ಕಡಬ: ಆಸ್ಪತ್ರೆಯಿಂದಲೇ ಆಂಬ್ಯುಲೆನ್ಸ್ ಮೂಲಕ ತೆರಳಿ ಸಿಇಟಿ ಪರೀಕ್ಷೆ ಬರೆದ ಆ್ಯಸಿಡ್ ದಾಳಿ ಸಂತ್ರಸ್ತೆ

0

ಕಡಬ: ಆ್ಯಸಿಡ್ ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಡಬದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಂಬ್ಯುಲೆನ್ಸ್ ಮೂಲಕ ತೆರಳಿ ಸಿಇಟಿ ಪರೀಕ್ಷೆ ಬರೆದಿದ್ದಾರೆ.

ಮಾರ್ಚ್ 4ರಂದು ಕಾಲೇಜಿನಲ್ಲಿ ಗಣಿತ ಪರೀಕ್ಷೆಗೆ ತಯಾರಾಗುತ್ತಿದ್ದ ವೇಳೆ ಅಬಿನ್ ಎಂಬಾತ ಆ್ಯಸಿಡ್ ಎರಚಿದ ಕಾರಣ ಮೂವರು ವಿದ್ಯಾರ್ಥಿನಿಯರಿಗೆ ಸುಟ್ಟ ಗಾಯಗಳಾಗಿತ್ತು. ಇಬ್ಬರು ಸಹಪಾಠಿಗಳು 12% ಮತ್ತು 10% ಸುಟ್ಟಗಾಯಗಳನ್ನು ಅನುಭವಿಸಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಮುಖ್ಯ ಸಂತ್ರಸ್ಥೆ 17ವರ್ಷದ ಯುವತಿಗೆ 20% ಸುಟ್ಟಗಾಯಗಳಾಗಿದ್ದವು.ಈಕೆ ಇನ್ನೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈಕೆ ತನ್ನ ತಾಯಿಯೊಂದಿಗೆ ಐಸೋಲೇಶನ್ ವಾರ್ಡ್ ನಲ್ಲಿ ಇದ್ದುಕೊಂಡೇ ಸಿಇಟಿಗೆ ತಯಾರಿ ನಡೆಸುತ್ತಿದ್ದರು. ಸಿಇಟಿಗಾಗಿ ಈಕೆ ಮತ್ತು ಇಬ್ಬರು ಸಹಪಾಠಿಗಳಿಗೆ ಪುತ್ತೂರಿನಲ್ಲಿ ಪರೀಕ್ಷಾ ಕೇಂದ್ರ ನಿಗದಿಯಾಗಿತ್ತು .

ಆದರೆ ಚಿಕಿತ್ಸೆ ವೇಳೆ ದೂರದ ಪ್ರಯಾಣ ಮಾಡದಂತೆ ಬಾಲಕಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಸಲಹೆ ನೀಡಿದ್ದ ಕಾರಣ ದ.ಕ ಜಿಲ್ಲಾ ಪದವಿ ಪೂರ್ವ ಇಲಾಖೆಯ ಉಪನಿರ್ದೇಶಕರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಅವರ ಗಮನಕ್ಕೆ ತಂದಿದ್ದರು. ಹೀಗಾಗಿ ಮಂಗಳೂರಿನ ಆಸ್ಪತ್ರೆಯಿಂದ ಸುಮಾರು ಒಂದು ಕಿ.ಮೀ ದೂರದಲ್ಲಿರುವ ಪದವಿಪೂರ್ವ ಕಾಲೇಜುನಲ್ಲಿ ಈಕೆಗೆ ಸಿಇಟಿ ಬರೆಯಲು ರಮ್ಯಾ ಅವರು ಅನುಮತಿ ನೀಡಿದ್ದರು.

ಅದರಂತೆ ವಿದ್ಯಾರ್ಥಿನಿ ಸಿಇಟಿ ಕೇಂದ್ರಕ್ಕೆ ತನ್ನ ತಾಯಿಯೊಂದಿಗೆ ಆಂಬ್ಯುಲೆನ್ಸ್‌ ನಲ್ಲಿ ಬಂದಿದ್ದು ಆಕೆಗೆ ಪ್ರತ್ಯೇಕ ತರಗತಿಯನ್ನು ನೀಡಲಾಗಿತ್ತು . ಅಲ್ಲಿ ಮೊದಲ ದಿನ ಜೀವಶಾಸ್ತ್ರ ಪರೀಕ್ಷೆ ಬರೆದು ಬಳಿಕ ಮಧ್ಯಾಹ್ನ 12.15ಕ್ಕೆ ಆಸ್ಪತ್ರೆಗೆ ಮರಳಿ 2.30 ವಾಪಸ್‌ ಬಂದು ಗಣಿತ ಪರೀಕ್ಷೆ ಬರೆದಿದ್ದಾರೆ .ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯದ ಪರೀಕ್ಷೆಗಳನ್ನು ಶುಕ್ರವಾರ ಬರೆದಿದ್ದಾರೆ.

ಆ್ಯಸಿಡ್‌ ದಾಳಿಯಿಂದ ಸಂತ್ರಸ್ತರಾಗಿರುವ ಮೂವರು ವಿದ್ಯಾರ್ಥಿನಿಯರೂ ಏ.29ರಂದು ಪ್ರಾರಂಭವಾಗುವ ಪಿಯುಸಿ ಮರು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾರೆ. ವೈದ್ಯರ ಸಲಹೆಯಂತೆ ಇಲಾಖೆಯು ಮರು ಪರೀಕ್ಷೆಗೆ ಹಾಜರಾಗಲು ಅನುಕೂಲವಾಗುವಂತೆ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ಪದವಿ ಪೂರ್ವ ಇಲಾಖೆಯ ಉಪನಿರ್ದೇಶಕ ಜಯಣ್ಣ ಸಿ.ಡಿ. ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here