.
-ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು