ಕ್ಯಾಪ್ಟನ್ ಬ್ರಿಜೇಶ್ ಚೌಟರಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತಕ್ಕೆ ಅವಮಾನ – ಕಾಂಗ್ರೆಸ್ ಆರೋಪ

0

ಪುತ್ತೂರು: ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮೊನ್ನೆ ಪುತ್ತೂರಿಗೆ ಬಂದಂತಹಾ ಸಂದರ್ಭದಲ್ಲಿ ಈ ಚುನಾವಣೆ ದೇಶದ್ರೋಹಿಗಳ ಮತ್ತು ರಾಷ್ಟ್ರಪ್ರೇಮಿಗಳ ನಡುವೆ ನಡೆಯುವ ಚುನಾವಣೆ ಎಂದು ಘೋಷಣೆ ಮಾಡಿದ್ದಾರೆ. ಹಾಗಾದರೆ ದೇಶದ್ರೋಹಿಗಳೆಂದು ನಮ್ಮ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರನ್ನು ಹೇಳಿರುವುದಾದರೆ ಹಿಂದುಳಿದ ವರ್ಗದವರಿಗೆ ಮಾಡಿದ ಅವಮಾನ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ದಾಂತಕ್ಕೆ ಮಾಡಿದ ಅವಮಾನ ಆಗಿದೆ. ದೇಶದ್ರೋಹಿಗಳು ಮತ್ತು ದೇಶಪ್ರೇಮಿಗಳು ಎಂದು ಹೇಳಿದ್ದು ಯಾರನ್ನು ಎನ್ನುವ ಬಗ್ಗೆ ಸ್ಪಷ್ಟನೆಯನ್ನು ನೀಡಬೇಕಂದು ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆ ಅಭಿವೃದ್ಧಿ ಪರವಾದ ಮತ್ತು ಅಭಿವೃದ್ದಿ ವಿರೋಧಿಗಳ ನಡುವೆ ನಡೆಯುವ ಚುನಾವಣೆ. ಬಿಜೆಪಿ ಅಭಿವೃದ್ಧಿಯಿಂದ ವಿಮುಖವಾಗಿದೆ. ಸಹಜವಾಗಿ ನಾವು ಬಿಜೆಪಿಯವರ ಹಾಗೆ ಬಾಯಿಗೆ ಬಂದ ರೀತಿ ಮಾತನಾಡುವುದಿಲ್ಲ. ಕಾಂಗ್ರೆಸ್ ಅಭಿವೃದಿಯ ಪರವಿದೆ. ಬಿಜೆಪಿ ಅಭಿವೃದ್ಧಿಯಿಂದ ವಿಮುಖವಾಗಿದೆ. ಹಾಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಅಭಿವೃದ್ಧಿ ಪರ ಮತ್ತು ಅಭಿವೃದ್ಧಿ ಹೀನತೆ ನಡುವೆ ಚುನಾವಣೆ ಆಗಿದೆ. ಜನರಲ್ಲಿ ಶಾಂತಿ ನೆಮ್ಮದಿ ಮತ್ತು ಕೋಮು ಸಾಮರಸ್ಯವನ್ನು ಬೆಳೆಸುವುದಕ್ಕೆ ಅಡಿಗಲ್ಲನ್ನು ಇಡಬೇಕಾದ ಚುನಾವಣೆ ಇದಾಗಿದೆ. ಬಿಜೆಪಿಯವರು ಕೋಮು ಸಾಮರಸ್ಯದ ವಿರೋಧವಾಗಿದ್ದಾರೆ. ಇದು ಹಿಂದುಳಿದ ವರ್ಗಗಳ ಅಸ್ಮಿತೆಯನ್ನು ಗುರುತಿಸುವ ಚುನಾವಣೆ. ಮತ್ತೆ ಮತ್ತೆ ಹಿಂದುಳಿದ ವರ್ಗಗಳಿಗೆ ಅವಮಾನ ಮಾಡಿದಾಗ ಈ ಎಲ್ಲಾ ಅವಮಾನಗಳನ್ನು ಮೆಟ್ಟಿ ನಿಂತು ಈ ಚುನಾವಣೆಯಲ್ಲಿ ನಾವು ಗೆಲ್ಲಬೇಕು. ಕಳೆದ ಅನೇಕ ವರ್ಷಗಳಿಂದ ಕೋಮುಗಲಭೆಯಿಂದ ಬೀದಿಗಳಲ್ಲಿ ಮೃತಪಟ್ಟ ಅನೇಕ ಹಿಂದುಳಿದ ವರ್ಗಗಳ ಯುವಕರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಈ ಬಾರಿ ಪದ್ಮರಾಜ್ ಆರ್ ಪೂಜಾರಿಯವರು ಅವರು ಇಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಇದೆ ಎಂದರು.

