ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಆರಾಧನಾ ಸಮಿತಿ ಕುರಿಯ ಮಾಡಾವು ಏಳ್ಳಾಡುಗುತ್ತು ಕುಟುಂಬದವರಿಂದ ಶ್ರೀ ದೇವರ ಜಾತ್ರೋತ್ಸವದ ಧ್ವಜಾರೋಹಣದ ಶುಭ ದಿನವಾದ ಏ.10ರಂದು ಪೂರ್ವಶಿಷ್ಠ ಪದ್ಧತಿಯಂತೆ ಕುರಿಯ ಮಾಡಾವು ಏಳ್ಳಾಡುಗುತ್ತು ಮನೆತನದ ಶ್ರೇಯಸ್ಸು ಹಾಗೂ ಗೌರವಾರ್ಥವಾಗಿ ಮಹಾಪೂಜೆ, ಸಮಾರಾಧನೆ, ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಕುಟುಂಬದ ಶ್ರೇಯಸ್ಸಿಗಾಗಿ ವಿಶೇಷ ಪೂಜೆ ನಡೆಯಿತು.
ಸಮಿತಿ ವತಿಯಿಂದ ದೇವಸ್ಥಾನಕ್ಕೆ 1 ಲಕ್ಷ ರೂಪಾಯಿ ದೇಣಿಗೆ ನೀಡಲಾಯಿತು. ದೇವಳದ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ ಕೆ.ವಿ ಮತ್ತು ಮೆನೇಜರ್ ಹರೀಶ್ ಶೆಟ್ಟಿಯವರು ದೇಣಿಗೆ ಸ್ವೀಕರಿಸಿದರು.
ಮಧ್ಯಾಹ್ನ ಮಹಾಪೂಜೆ ನಡೆದು ಪಲ್ಲಪೂಜೆ ನಡೆಯಿತು. ದೇವಳದ ಅರ್ಚಕ ವಸಂತ ಕೆದಿಲಾಯ ರವರು ಪಲ್ಲಪೂಜೆ ನೆರವೇರಿಸಿದರು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ದೇವರ ಆರಾಧನಾ ಸಮಿತಿ ಕುರಿಯ ಮಾಡಾವು ಏಳಾಡುಗುತ್ತು ಇದರ ಗೌರವಾಧ್ಯಕ್ಷ ಕೆ.ಎಂ.ವಿಶ್ವನಾಥ ರೈ ಮಾಡಾವು, ಸಂಚಾಲಕ ಕೆ.ಸೀತಾರಾಮ ರೈ ಕುರಿಯ, ಅಧ್ಯಕ್ಷ ಎಂ.ಬಿ.ಚೆನ್ನಪ್ಪ ರೈ ಬಳಜ್ಜ, ಪ್ರಧಾನ ಕಾರ್ಯದರ್ಶಿ ಎಸ್.ಮಾಧವ ರೈ ಕುಂಬ್ರ, ಜತೆ ಕಾರ್ಯದರ್ಶಿ ಸತೀಶ್ ರೈ ಕುರಿಯ, ಕೋಶಾಧಿಕಾರಿ ಜಯಶೀಲ ರೈ ಕುರಿಯ ಹಾಗೂ ಸರ್ವ ಸದಸ್ಯರುಗಳು ಮತ್ತು ಕುರಿಯ ಮಾಡಾವು ಏಳ್ನಾಡುಗುತ್ತು ಕುಟುಂಬಸ್ಥರು ಹಾಗೂ ಬಂಧು ಮಿತ್ರರು, ಊರಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು.