ಸಂತ ಫಿಲೋಮಿನಾ ಕಾಲೇಜಿನಲ್ಲಿ “ಇಂಪ್ಯಾಕ್ಟ್‌ ಲೆಕ್ಚರ್‌” ಸರಣಿಯ ಪ್ರಥಮ ಉಪನ್ಯಾಸ

0

ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ಇನ್ಸ್ಟಿಟ್ಯೂಶನಲ್‌ ಇನ್ನೊವೇಶನ್‌ ಕೌನ್ಸಿಲ್‌ (ಐಐಸಿ) ಹಾಗೂ ಗಣಕ ವಿಜ್ಞಾನ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಭಾಭವನದಲ್ಲಿ “ಇಂಪ್ಯಾಕ್ಟ್‌ ಲೆಕ್ಚರ್‌” ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಯುವಜನರಲ್ಲಿ ಸ್ಟಾರ್ಟಪ್‌, ನಾವೀನ್ಯತೆ ಮತ್ತು  ಬೌದ್ಧಿಕ ಆಸ್ತಿ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಶಿಕ್ಷಣ ಸಚಿವಾಲಯದ ಇನ್ನೊವೇಶನ್‌ ಸೆಲ್‌ ಹಾಗೂ ಎಐಸಿಟಿಇಗಳು ತಮ್ಮ ಜಾಲದ ಭಾಗವಾಗಿರುವ ಸಂಸ್ಥೆಗಳಿಗೆ ಇಂಪ್ಯಾಕ್ಟ್‌ ಲೆಕ್ಚರ್‌ ಉಪನ್ಯಾಸ ಸರಣಿಯನ್ನು ಆಯೋಜಿಸಲು ಆರ್ಥಿಕ ಬೆಂಬಲ ನೀಡುತ್ತವೆ. ಈ ಪ್ರಕಾರ ನಡೆಸಲ್ಪಡುವ ಉಪನ್ಯಾಸ ಸರಣಿಯ ಪ್ರಥಮ ಉಪನ್ಯಾಸ ಕಾರ್ಯಕ್ರಮದಲ್ಲಿ ಮಂಗಳೂರಿನ ಸೈಂಟ್‌ ಜೋಸೆಫ್ಸ್‌ ಇಂಜಿನಿಯರಿಂಗ್‌ ಕಾಲೇಜಿನ ಇಲೆಕ್ಟ್ರಾನಿಕ್ಸ್‌ ಆ್ಯಂಡ್ ಕಮ್ಯುನಿಕೇಶನ್‌ ವಿಭಾಗದ ಸಹಾಯಕ ಪ್ರಾಧ್ಯಾಪಕರೂ ಟ್ರೈನಿಂಗ್‌ ಆ್ಯಂಡ್ ಪ್ಲೇಸ್‌ಮೆಂಟ್‌ ಘಟಕದ ಸಂಯೋಜಕ ಆದ ಗ್ಲೆನ್ಸನ್‌ ಟೋನಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊ ವಹಿಸಿ ಮಾತನಾಡಿ “ಇಂದಿನ ಯುಗವು ಉದ್ಯಮಶೀಲತೆಯ ಯುಗವಾಗಿದೆ. ನಾವೀನ್ಯತೆಯು ಯಾವುದೇ ಉದ್ಯಮದ ಯಶಸ್ಸಿನ ಮೂಲಮಂತ್ರವಾಗಿದೆ. ಸಮರ್ಪಣಾಭಾವ ಮತ್ತು ನಾವೀನ್ಯತೆ ಯವುದೇ ಉದ್ಯಮದ ಯಶಸ್ಸಿಗೆ ಕಾರಣವಾಗುತ್ತದೆ. ನಾವು ಕೇವಲ ಯಶೋಗಾಥೆಗಳನ್ನು ಕೇಳಿದರೆ ಸಾಲದು ಹೇಗೆ ಒಂದು ಉದ್ಯಮದ ವೈಫಲ್ಯಕ್ಕೆ ಕಾರಣಗಳು, ಉದ್ಯಮಿಯು ಅವುಗಳನ್ನೆದುರಿಸಿದ ರೀತಿ ಮುಂತಾದ ವಿಷಯಗಳನ್ನು ಅರಿಯುವ ಮುಖಾಂತರ ಉದ್ಯಮಶೀಲತೆ ಹಾಗೂ ಜೀವನಪಾಠವನ್ನು ಕಲಿಯಬಹುದಾಗಿದೆ. ಯಶಸ್ವಿ ಉದ್ಯಮಿಗೆ ಸಮಾಜದ ಮುಖವನ್ನು ಬದಲಾಯಿಸುವ ಶಕ್ತಿ ಇದೆ ” ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ  ಗ್ಲೆನ್ಸನ್‌ ಟೋನಿರವರು “ನಮ್ಮ ಆಲೋಚನೆಗಳನ್ನು ಮಾದರಿಯಾಗಿಯೂ ಮಾದರಿಯನ್ನು ಅಂತಿಮ ಉತ್ಪನ್ನವಾಗಿಯೂ ಪರಿವರ್ತಿಸುವ ಸಂದರ್ಭದಲ್ಲಿ ನಮಗೆ ಓರ್ವ ಮಾರ್ಗದರ್ಶಕ ಅಥವಾ ಮೆಂಟರ್‌ನ ಸಹಾಯ ಅವಶ್ಯವಾಗಿರುತ್ತದೆ. ಅವರು ನಮ್ಮ ಚಿಂತನೆಗಳಿಗೆ ಮೂರ್ತರೂಪ ನೀಡುವಲ್ಲಿ ಮಹತ್ತರ ಪಾತ್ರವಹಿಸುತ್ತಾರೆ” ಎಂದು ಹೇಳಿದರು.

ಅನುಷಾ ಭಾರ್ಗವಿ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಐಐಸಿ ಘಟಕದ ನಿರ್ದೇಶಕಿ ಗೀತಾ ಮೂರ್ಣಿಮಾ ಸ್ವಾಗತಿಸಿದರು. ಗಣಕ ವಿಜ್ಞಾನ ವಿಭಾಗದ ಡೀನ್‌ ವಿನಯಚಂದ್ರ ವಂದಿಸಿದರು. ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕಿ ನೀಲಮ್‌ ಕುಟ್ಟಪ್ಪ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಐಐಸಿ ಘಟಕದ ಸಂಯೋಜಕರಾದ ಅಭಿಷೇಕ್‌ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಬಿಸಿಎ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here