ಪದ್ಮರಾಜ್‌ರವರನ್ನು ಕೇವಲ ಒಬ್ಬ ವಕೀಲ ನೋಟರಿ ಎನ್ನುವ ಕಾರಣದಿಂದ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಲ್ಲ. ಅವರೊಬ್ಬ ಹಿಂದುಳಿದ ವರ್ಗಗಳಿಗೆ ಸೇರಿದ ವ್ಯಕ್ತಿ. ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ಕೊಡಬೇಕು ಅನ್ನುವ ಉದ್ದೇಶದಿಂದಲೇ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಶತಮಾನಗಳ ಕಾಲ ಶೋಷಣೆಗಳಿಗಾಗಿ, ಆರ್ಥಿಕವಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದಕ್ಕುಳಿದ ವರ್ಗಗಳಿಗೆ ನ್ಯಾಯ ಒದಗಿಸಬೇಕೆಂಬ ಕಾರಣದಿಂದಲೇ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ಅಂತಹ ಹಿಂದುಳಿದ ವರ್ಗದ ವ್ಯಕ್ತಿಯನ್ನು ದೇಶದ್ರೋಹಿ ಎಂದು ಕರೆಯುವ ಮೂಲಕ ಬ್ರಿಜೇಶ ಚೌಟರು ಇಡೀ ಹಿಂದುಳಿದ ವರ್ಗಕ್ಕೆ ಅವಮಾನವನ್ನು ಮಾಡಿದ್ದಾರೆ. ಬಿಜೆಪಿಯವರು ಹಿಂದುಳಿದ ವರ್ಗಗಳಿಗೆ ಅವಮಾನ ಮಾಡುತ್ತಿರುವುದು ಇದು ಮೊದಲಲ್ಲ. ಎರಡು ವರ್ಷದ ಹಿಂದೆ, ದೆಹಲಿಯ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಟ್ಯಾಬ್ಲೋವನ್ನು ಪ್ರದರ್ಶನ ಮಾಡುವುದಕ್ಕೆ ಅನುಮತಿಯನ್ನು ನಿರಾಕರಿಸುವ ಮೂಲಕ ಬಿಜೆಪಿಯವರು ಹಿಂದುಳಿದ ವರ್ಗಗಳಿಗೆ ಅವಮಾನವನ್ನು ಮಾಡಿದ್ದರು. ಅದರ ನಂತರ, ಪಠ್ಯ ಪುಸ್ತಕ ತಿದ್ದುಪಡಿಯ ಹೆಸರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪಾಠವನ್ನು ತೆಗೆದುಹಾಕಿ ಆ ಮೂಲಕ ಶ್ರೀ. ಗುರುಗಳಿಗೂ ಅವರು ಪ್ರತಿನಿಧಿಸುವ ಹಿಂದುಳಿದ ವರ್ಗಗಳಿಗೂ ಅವಮಾನವನ್ನು ಎಸಗಿದರು. ಇದೀಗ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪರಮ ಭಕ್ತರೂ, ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಸಮಾಜಸೇವೆಯಲ್ಲಿ ತೊಡಗಿಕೊಂಡವರೂ ಆದಂತಹ ಪದ್ಮರಾಜ್ ರವರನ್ನು ದೇಶದ್ರೋಹಿ ಎಂದು ಕರೆದಿದ್ದಾರೆ. ಯಾರು ಬಿಲ್ಲವ ಯೂನಿಯನ್ ಸದಸ್ಯರಾಗಿ , ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದ ಟ್ರಸ್ಟಿಯಾಗಿ, ಅದರ ಕೋಶಾಧಿಕಾರಿಯಾಗಿ ನಿರಂತರವಾಗಿ ಗುರು ಸೇವೆಯಲ್ಲಿಯೂ, ದೇವರ ಸೇವೆಯಲ್ಲಿಯೂ ತನ್ನನ್ನು ತಾನು ತೊಡಿಸಿಕೊಂಡಿದ್ದಾರೋ ಅಂತಹ ಒಬ್ಬ ಯುವ ನಾಯಕನನ್ನು ದೇಶದ್ರೋಹಿ ಎಂದು ಕರೆದು ಅವರನ್ನು ಅವಮಾನಗೊಳಿಸಿದರು. ಯುವಾಹಿನಿಯ ಗೌರವ ಸಲಹೆಗಾರರಾಗಿ, ಗುರು ಬೆಳದಿಂಗಳು ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಸಾವಿರಾರು ಜನರಿಗೆ ಸಹಾಯ ಹಸ್ತವನ್ನು ಚಾಚಿದ ಪೂರ್ವಾ ಸಜ್ಜನ ವ್ಯಕ್ತಿಯನ್ನು ದೇಶದ್ರೋಹಿ ಎಂದು ಕರೆಯುವ ಮೂಲಕ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಹಿಂದುಳಿದ ವರ್ಗಗಳನ್ನು ಎಷ್ಟು ವಿರೋಧಿಸುತ್ತಾ ಇದ್ದೇವೆ ಎನ್ನುವುದನ್ನು ಅವರು ಅನಾವರಣಗೊಳಿಸಿದ್ದಾರೆ ಎಂದವರು ಹೇಳಿದರು.

