ಕಾಡು ಪ್ರಾಣಿಗಳಿಂದ ರಕ್ಷಣೆಗಾಗಿ ಪೊಲೀಸರ ಮೊರೆ ಹೋದ ರೈತರು-ಕೋವಿ ಠೇವಣಿಯಿಂದ ಬೇಸತ್ತ ರೈತರಿಂದ 112ಗೆ ಕರೆ ಮಾಡುವ ಅಭಿಯಾನ

0

ಪುತ್ತೂರು: ಚುನಾವಣೆ ಸಂದರ್ಭ 3 ತಿಂಗಳು ರೈತರು ತಮ್ಮ ಕೋವಿಗಳನ್ನು ಠೇವಣಿ ಇಡುವುದರಿಂದ ಆಗುತ್ತಿರುವ ಸಮಸ್ಯೆಗಳ ವಿರುದ್ಧ ರೈತರು ಹೊಸ ಅಭಿಯಾನಕ್ಕೆ ಸಿದ್ದವಾಗಿದ್ದು, ಕಾಡು ಪ್ರಾಣಿಗಳಿಂದ ತಮ್ಮ ಬೆಳೆಗಳ ರಕ್ಷಣೆಗಾಗಿ ತುರ್ತು ಸೇವೆ 112ಗೆ ಕರೆ ಮಾಡುವ ಮೂಲಕ ಪೊಲೀಸರ ಮೊರೆ ಹೋಗಿದ್ದಾರೆ. ಈಗಾಗಲೇ ವಿಟ್ಲ ಭಾಗದಲ್ಲಿ ಕೃಷಿಕರೊಬ್ಬರು ಅಭಿಯಾನ ಆರಂಭಿಸಿದ್ದು ಪೊಲೀಸರು ರಾತ್ರೋರಾತ್ರಿ ರೈತರ ಮನೆಗೆ ಬಂದ ಘಟನೆಯೂ ನಡೆದಿದೆ.



ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ರೈತ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿಯವರು ಮಾತನಾಡಿ, ರೈತರ ಕೋವಿಯನ್ನು ಜಿಲ್ಲಾಡಳಿತದ ಸೂಚನೆಯಂತೆ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಟ್ಟಿರುವ ಕಾರಣ, ರೈತರ ಬೆಳೆಗಳನ್ನು ಕಾಡು ಪ್ರಾಣಿಗಳಿಂದ ರಕ್ಷಿಸಲು ಪೊಲೀಸ್ ಇಲಾಖೆಯೇ ವ್ಯವಸ್ಥೆ ಮಾಡಬೇಕಾಗಿದೆ. ನಮ್ಮ ಕೋವಿ ಪೊಲೀಸರ ವಶದಲ್ಲಿದೆ. ನಮ್ಮ ತೋಟದಲ್ಲೀಗ ಮಂಗ ಮತ್ತಿತರ ಕಾಡುಪ್ರಾಣಿಗಳ ಹಾವಳಿ ವಿಪರೀತವಾಗಿದೆ. ರಕ್ಷಣೆಗೆ ಕೋವಿ ನಮ್ಮಲ್ಲಿಲ್ಲ. ಹೀಗಾಗಿ ಪೊಲೀಸರೇ ಬಂದು ನಮ್ಮ ಬೆಳೆ ರಕ್ಷಣೆ ಮಾಡಬೇಕೆಂಬುದು ಅವರು ತಿಳಿಸಿದ್ದಾರೆ. ಈ ಚಳುವಳಿಯನ್ನು ಎಲ್ಲಾ ಕೋವಿದಾರ ರೈತರು ಮಾಡಬೇಕೆಂದು ನಾವು ಕರೆ ಕೊಡುತ್ತಿದ್ದೇವೆ. ಕೋವಿಗಳನ್ನು ಠೇವಣಿ ಇಟ್ಟಿರುವ ಕಾರಣ ಕಳೆದ ಅನೇಕ ದಿನಗಳಿಂದ ರೈತರ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಲು ಸಾಧನವೇ ಇಲ್ಲದಂತಾಗಿದೆ. ಜಿಲ್ಲೆಯಲ್ಲಿ ಸುಮಾರು 4 ಸಾವಿರಕ್ಕಿಂತಲೂ ಅಧಿಕ ರೈತರು ಕೋವಿ ಪರವಾನಗಿ ಹೊಂದಿದ್ದಾರೆ. ಇವರೆಲ್ಲ 112 ಸಂಖ್ಯೆಗೆ ಫೋನ್ ಮಾಡಿ, ನಮ್ಮ ಬೆಳೆ ರಕ್ಷಣೆಗೆ ಪೊಲೀಸ್ ಇಲಾಖೆ ವ್ಯವಸ್ಥೆ ಮಾಡಬೇಕೆಂದು ದೂರು ಸಲ್ಲಿಸಲು ಕರೆ ಕೊಡುತ್ತಿದ್ದೇವೆ ಎಂದು ಮನವಿ ಮಾಡಿದ್ದಾರೆ.

