ಪುತ್ತೂರು: ಬಜತ್ತೂರು ಗ್ರಾಮದ ಕಣಿಯ ದೊಡ್ಡಮನೆ ಕುಟುಂಬ ತರವಾಡಿನಲ್ಲಿ ಎ.6 ಮತ್ತು 7ರಂದು ರಕ್ತೇಶ್ವರಿ ಶೀರಾಡಿ ಪರಿವಾರ ದೈವಗಳ ‘ಧರ್ಮನಡಾವಳಿ’ ಅದ್ದೂರಿಯಾಗಿ ನಡೆಯಿತು.
ಎ.6ರಂದು ತರವಾಡು ಮನೆಯಲ್ಲಿ ಗಣಪತಿ ಹೋಮ ಹಾಗೂ ವೆಂಕಟ್ರಮಣ ಪೂಜಾ ಕಾರ್ಯಕ್ರಮಗಳೊಂದಿಗೆ ದೈವಗಳ ಕಲಶ ತಂಬಿಲ ನಡೆಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ದೈವಗಳ ಭಂಡಾರ ತೆಗೆದು ರಕ್ತೇಶ್ವರಿ ಬಾವನ ಹಾಗೂ ಸತ್ಯದೇವತೆ ನೇಮೋತ್ಸವ ನಡೆಯಿತು. ಎ.7ರಂದು ಶೀರಾಡಿ ದೈವ, ಕಲ್ಕುಡ ದೈವಗಳ ನೇಮೋತ್ಸವ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ಬಳಿಕ ಕಲ್ಲುರ್ಟಿ, ಪಂಜುರ್ಲಿ ಗುಳಿಗ, ರಾವುಗುಳಿಗ ದೈವಗಳ ಹಾಗೂ ಪರಿವಾರ ದೈವಗಳಿಗೆ ನರ್ತನಸೇವೆ ಸಲ್ಲಿಸಲಾಯಿತು. ಕಳೆದ 10 ವರ್ಷಗಳ ಹಿಂದೆ ಕಣಿಯ ದೊಡ್ಡಮನೆಯಲ್ಲಿ ದೈವಗಳ ಧರ್ಮನಡಾವಳಿ ನಡೆದಿತ್ತು. ಇದೀಗ ತರವಾಡು ಮನೆಯ ಯಜಮಾನ ಬೆಳಿಯಪ್ಪ ಗೌಡ ಮತ್ತು ಮಕ್ಕಳ ನೇತೃತ್ವದಲ್ಲಿ ಸುಮಾರು 40 ಕುಟುಂಬ ಒಕ್ಕೂಟದ ಸಹಕಾರದೊಂದಿಗೆ ಧರ್ಮನಡಾವಳಿ ನಡೆಯಿತು.
ರಕ್ತೇಶ್ವರಿ ಬಾವನ ಹಾಗೂ ಸತ್ಯದೇವತೆ ದೈವಗಳಿಗೆ ಹಳೆನೇರೆಂಕಿಯ ಖ್ಯಾತ ದೈವ ನರ್ತಕ ವಿಶ್ವನಾಥ ಪರವ ಮತ್ತು ತಂಡ ನರ್ತನಸೇವೆ ಸಲ್ಲಿಸಿತು. ಶಿರಾಡಿ, ಕಲ್ಕುಡ, ಪಂಜುರ್ಲಿ, ಗುಳಿಗ, ರಾವು ಗುಳಿಗ ಹಾಗೂ ಇತರ ಪರಿವಾರ ದೈವಗಳಿಗೆ ಪ್ರಸಿದ್ಧ ದೈವ ನರ್ತಕ ಸುಬ್ಬಣ್ಣ ಪಂಡಿತರು ಮತ್ತು ತಂಡದ ನೇತೃತ್ವದಲ್ಲಿ ನರ್ತನಸೇವೆ ನಡೆಸಲಾಯಿತು. ದೈವಪಾತ್ರಿಗಳಾಗಿ ರಾಮಣ್ಣ ಗೌಡ ಮಣಿಕ್ಕಳ, ನಯನ್ ಕೆದು, ಉಮಣ ಗೌಡ ಕಣಿಯ ಹಾಗೂ ಮಧ್ಯಸ್ಥರಾಗಿ ಗಂಗಾಧರ ಗೌಡ ನೇಜಾರು ಮತ್ತು ಸಚಿನ್ ಉಬಾರ್ ಭಾಗಿಯಾಗಿದ್ದರು.