ನಾವೇನು ಹೆಡ್ಡರಲ್ಲ:
ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಬಾಲಿಶವಾದ ಮತ್ತು ಅರ್ಥಹೀನವಾದ ಮಾತುಗಳನ್ನು ಆಡುವುದರಿಂದ ಅವರ ವ್ಯಕ್ತಿತ್ವ ಏನು ಮತ್ತು ಅವರ ತೂಕ ಎಷ್ಟು ಅನ್ನುವುದು ಜನರಿಗೆ ಅರ್ಥ ಆಗುತ್ತದೆ. ಇಂತಹ ಸಂದರ್ಭದಲ್ಲಿ ಅವರ ಮಾತು ಪ್ರಭುದ್ಧತೆಯಿಂದ ಕೂಡಿರಬೇಕು, ಅವರ ಮಾತಿನಲ್ಲಿ ಘನತೆ ಗಾಂಭೀರ್ಯತೆ ಇರಬೇಕು. ಆದರೆ ಈ ಚುನಾವಣೆಯನ್ನು ದೇಶದ್ರೋಹಿಗಳ ಮತ್ತು ರಾಷ್ಟ್ರ ಭಕ್ತರ ನಡುವೆ ನಡೆಯುವ ಚುನಾವಣೆ ಎಂದು ಹೇಳುವುದರ ಮೂಲಕ ತಾವೆಷ್ಟು ಕೀಳು ಮನಸ್ಥಿತಿಯವರು ಮತ್ತು ತಮ್ಮ ಸಂಸ್ಕೃತಿ ಏನು ಅನ್ನುವುದನ್ನು ಅನಾವರಣಗೊಳಿಸಿದ್ದಾರೆ. ಅವರ ಮಾತಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಜನ ಕೂಡ ಹೆಡ್ಡರಲ್ಲ. ಅವರು ದೇಶದ್ರೋಹಿಗಳೆಂದು ಕರೆದದ್ದು ಯಾರನ್ನು ಮತ್ತು ದೇಶಪ್ರೇಮಿಗಳು ಎಂದು ಕರೆದಿದ್ದು ಯಾರನ್ನು ಎನ್ನುವುದು ಅರ್ಥ ಆಗದಷ್ಟು ಪೆದ್ದರು ನಾವಲ್ಲ. ಆದರೆ ಬಿಜೆಪಿಯವರಿಗೆ ತಮಗೆ ತಾವೇ ದೇಶಪ್ರೇಮಿಗಳು ಎಂದು ಸರ್ಟಿಫಿಕೇಟ್ ಕೊಡುವಷ್ಟು ದಾರಿದ್ರ್ಯ ಯಾಕೆ ಬಂತು? ಒಬ್ಬ ನಿಜವಾದ ದೇಶಪ್ರೇಮಿಗೆ ತನ್ನನ್ನು ತಾನೇ ದೇಶಪ್ರೇಮಿ ಎಂದು ಘೋಷಿಸಿಕೊಳ್ಳುವಂತಹ ಅಗತ್ಯ ಇರುವುದಿಲ್ಲ. ಆತನ ನಡೆನುಡಿಗಳಿಂದ, ಆತ ಮಾಡುವ ಕೆಲಸಗಳಿಂದ ಅವನೆಷ್ಟು ದೇಶ ಪ್ರೇಮಿ ಎನ್ನುವುದು ಎಲ್ಲರಿಗೂ ಅರ್ಥವಾಗುತ್ತದೆ. ಒಬ್ಬ ವ್ಯಕ್ತಿ ತನ್ನನ್ನು ತಾನು ಮತ್ತೆ ಮತ್ತೆ ದೇಶಪ್ರೇಮಿ ಎಂದು ಹೇಳಿಕೊಳ್ಳುತ್ತಾನೆಂದರೆ ಆತನಿಗೆ ತನ್ನ ದೇಶ ಪ್ರೇಮದ ಮೇಲೆಯೇ ತನಗೇ ಅನುಮಾನಗಳಿವೆ ಎಂದು ಅರ್ಥ. ಅದಕ್ಕಾಗಿಯೇ ಬಿಜೆಪಿಯವರು ಮತ್ತೆ ಮತ್ತೆ ತಮ್ಮನ್ನು ತಾವು ದೇಶಪ್ರೇಮಿಗಳು ಅಂತ ಹೇಳಿಕೊಳ್ಳುತ್ತಾರೆ ಮತ್ತು ಅವರಿಗೆ ಅವರ ದೇಶ ಪ್ರೇಮದ ಮೇಲೆ ಅನುಮಾನ ಇದೆ ಎಂದು ಅಮಳ ರಾಮಚಂದ್ರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಶಕೂರ್ ಹಾಜಿ, ಕೋಶಾಧಿಕಾರಿ ವಲೇರಿಯನ್ ಡಯಾಸ್, ಜಿಲ್ಲಾ ಕಾಂಗ್ರಸ್‌ನ ಮಹೇಶ್ ರೈ ಅಂಕೋತಿಮಾರ್ ಜತೆಕಾರ್ಯದರ್ಶಿ, ಕಾರ್ಯದರ್ಶಿ ವೇದನಾಥ ಸುವರ್ಣ ಉಪಸ್ಥಿತರಿದ್ದರು.

