ಪುತ್ತೂರು: ತಿಂಗಳಾಡಿಯ ಶ್ರೀ ಕ್ಷೇತ್ರ ದೇವಗಿರಿಯ ಶ್ರೀ ದೇವತಾ ಭಜನಾ ಮಂದಿರದ 29 ನೇ ಪ್ರತಿಷ್ಠಾ ಮಂಗಳೋತ್ಸವ ಮಾ.17 ರಂದು ದೇವಗಿರಿಯಲ್ಲಿ ವಿಜೃಂಭಣೆಯಿಂದ ಜರಗಿತು. ಬೆಳಿಗ್ಗೆ ಸ್ಥಳ ಸಾನಿಧ್ಯ ದೈವಗಳಿಗೆ ತಂಬಿಲ ಸೇವೆ ನಡೆದು ಮಧ್ಯಾಹ್ನ ಕಿಶೋರ್ ಭಟ್ ಕೆಯ್ಯೂರು ಮತ್ತು ತಂಡದವರ ಪೌರೋಹಿತ್ಯದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭಗೊಂಡಿತು. ಇದೇ ಸಂದರ್ಭದಲ್ಲಿ ಶ್ರೀ ಸದಾಶಿವ ಭಜನಾ ಮಂಡಳಿ ಆಲಡ್ಕ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಸತ್ಯನಾರಾಯಣ ಪೂಜೆ ಸಮಾಪ್ತಿಗೊಂಡು ಮಹಾಪೂಜೆ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆ ನಡೆಯಿತು.
ವೈಭವದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ
ಸಂಜೆ ಶ್ರೀ ದೇವತಾ ಭಜನಾ ಮಂಡಳಿ, ಶ್ರೀದೇವತಾ ಸಮಿತಿ, ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಸಮಿತಿ ಶ್ರೀಕ್ಷೇತ್ರ ದೇವಗಿರಿ ತಿಂಗಳಾಡಿ ಮತ್ತು ಹತ್ತು ಸಮಸ್ತರ ಸಹಕಾರದೊಂದಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ 10 ನೇ ವರ್ಷದ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು. ಮಧ್ಯಾಹ್ನ ಹಾಗೂ ರಾತ್ರಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಸುಮಾರು 1.5 ಸಾವಿರ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.
ಯಕ್ಷಗಾನ ಬಯಲಾಟದ ದಶ ಸಂಭ್ರಮ
ದೇವಗಿರಿಯಲ್ಲಿ ನಡೆಯುತ್ತಿರುವ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟಕ್ಕೆ 10 ನೇ ವರ್ಷದ ದಶ ಸಂಭ್ರಮವಾಗಿದ್ದರಿಂದ ಸಂಜೆ ತಿಂಗಳಾಡಿ ಪುತ್ತೂರಾಯ ಎಂಟರ್‌ಪ್ರೈಸಸ್ ಬಳಿಯಿಂದ ತಿಂಗಳಾಡಿ ಪೇಟೆಯಾಗಿ ಶ್ರೀ ಕ್ಷೇತ್ರ ದೇವಗಿರಿಗೆ ಶ್ರೀ ದೇವಿಯ ವಿಜೃಂಭಣೆಯ ಮೆರವಣಿಗೆ ನಡೆಯಿತು. ಮೆರವಣಿಗೆಯ ಬಳಿಕ ಶ್ರೀ ದೇವಿಗೆ ಚೌಕಿ ಪೂಜೆ ನಡೆದು ಯಕ್ಷಗಾನ ಬಯಲಾಟ ಆರಂಭವಾಗಿ ಮಧ್ಯರಾತ್ರಿಗೆ ಕೊನೆಗೊಂಡಿತು. ನೂರಾರು ಯಕ್ಷಪ್ರೇಮಿಗಳು ಯಕ್ಷಗಾನ ವೀಕ್ಷಿಸಿ ಸಂಭ್ರಮಿಸಿದರು.