ಪುತ್ತೂರು: ಮೋದಿ ಹೇಳುವ ಗ್ಯಾರಂಟಿ ಕೇವಲ ಅವರ ಬಾಯಲ್ಲಿ ಮಾತ್ರ ಉಳಿದಿದೆ. ಆದರೆ ಕಾಂಗ್ರೆಸ್ ಹೇಳಿದ ಗ್ಯಾರಂಟಿ ಜನರ ಕೈ ಸೇರಿದೆ. ಇದುವೇ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಇರುವ ವ್ಯತ್ಯಾಸ ಎಂದು ಮಾಜಿ ಸಚಿವ, ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಬಿ. ರಮಾನಾಥ ರೈ ಹೇಳಿದರು.
ಎ.23ರಂದು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗರು ತಮ್ಮ ಗ್ಯಾರಂಟಿಯನ್ನು ಮೋದಿ ಗ್ಯಾರಂಟಿ ಎಂದು ಕರೆಯುತ್ತಿದ್ದಾರೆಯೇ ಹೊರತು ಬಿಜೆಪಿ ಗ್ಯಾರಂಟಿ ಎನ್ನುತ್ತಿಲ್ಲ. ಆದರೆ ನಾವು ವ್ಯಕ್ತಿಯ ಹೆಸರಿನಲ್ಲಿ ಗ್ಯಾರಂಟಿ ಕೊಟ್ಟಿದ್ದಲ್ಲ, ನಮ್ಮದು ಕಾಂಗ್ರೆಸ್ ಗ್ಯಾರಂಟಿ. ಇಷ್ಟಕ್ಕೂ ಮೋದಿ ಗ್ಯಾರಂಟಿ ಯಾರಿಗೆ ತಲುಪಿದೆ ಎಂದು ಪ್ರಶ್ನಿಸಿದರು. ಮೋದಿ ಕಳೆದ 10 ವರ್ಷದಲ್ಲಿ ಎಷ್ಟೋ ಭಾಷಣ ಮಾಡಿ, ಹಲವು ಭರವಸೆ ನೀಡಿದ್ದಾರೆ. ಅವರ ಹಿಂದಿನ ಭಾಷಣಗಳನ್ನು ಅವರು ಈಗ ಕೇಳಿದರೆ ಅವರೇ ಅವರಿಗೆ ಓಟು ಕೊಡ್ಲಿಕ್ಕಿಲ್ಲ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ಹಿಂದಿನ ಅವಧಿಯಲ್ಲಿ ಪ್ರಣಾಳಿಕೆಯಲ್ಲಿ ಶೇ.99ರಷ್ಟು ಭರವಸೆ ಈಡೇರಿಸಿದೆ. ಈ ಬಾರಿಯೂ ಈಡೇರಿಸಲಿದೆ ಎಂದರು. ಕಾಂಗ್ರೆಸ್ ಪಕ್ಷ 60 ವರ್ಷ ಏನು ಮಾಡಿದೆ ಎಂದು ಬಿಜೆಪಿ ಕೇಳುತ್ತಿದೆ. ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂಬುದಕ್ಕೆ ಮೋದಿ ಅವರು ಮಾರಿದ ಸಂಸ್ಥೆಗಳ ಪಟ್ಟಿ ನೋಡಿದರೆ ಸಾಕು. ನಾವು ಮಾಡಿದ್ದನ್ನು ಅವರು ಮಾರಿದ್ದಾರೆ ಎಂದು ಹೇಳಿದರು.
