ಪುತ್ತೂರು: ಕ್ರೈಸ್ತ ಧರ್ಮಕ್ಕೆ ಸೇರಿದ ನನ್ನ ಪತ್ನಿಯ ಹೆಸರು ಲಿಲ್ಲಿ ಮೇರಿ ರೋಡ್ರಿಗಸ್ ಎಂದಾಗಿದ್ದು, ಆಕೆಯ ಆಧಾರ್ ಕಾರ್ಡ್ ಸೇರಿದಂತೆ ಪಡಿತರ ಚೀಟಿ, ಬ್ಯಾಂಕಿಗೆ ಸಂಬಂಧಪಟ್ಟ ದಾಖಲೆ, ವಿಮೆ ದಾಖಲೆಗಳಲ್ಲಿ ಪ್ರಮೀಳಾ ಎಂದು ಬದಲಾಯಿಸಲಾಗಿದೆ. ಈ ವಿಚಾರದಲ್ಲಿ ನಮ್ಮೊಳಗೆ ವಿವಾದ ಉಂಟಾಗಿದ್ದು, ಇದಕ್ಕೆ ಕಾರಣ ಪುತ್ತೂರು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿದ್ದ ಸಿ.ಯೋಗಾನಂದ್ ಎಂದು ಮಂಗಳೂರು ಹೊರ ವಲಯದ ಅಡ್ಯಾರ್ ಪದವು ನಿವಾಸಿ ಪಾಸ್ಕಲ್ ಡೊನಾಲ್ಡ್ ಪಿಂಟೋ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಯೋಗಾನಂದ್ ಯಾವುದೇ ವಿಚಾರಣೆ ನಡೆಸದೆ, ಗಮನಕ್ಕೂ ತಾರದೆ ಮೂಲ ದಾಖಲೆಗಳನ್ನು ಪರಾಮರ್ಶಿಸದೆ, ಹೆಸರು ಬದಲಾಯಿಸಿ ಧೃಢೀಕರಣ ಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದ್ದು ಅವರು ತನಿಖೆ ನಡೆಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅದರಂತೆ ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ ಮೇರೆಗೆ ಪುತ್ತೂರು ತಾಲೂಕು ಆರೋಗ್ಯ ಅಧಿಕಾರಿ ಡಾ.ದೀಪಕ್ ರೈ ವಿಚಾರಣೆ ನಡೆಸಿದ್ದು, ತನಿಖೆ ನಡೆಸದೆ ದಾಖಲೆ ಪರಿಶೀಲಿಸದೆ ದೃಡೀಕರಣ ನೀಡಿರುವುದು ಸರಿಯಾದ ಕ್ರಮ ಅಲ್ಲ ಆದರೆ ಇದರಲ್ಲಿ ಯಾವುದೇ ದುರುದ್ದೇಶ ಇಲ್ಲದಿರುವುದರಿಂದ ಎಚ್ಚರಿಕೆ ನೀಡಿ ಪ್ರಕರಣ ಮುಕ್ತಾಯಗೊಳಿಸಬಹುದೆಂದು ತಮ್ಮ ಅಭಿಪ್ರಾಯ ತಿಳಿಸಿದ್ದರು. ಆದರೂ ಯೋಗಾನಂದ ವಿರುದ್ದ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಪಾಸ್ಕಲ್ ತಿಳಿಸಿದ್ದಾರೆ.
ಮತ್ತೆ ದ.ಕ ಜಿಲ್ಲಾಧಿಕಾರಿಯವರಿಗೆ, ಲೋಕಯುಕ್ತರಿಗೆ, ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಈ ಬಗ್ಗೆ ದೂರು ನೀಡಿದ್ದು, ತಪ್ಪು ಎಸಗಿರುವ ಯೋಗಾನಂದ್ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದು, ಕಾನೂನು ಬಾಹೀರವಾಗಿ ಎಲ್ಲೆ ಮೀರಿ ವರ್ತಿಸುತ್ತಿರುವ ಯೋಗಾನಂದ್ ಅವರದ್ದು ದೇಶ ದ್ರೋಹಿ ಕೃತ್ಯ ಎಂದು ಪರಿಗಣಿಸಿ ಕರ್ತವ್ಯದಿಂದ ವಜಾಗೊಳಿಸುವಂತೆ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.