ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ಸಂದರ್ಭ ಗದ್ದೆಯಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕಳವು ಮಾಡುತ್ತಿದ್ದ ನಕಲಿ ಮಂಗಳಮುಖಿಯೊಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಕೊಟ್ಟರೂ ಪೊಲೀಸರು ಅವರ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಬಿಟ್ಟಿರುವ ಕುರಿತು ಕೃತ್ಯಕ್ಕೆ ಒಳಗಾದವರು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಬ್ರಹ್ಮರಥೋತ್ಸವ ಸಂದರ್ಭ ಜಾತ್ರಾ ಗದ್ದೆಯಲ್ಲಿ ಮಂಗಳಮುಖಿಯರ ವೇಷ ಧರಿಸಿದ ಕೆಲವರು ಗದ್ದೆಯಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಲ್ಲದೆ ಮಹಿಳೆಯೊಬ್ವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡಿದ್ದಾರೆ. ಚಿನ್ನದ ಸರ ಕತ್ತಿನಿಂದ ಜಾರಿದ್ದು ಗಮನಕ್ಕೆ ಬಂದು ನೋಡಿದಾಗ ಮಂಗಳಮುಖಿಯ ವೇಷಧರಿಸಿದಾಕೆ ಚಿನ್ನದ ಸರವನ್ನು ಸೊಂಟದ ಚೀಲಕ್ಕೆ ಹಾಕುವುದನ್ನು ನೋಡಿ ತಕ್ಷಣ ಆಕೆಯನ್ನು ಹಿಡಿದು ಇತರ ಸಾರ್ವಜನಿಕರ ಸಹಕಾರದೊಂದಿಗೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಚಿನ್ನದ ಸರದ ವಾರಿಸುದಾರರು ದೂರು ನೀಡಲು ರಾತ್ರಿ ಪೊಲೀಸರಲ್ಲಿ ಮಾತನಾಡಿದಾಗ ಬೆಳಿಗ್ಗೆ ಬರಲು ತಿಳಿಸಿದ್ದರು. ಹಾಗೆ ಎ.18 ರ ಬೆಳಿಗ್ಗೆ ಚಿನ್ನದ ಸರದ ವಾರಿಸುದಾರರಾದ ಮಹಿಳೆ ಮತ್ತು ಮಹಿಳೆಯ ತಂದೆ ಠಾಣೆಗೆ ಹೋದಾಗ ಹಿಡಿದು ಕೊಟ್ಟ ಕಳ್ಳನನ್ನು ಬಿಡುಗಡೆ ಮಾಡಿರುವುದು ಬೆಳಕಿಗೆ ಬಂದಿದೆ. ಘಟನೆ ಕುರಿತು ಪೊಲೀಸರನ್ನು ಪ್ರಶ್ನಿಸಿದಾಗ ಪೊಲೀಸರು ಹಾರಿಕೆ ಉತ್ತರ ನೀಡಿದ್ದಾರೆಂದು ದ ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಹಿಳೆಯ ತಂದೆ ಕರೆ ಮಾಡಿ ಪೊಲೀಸರ ನಡವಳಿಕೆ ಕುರಿತು ದೂರು ನೀಡಿದ್ದಾರೆಂದು ತಿಳಿದು ಬಂದಿದೆ.