ಉಪ್ಪಿನಂಗಡಿ: ಕಾಂಗ್ರೆಸ್ ಪಕ್ಷವು ಮುಸ್ಲಿಮರ ತುಷ್ಟೀಕರಣದಲ್ಲಿ ತೊಡಗಿದ್ದು, ಹಿಂದುತ್ವಕ್ಕಾಗಿ, ದೇಶಕ್ಕಾಗಿ, ರಾಮನಿಗಾಗಿ, ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ನೀವೆಲ್ಲಾ ರಾಮ ಭಕ್ತರು, ಹಿಂದೂಗಳೇ ಆಗಿದ್ದಲ್ಲಿ ಬಿಜೆಪಿಗೆ ಮತ ಹಾಕಿ ನರೇಂದ್ರ ಮೋದಿಯವರನ್ನು ಮೂರನೇ ಬಾರಿ ಪ್ರಧಾನಿಯನ್ನಾಗಿ ಮಾಡಬೇಕೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದರು.
ಉಪ್ಪಿನಂಗಡಿ ಪೇಟೆಯಲ್ಲಿ ಎ.23ರಂದು ಸಂಜೆ ನಡೆದ ಬಿಜೆಪಿ ಅಭ್ಯರ್ಥಿ ಪರವಾಗಿ ಮತಯಾಚನೆ ಸಂದರ್ಭ ಬಸ್ ನಿಲ್ದಾಣದಲ್ಲಿ ಅವರು ಸಾರ್ವಜನಿಕ ಭಾಷಣ ಮಾಡಿದರು. ಹಿಂದುತ್ವ, ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಶಕ್ತಿ ತುಂಬುವ ಕೆಲಸ ನರೇಂದ್ರ ಮೋದಿಯವರು ಮಾಡಿದ್ದು, ಈ ಬಾರಿ ಬಿಜೆಪಿಗೆ 400ಕ್ಕಿಂತ ಹೆಚ್ಚು ಸೀಟ್‌ಗಳು ಬಂದರೆ ಮಾತ್ರ ಮುಂದಿನ 100-150 ವರ್ಷಗಳವರೆಗೆ ಹಿಂದೂಗಳಿಗೆ ಉತ್ತಮ ಬದುಕು ಸಾಧ್ಯವಾಗಲಿದೆ. ಆದ್ದರಿಂದ ನೀವೆಲ್ಲಾ ಬಿಜೆಪಿಯನ್ನು ಗೆಲ್ಲಿಸಬೇಕು ಎಂದರು.
ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ವಠಾರದಿಂದ ಆರಂಭವಾದ ಮತಯಾಚನೆ ಪೇಟೆಯಲ್ಲಿ ಸಾಗಿ ಗಾಂಧಿಪಾರ್ಕ್‌ನಲ್ಲಿ ಸಮಾಪನಗೊಂಡಿತು. ಕಾರ್ಯಕ್ರಮದಲ್ಲಿ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವ, ಬಿಜೆಪಿ ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ಸುಲೋಚನಾ ಭಟ್, ಅರುಣ್ ಕುಮಾರ್ ಪುತ್ತಿಲ, ಪುರುಷೋತ್ತಮ ಮುಂಗ್ಲಿಮನೆ, ಸುನೀಲ್ ಕುಮಾರ್ ದಡ್ಡು, ಯತೀಶ್ ಆರುವಾರ, ನಿತೀಶ್ ಕುಮಾರ್ ಶಾಂತಿವನ, ಕೆ.ವಿ. ಪ್ರಸಾದ, ಚಂದಪ್ಪ ಮೂಲ್ಯ, ಹರಿಪ್ರಸಾದ್ ಯಾದವ್, ಮುಕುಂದ ಗೌಡ ಬಜತ್ತೂರು, ಉಮೇಶ್ ಶೆಣೈ, ಶ್ಯಾಮಲಾ ಶೆಣೈ, ಉಷಾಚಂದ್ರ ಮುಳಿಯ, ಸಹಜ್ ರೈ ಬಳೆಜ್ಜ, ರಾಮಚಂದ್ರ ಮಣಿಯಾಣಿ, ವಿದ್ಯಾಧರ ಜೈನ್, ಸಂತೋಷ್ ಕುಮಾರ್ ಪಂರ್ದಾಜೆ, ಪ್ರಶಾಂತ್ ಪೆರಿಯಡ್ಕ, ಚಿದಾನಂದ ಪಂಚೇರು ಮತ್ತಿತರರು ಉಪಸ್ಥಿತರಿದ್ದರು. ಸುರೇಶ್ ಅತ್ರೆಮಜಲು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.