ಪುತ್ತೂರು: ಶಾಂತಿನಗರ ಸರಕಾರಿ ಪ್ರೌಢ ಶಾಲೆಗೆ ನೂತನವಾಗಿ ನಿರ್ಮಿಸಿದ ಆವರಣ ಗೋಡೆಯನ್ನು ದುಷ್ಕರ್ಮಿಗಳು ಮಾ.21ರಂದು ರಾತ್ರಿ ಕೆಡವಿ ಹಾಕಿರುವ ಬಗ್ಗೆ ಪೊಲೀಸರಿಗೆ ಹಾಗೂ ಉಪವಿಭಾಗಾಧಿಕಾರಿಯವರಿಗೆ ದೂರು ನೀಡಲಾಗಿದೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಗೆ , ಪುತ್ತೂರು ಸಹಾಯಕ ಕಮಿಷನರಿಗೆ,ಶಿಕ್ಷಣ ಇಲಾಖೆಯವರಿಗೆ ಹಾಗೂ ಪಂಚಾಯತ್ ನವರಿಗೆ ದೂರು ಸಲ್ಲಿಸಲಾಗಿದೆ ಎಂದು ವರದಿಯಾಗಿದೆ. ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಿಪ್ಪಾಡಿ ಗ್ರಾಮದ ಶಾಂತಿನಗರ ಎಂಬಲ್ಲಿರುವ ಸರಕಾರಿ ಪ್ರೌಢಶಾಲೆಗೆ ಗ್ರಾಮ ಪಂಚಾಯತ್ ವತಿಯಿಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಆವರಣ ಗೋಡೆ ಮಂಜೂರಾಗಿತ್ತು. ಶಾಲೆಯ ಆವರಣದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದುದರಿಂದ ಇದನ್ನು ತಡೆಯುವ ಸಲುವಾಗಿ ಆವರಣ ಗೋಡೆಯನ್ನು ನಿರ್ಮಿಸಲಾಗಿದ್ದು ಮಾ.21ರ ರಾತ್ರಿ ಆವರಣ ಗೋಡೆಯನ್ನು ಯಾರೋ ದುಷ್ಕರ್ಮಿಗಳು ಕೆಡವಿ ಹಾಕಿದ್ದಾರೆ ಎಂದು ಆರೋಪಿಸಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಪ್ರಾಂಶುಪಾಲರು ದೂರು ನೀಡಿದ್ದಾರೆ. ಪುತ್ತೂರು ಸಹಾಯಕ ಕಮಿಷನರ್ ಅವರಿಗೂ ದೂರು ನೀಡಲಾಗಿದ್ದು, ಈ ಹಿಂದೆ ಈ ಪ್ರೌಢಶಾಲೆಯಿಂದ ಕಂಪ್ಯೂಟರ್, ಬ್ಯಾಟರಿ ,ಸಿಸಿ ಕ್ಯಾಮೆರಾ ಕಳವಾಗಿರುವುದು ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಅಲ್ಲದೆ ಈ ಶಾಲಾ ವಠಾರದಲ್ಲಿ ಮಧ್ಯದ ಬಾಟಲಿಗಳು, ಕಾಂಡೋಮ್, ಗುಟ್ಕಾ ಪ್ಯಾಕೆಟ್ ಗಳು ,ಇಸ್ಪೀಟು ಎಲೆಗಳು, ಗಾಂಜಾ ಪ್ಯಾಕೆಟುಗಳು ಮುಂತಾದ ಅನೈತಿಕ ಚಟುವಟಿಕೆಗಳ ಪರಿಕರಗಳು ಸಿಕ್ಕಿರುತ್ತದೆ. ಈ ನಿಟ್ಟಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು ಅದನ್ನು ಹಾಳು ಮಾಡಲಾಗಿದೆ ಶಾಲೆಗೆ ವಿದ್ಯಾರ್ಥಿಗಳು ಬರಲು ಹಿಂಜರಿಯುತ್ತಿದ್ದು ಶಾಲೆಯ ಹಿತದೃಷ್ಟಿಯಿಂದ ಆವರಣ ಭದ್ರತೆಗಾಗಿ ನಿರ್ಮಿಸಲಾಗಿದ್ದ ಆವರಣಗೋಡೆಯನ್ನೂ ಇದೀಗ ಕೆಡವಿ ಹಾಕಲಾಗಿದ್ದು ಈ ಬಗ್ಗೆ ಇಲಾಖೆಯಿಂದ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮಗೊಳ್ಳುವಂತೆ ದೂರಿನಲ್ಲಿ ಮನವಿ ನೀಡಲಾಗಿದೆ.