ನಾಳೆ ನಾಮಪತ್ರ ಸಲ್ಲಿಕೆ:
ಲೋಕಸಭಾ ಚುನಾವಣೆಗೆ ಇಂಡಿಯಾ ಮೈತ್ರಿಕೂಟದಿಂದ ಪದ್ಮರಾಜ್ ಆರ್. ಪೂಜಾರಿಯವರು ಎ.3ರಂದು ನಾಮಪತ್ರವನ್ನು ಸಲ್ಲಿಸಲಿದ್ದಾರೆ. ಬೆಳಿಗ್ಗೆ ಗಂಟೆ 9ಗಂಟೆಗೆ ಸಾವಿರಾರು ಕಾರ್ಯಕರ್ತರ ಜೊತೆಗೆ, ಕುದ್ರೋಳಿಯ ಗೋಕರ್ಣನಾಥ ದೇವಸ್ಥಾನದ ಸಮೀಪದಿಂದ ಡಿ.ಸಿ. ಕಚೇರಿಯವರೆಗೆ ಮೆರವಣಿಗೆಯಲ್ಲಿ ಸಾಗಿ ಪದ್ಮರಾಜ್ ಆರ್. ಪೂಜಾರಿಯವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಅಮಳ ರಾಮಚಂದ್ರ ಹೇಳಿದರು.

LEAVE A REPLY

Please enter your comment!
Please enter your name here