ನೆಲ್ಯಾಡಿ: ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಲಾವತ್ತಡ್ಕ ಎಂಬಲ್ಲಿ ಡೀಸೆಲ್ ಸಾಗಾಟದ ಟ್ಯಾಂಕರ್ ಪಲ್ಟಿಯಾಗಿ ಡೀಸೆಲ್ ಸೋರಿಕೆಯಾದ ಘಟನೆ ಮಾ.21ರಂದು ರಾತ್ರಿ ನಡೆದಿದೆ. ಘಟನೆಯಲ್ಲಿ ಟ್ಯಾಂಕರ್ ಚಾಲಕ ಹಾಗೂ ಇನ್ನೊಬ್ಬರು ಗಾಯಗೊಂಡಿದ್ದಾರೆ.
ಟ್ಯಾಂಕರ್ ಚಾಲಕ ಮೋಹಿಲ್ ಮತ್ತು ಮನೀಶ್ ಗಾಯಗೊಂಡವರಾಗಿದ್ದಾರೆ. ಮಂಗಳೂರಿನಿಂದ ಬೆಂಗಳೂರಿಗೆ ಡೀಸೆಲ್ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ನೆಲ್ಯಾಡಿ ಲಾವತ್ತಡ್ಕ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಟ್ಯಾಂಕರ್ನಿಂದ ಡೀಸೆಲ್ ಸೋರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಕೆಲಹೊತ್ತು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು. ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆ ಪೊಲೀಸರು ಭೇಟಿ ನೀಡಿ ಸೂಕ್ತ ವ್ಯವಸ್ಥೆ ಮಾಡಿದ್ದರು. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.