ಪುತ್ತೂರು:ಬಜರಂಗದಳದ ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲುರವರ ಗಡಿಪಾರು ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶ ನೀಡಿದೆ.
ಬಂಟ್ವಾಳ ತಾಲೂಕು ಪುದು ಗ್ರಾಮದ ಕುಮ್ಡೇಲು ಸೇಸಪ್ಪ ಬೆಳ್ಚಡರ ಮಗ ಬಜರಂಗದಳ ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲು (೩೫ವ.)ರವರು ಪೊಲೀಸ್ ಠಾಣೆಯಲ್ಲಿ ರೌಡಿ ಹಾಳೆ ಇರುವ ವ್ಯಕ್ತಿಯಾಗಿದ್ದು ವೆಹಿಕಲ್ ಸೀಝರ್ ಕೆಲಸವನ್ನು ಮಾಡಿಕೊಂಡಿರುತ್ತಾರೆ.ಈತ ಬಜರಂಗದಳದ ಸಕ್ರಿಯ ಕಾರ್ಯಕರ್ತನಾಗಿದ್ದು ತನ್ನ ಸಹಚರರೊಂದಿಗೆ ಸೇರಿಕೊಂಡು ಪರಂಗಿಪೇಟೆ,ಕಡೆಗೋಳಿ,ಬಿಸಿರೋಡ್ ಹಾಗೂ ಬಂಟ್ವಾಳ ಪರಿಸರದಲ್ಲಿ ಕೊಲೆ,ಕೊಲೆಯತ್ನ,ದೊಂಬಿ,ಹಲ್ಲೆ,ಗಲಭೆ ಇತ್ಯಾದಿಗಳನ್ನು ನಡೆಸಿ ಸಾರ್ವಜನಿಕ ಶಾಂತಿಭಂಗ ಕೃತ್ಯಗಳಲ್ಲಿ ತೊಡಗಿ ಸಾಮಾಜಿಕ ಸಾಮರಸ್ಯಕ್ಕೆ ತೊಡಕು ಉಂಟುಮಾಡುವಂತಹ ಪ್ರವೃತ್ತಿಯವರಾಗಿರುತ್ತಾರೆ.ಈತ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಇತರ ಪೊಲೀಸ್ ಠಾಣೆಗಳಲ್ಲಿ ಕೊಲೆಯತ್ನ,ದೊಂಬಿ,ಹಲ್ಲೆ ಇತ್ಯಾದಿ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಕಾನೂನು ಬಾಹಿರ ಕೃತ್ಯಗಳಿಗೆ ಪ್ರಚೋದನೆ ನೀಡುವವನಾಗಿರುವುದರಿಂದ ಪೊಲೀಸ್ ಕಾಯ್ದೆ ಕಲಂ ೫೫(ಬಿ)ಯಡಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕರು ಮಂಗಳೂರು ಉಪವಿಭಾಗದ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.ಅದರಂತೆ ಕರ್ನಾಟಕ ಪೊಲೀಸ್ ಕಾಯ್ದೆ ೧೯೬೩ರ ಕಲಂ ೫೫(ಎ)ಮತ್ತು ೫೫(ಬಿ) ಅಡಿಯಲ್ಲಿ ಭರತತ್ ಕುಮ್ಡೇಲು ಅವರನ್ನು ಮಾ.೨೮ರಿಂದ ಜೂ.೩೦ರವರೆಗೆ ದ.ಕ.ಜಿಲ್ಲೆಯಿಂದ ಮೈಸೂರು ಜಿಲ್ಲೆಯ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಿ,ತಕ್ಷಣದಿಂದ ಜಾರಿಗೆ ಬರುವಂತೆ ಮಂಗಳೂರು ಉಪವಿಭಾಗದ ದಂಡಾಧಿಕಾರಿ ಹರ್ಷವರ್ಧನ ಎಸ್.ಜೆ.ಅವರು ಏ.೨ರಂದು ಆದೇಶ ಮಾಡಿದ್ದರು.ಈ ಆದೇಶವನ್ನು ಪ್ರಶ್ನಿಸಿ ಭರತ್ ಕುಮ್ಡೇಲು ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.ವಿಚಾರಣೆ ನಡೆಸಿದ ಹೈಕೋರ್ಟ್ ಗಡಿಪಾರು ಆದೇಶವನ್ನು ರದ್ದುಪಡಿಸಿದೆ.ಭರತ್ ಕುಮ್ಡೇಲು ಅವರ ಪರ ಹಿರಿಯ ನ್ಯಾಯವಾದಿ ಅರುಣ್ಶ್ಯಾಮ್ ವಾದಿಸಿದ್ದರು.ನ್ಯಾಯವಾದಿ ಸುಯೋಗ್ ಹೇರಳೆ ವಕಾಲತ್ತು ವಹಿಸಿದ್ದರು.