ಬಿಜೆಪಿ ವಾಷಿಂಗ್ ಮೆಶಿನ್ ನಲ್ಲಿ ಭ್ರಷ್ಟರೆಲ್ಲ ಶುದ್ಧರಾಗುತ್ತಿದ್ದಾರೆ:
ಕಾಂಗ್ರೆಸ್‌ನಲ್ಲಿರುವಾಗ ಭ್ರಷ್ಟಾಚಾರಿಗಳೆಂದು ಯಾರನ್ನು ಟಾರ್ಗೆಟ್ ಮಾಡಿದರೋ ಅದೇ ನಾಯಕರು ಬಿಜೆಪಿಗೆ ಸೇರಿದ ಬಳಿಕ ಅವರ ಮೇಲಿನ ಭ್ರಷ್ಟಾಚಾರ ಆರೋಪ ಇಲ್ಲ. ಬಿಜೆಪಿ ಎಂಬ ವಾಷಿಂಗ್ ಮೆಷಿನ್‌ನಲ್ಲಿ ಭ್ರಷ್ಟರೆಲ್ಲ ಶುದ್ಧರಾಗುತ್ತಿದ್ದಾರೆ ಎಂದು ರಮಾನಾಥ ರೈ ಹೇಳಿದರು. ನಾವು ಗ್ಯಾರಂಟಿ ಘೋಷಣೆ ಮಾಡಿದಾಗ ಅದನ್ನು ಬೋಗಸ್ ಎಂದು ಜರೆದರು. ಜಾರಿಗೆ ತರಲು ಮುಂದಾದಾಗ ಬಿಟ್ಟಿ ಭಾಗ್ಯ ಎಂದರು. ಆದರೆ ನಮ್ಮದು ಬಡ ಮತ್ತು ಮಧ್ಯಮ ವರ್ಗದ ಜನರ ಬದುಕು ಕಟ್ಟುವ ಗ್ಯಾರಂಟಿಗಳು. ಮೋದಿ ಅವರದ್ದು ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡುವುದೇ ದೊಡ್ಡ ಸಾಧನೆ ಎಂದು ರೈ ಹೇಳಿದರರು.
ದಕ್ಷಿಣ ಕನ್ನಡದಲ್ಲಿ ಬೆನಗಲ್ ಶಿವರಾಯರು, ಕೆ.ಆರ್. ಆಚಾರ್, ಸಿ.ಎಂ. ಪೂಣಚ್ಚ, ಶಂಕರ ಆಳ್ವಾ, ಕೆ.ಕೆ. ಶೆಟ್ಟಿ, ಜನಾರ್ದನ ಪೂಜಾರಿ ಮಾಡಿದ ಅಭಿವೃದ್ಧಿ ಕಾರ್ಯಗಳೇ ಈಗಲೂ ಕಾಣುತ್ತಿದೆ. ಶ್ರೀನಿವಾಸ ಮಲ್ಯರಂಥ ಕಾಂಗ್ರೆಸ್ ನಾಯಕ ಜಿಲ್ಲೆಗೆ ತಂದ ಯೋಜನೆಗಳೇ ಈಗಲೂ ಕಾಣುತ್ತಿವೆ. ಆದರೆ 33 ವರ್ಷದಲ್ಲಿ ಬಿಜೆಪಿ ಸಂಸದರು ತಂದ ಒಂದೇ ಒಂದು ದೊಡ್ಡ ಯೋಜನೆ ಇದ್ದರೆ ಹೇಳಲಿ. ಈಗ ನಡೆಯುತ್ತಿರುವ ಬಂಟ್ವಾಳ – ಹಾಸನ ಹೆದ್ದಾರಿ ಅಗಲೀಕರಣ ಕೂಡ ಆಸ್ಕರ್ ಫರ್ನಾಂಡಿಸ್ ಸಚಿವರಾಗಿದ್ದಾಗ ಮಂಜೂರಾಗಿದ್ದು, ಜಿಲ್ಲೆಯ ಹೆಗ್ಗುರುತುಗಳಾಗಿದ್ದ ಸಿಂಡಿಕೇಟ್ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್‌ಗಳನ್ನು ಗುಜರಾತಿನ ಬ್ಯಾಂಕ್‌ಗಳ ಜತೆ ವಿಲೀನ ಮಾಡಿ ದಕ್ಷಿಣ ಕನ್ನಡಕ್ಕೆ ಮೋಸ ಮಾಡಿದ್ದು ಮಾತ್ರ ಮೋದಿ ಸಾಧನೆ. ಬಿಜೆಪಿಯ ಸಿದ್ದಾಂತದಿಂದಾಗಿಯೇ ಜಿಲ್ಲೆಯಲ್ಲಿ ಅದೆಷ್ಟೋ ಕೊಲೆಗಳಾದವು. ಅದೆಷ್ಟೋ ಯುವಕರು ಜೈಲಿಗೆ ಹೋದರು ಎಂದು ರಮಾನಾಥ ರೈ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಂ ಕೆ.ಬಿ, ಕ್ಷೇತ್ರದ ಚುನಾವಣಾ ಪ್ರಚಾರ ಉಸ್ತುವಾರಿ ಕಾವು ಹೇಮನಾಥ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಉಪಸ್ಥಿತರಿದ್ದರು.