ಕಾಡು ಹಂದಿ ದಾಳಿಗೆ ಜಿಲ್ಲಾಡಳಿತ ಹೊಣೆ:
ಬೆಳೆ ರಕ್ಷಣೆಗೆ ಕೋವಿ ಪಡೆದಿದ್ದ ಕಡಬ ತಾಲೂಕಿನ ಸವಣೂರು ಗ್ರಾಮದ ಅಗರಿ ನಿವಾಸಿ ರತ್ನಾಕರ ಸುವರ್ಣ ಎಂಬ ರೈತರೊಬ್ಬರು, ಜಿಲ್ಲಾಡಳಿತದ ಸೂಚನೆಯಂತೆ ಅದನ್ನು ಠೇವಣಿ ಇಟ್ಟಿದ್ದಾರೆ. ಇದಾದ ಒಂದೇ ವಾರದಲ್ಲಿ ಎ.9ರಂದು ಅವರ ಮೇಲೆ ಕಾಡು ಹಂದಿ ದಾಳಿ ಮಾಡಿದೆ. ಗಂಭೀರ ಗಾಯಗೊಂಡ ಅವರು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರ ಹೊಣೆಯನ್ನು ಪೊಲೀಸರು ವಹಿಸಿಕೊಳ್ಳಬೇಕಾಗಿದೆ. ಕೋವಿ ಇದ್ದಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ.ರೈತನ ಮೇಲಿನ ಈ ಮಾರಣಾಂತಿಕ ದಾಳಿಗೆ ಜಿಲ್ಲಾಡಳಿತವೇ ಕಾರಣ. ಜಿಲ್ಲೆಯ ರೈತರು ಇದುವರೆಗೆ ಕೋವಿ ದುರ್ಬಳಕೆ ಮಾಡಿದ ನಿದರ್ಶನವಿಲ್ಲದಿದ್ದರೂ ಅವರನ್ನು ಕ್ರಿಮಿನಲ್‌ಗಳಂತೆ, ತೃತೀಯ ದರ್ಜೆಯ ಪೌರರಂತೆ ಅಧಿಕಾರಿಗಳು ನೋಡುತ್ತಿದ್ದಾರೆ. ಚುನಾವಣಾ ಆಯೋಗದ ಮಾರ್ಗದರ್ಶಿ ಸೂತ್ರದಂತೆ ರೈತರಿಗೆ ಕೋವಿ ಠೇವಣಿಯಿಂದ ರಿಯಾಯಿತಿ ಸಿಗುವವರೆಗೆ ಹೋರಾಡುತ್ತೇವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಧರ ಶೆಟ್ಟಿ, ಪ್ರಮುಖರಾದ ಶಿವಣ್ಣ ಗೌಡ ಇಡ್ಯಾಡಿ, ಹೊನ್ನಪ್ಪ ಗೌಡ, ಪ್ರವೀಣ್ ಕುಮಾರ್ ಕೆಡೆಂಜಿಗುತ್ತು ಮತ್ತು ಶಿವಚಂದ್ರ ಅವರು ಹೇಳಿದರಲ್ಲದೆ ಗಾಯಗೊಂಡ ರತ್ನಾಕರ ಸುವರ್ಣ ಅವರ ಚಿಕಿತ್ಸೆಯ ವೆಚ್ಚವನ್ನು ಜಿಲ್ಲಾಡಳಿತ ಭರಿಸಬೇಕು. ಅವರಿಗೆ ಅರಣ್ಯ ಇಲಾಖೆಯಿಂದ ಪರಿಹಾರ ಸಿಗಬೇಕು ಎಂದವರು ಒತ್ತಾಯಿಸಿದರು.

ರೈತರೊಬ್ಬರ ಮನೆಗೆ ಮುಟ್ಟಿದ ಕೋವಿ:
ಕೋವಿಯನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಬಾರದು ಎಂಬ ಷರತ್ತನ್ನು ವಿನಾಯಿತಿ ನಿಯಮದಲ್ಲಿ ನಮೂದಿಸಿರುವುದೇ ಇದಕ್ಕೆ ಕಾರಣ. ನಾವು ಠಾಣೆಗೆ ಹೋಗಿ ಕೋವಿ ಪಡೆದು ಮನೆಗೆ ಒಯ್ಯುವಾಗ ಅದನ್ನೇ ಸಾರ್ವಜನಿಕ ಪ್ರದರ್ಶನ ಎಂದು ನಿರ್ಣಯಿಸಿ ಕೇಸು ದಾಖಲಿಸಿಕೊಂಡರೆ ಏನು ಮಾಡುವುದು ಎಂಬ ಪ್ರಶ್ನೆ ರೈತರಲ್ಲಿ ಮೂಡಿದೆ. ಇದಕ್ಕಾಗಿ ಖುದ್ದು ಪೊಲೀಸರೇ ಕೋವಿ ತಂದು ಒಪ್ಪಿಸಬೇಕೆಂಬ ಷರತ್ತು ವಿಧಿಸುತ್ತಿದ್ದಾರೆ. ವಿಟ್ಲ ಠಾಣಾ ವ್ಯಾಪ್ತಿಯ ರೈತರೊಬ್ಬರ ಈ ಶರತ್ತಿಗೆ ಕೊನೆಗೂ ಪೊಲೀಸ್ ಇಲಾಖೆ ಒಪ್ಪಿದ್ದು, ಮನೆಗೆ ಹೋಗಿ ಕೋವಿ ಒಪ್ಪಿಸಿ ಬಂದಿದೆ.

LEAVE A REPLY

Please enter your comment!
Please enter your name here