ಮತದಾನದ ಹಕ್ಕನ್ನು ಕಡ್ಡಾಯವಾಗಿ ಬಳಸಿ: ಲಕ್ಷ್ಮೀಕಾಂತ ರೈ ಅನಿಕೂಟೇಲು
ಕುಂತೂರು: ಚುನಾವಣಾ ಆಯೋಗವು ಸಮಾಜದ ಪ್ರತಿಯೊಂದು ವರ್ಗವು ಮತ ಚಲಾಯಿಸಬೇಕು ಎಂಬ ಗುರಿಯನ್ನು ಹೊಂದಿದೆ. ಶೇ.100ರಷ್ಟು ಮತದಾನವಾಗುವುದರಿಂದ ಸದೃಢ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯ. ಆ ದಿಸೆಯಲ್ಲಿ ಸಂವಿಧಾನಾತ್ಮಕ ಹಕ್ಕಾದ ಮತದಾನ ಕಾರ್ಯದಲ್ಲಿ ತಪ್ಪದೇ ಪಾಲ್ಗೊಳ್ಳುವಂತಾಗಬೇಕು. ಭಾರತದ ಬೆನ್ನೆಲುಬಾಗಿರುವ ಯುವ ಜನಾಂಗವು ಕಡ್ಡಾಯವಾಗಿ ಮತದಾನ ಮಾಡುವ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವನ್ನು ನಿರ್ಮಿಸಬೇಕು ಎಂದು ಪುತ್ತೂರು ತಾಲೂಕು ಮಟ್ಟದ ಸ್ವೀಪ್ ಸಮಿತಿ ತರಬೇತುದಾರ ಹಾಗೂ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಲಕ್ಷ್ಮೀಕಾಂತ ರೈ ಅನಿಕೂಟೇಲು ಹೇಳಿದರು.
ಕಡಬ ತಾಲೂಕಿನ ಕುಂತೂರಿನಲ್ಲಿರುವ ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪುತ್ತೂರು ತಾಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳಾದ ನೀವೆಲ್ಲರೋ ಕಡ್ಡಾಯವಾಗಿ ಮತದಾನ ಮಾಡುವ ಜೊತೆಗೆ ಸುತ್ತ-ಮುತ್ತಲಿನ ಜನರಿಗೂ ಮತದಾನದ ಮಹತ್ವ ತಿಳಿಸಿಕೊಡಬೇಕು ಎಂಬ ಉದ್ದೇಶದಿಂದ ಶಿಕ್ಷಣ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಈ ವಿಶೇಷ ಮತದಾರರ ಜಾಗೃತಿ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಉಷಾ ಎಂ.ಎಲ್. ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮತದಾನ ಪ್ರಜೆಗಳ ರಾಜಕೀಯ ಹಕ್ಕಾಗಿದ್ದು, ಜೊತೆಗೆ ಕರ್ತವ್ಯವೂ ಆಗಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳೆಲ್ಲರೂ ತಪ್ಪದೇ ಮತದಾನ ಮಾಡುವ ಜೊತೆಗೆ ಸಮಾಜದ ಎಲ್ಲರೂ ಮತದಾನ ಮಾಡುವಂತೆ ಪ್ರೆರೇಪಿಸಬೇಕು ಎಂದರು.
ಪ್ರಶಿಕ್ಷಾಣಾರ್ಥಿ ಕೀರ್ತಿ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋದಿಸಿದರು. ಪ್ರಶಿಕ್ಷಾಣಾರ್ಥಿ ಶ್ರೀವೀಣಾ ಸ್ವಾಗತಿಸಿ, ಕನ್ನಡ ಪ್ರಾಧ್ಯಾಪಕ ಹರೀಶ್ ವಂದಿಸಿದರು. ಕಾಲೇಜಿನ ಎಲ್ಲಾ ಉಪನ್ಯಾಸಕರು, ಬೋದಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಶಿಕ್ಷಾಣಾರ್ಥಿ ಜುನೈಫ್ ಕಾರ್ಯಕ್ರಮ ನಿರೂಪಿಸಿದರು.