ಭಕ್ತಿ, ಭಾವದ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದೆ ಕಾರ್ಪಾಡಿ ಸುಬ್ರಹ್ಮಣ್ಯ ದೇವರ ಬ್ರಹ್ಮಲಶೋತ್ಸವ

0

ಪುತ್ತೂರು: ಸುಮಾರು ಎರಡೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುವ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ಸುಂದರವಾದ ದೇವಸ್ಥಾನದಲ್ಲಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೇವರ ಪುನಃಪ್ರತಿಷ್ಠೆ, ಅಷ್ಠಬಂಧ, ಬ್ರಹ್ಮಕಲಶೋತ್ಸವವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಕ್ತಿ ಭಾವದ ಸಂಭ್ರಮದಿಂದ ನಡೆಯುತ್ತಿದೆ.

ಎ.20ರಂದು ಹಸಿರು ಹೊರೆಕಾಣಿಕೆ ಸಮರ್ಪಣೆಯೊಂದಿಗೆ ಪ್ರಾರಂಭಗೊಂಡ ಬ್ರಹ್ಮಕಲಶೋತ್ಸವಗಳಿಗೆ ಚಾಲನೆ ದೊರೆಯಿತು. ಎ.21ರಂದು ವಿವಿಧ ಉದ್ಘಾಟನೆಗಳು ನಡೆದು ಸಂಜೆ ಕ್ಷೇತ್ರದ ತಂತ್ರಿಗಳು ಹಾಗೂ ಋತ್ವಿಜರಿಗೆ ಸ್ವಾಗತ ನಡೆದ ಬಳಿಕ ವೈದಿಕ ಹಾಗೂ ತಾಂತ್ರಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಸುಮಾರು 6 ಕಿ.ಮೀ ದೂರದ ಕಾರ್ಪಾಡಿ ದೇವಸ್ಥಾನದವರೆಗೆ ಅದ್ಧೂರಿ ಮೆರವಣಿಗೆ ಮಾಡಿ ದಾಖಲೆಯ ಹಸಿರುವಾಣಿ ಸಮರ್ಪಣೆ ಮಾಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದರು.

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಭಿನ್ನ ದಿಕ್ಕುಗಳಲ್ಲಿ ನಾಲ್ಕು ಪ್ರಧಾನ ದ್ವಾರಗಳು ಕಂಗೊಳಿಸುತ್ತಿವೆ. ಕಲ್ಲರ್ಪೆ ಮುಖ್ಯರಸ್ತೆಯಿಂದ ದೇವಸ್ಥಾನಕ್ಕೆ ತೆರಳುವ ರಸ್ತೆಯು ಬಂಟಿಗ್ಸ್, ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಭಕ್ತಾದಿಗಳು ಕೈ ಬೀಸಿ ಕರೆಯುತ್ತಿದೆ. ದೇವಾಲಯದ ರಸ್ತೆಯುದ್ದಕ್ಕೂ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದು ಬ್ರಹ್ಮಕಲಶೋತ್ಸವದ ಸಂಭ್ರಮ ಎದ್ದುಕಾಣುತ್ತಿದೆ. ಪ್ರತಿದಿನ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಧಾರ್ಮಿಕ ಸಭೆ, ವಿವಿಧ ಕಲಾ ತಂಡಗಳಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಬ್ರಹ್ಮಕಲಶೋತ್ಸವದಲ್ಲಿ ಮೇಲೈಸುತ್ತಿದೆ.

ನಿರಂತರ ಶುಚಿರುಚಿಯಾದ ಅನ್ನದಾನ:
ಕ್ಷೇತ್ರದಲ್ಲಿ ಎ.20ರಿಂದ ಮಧ್ಯಾಹ್ನದಿಂದಲೇ ನಿರಂತರ ಅನ್ನದಾನ ಆರಂಭಗೊಂಡಿದೆ. ಪ್ರತೀ ಹೊತ್ತಿಗೂ ವಿಶೇಷ ಸಿಹಿ ಭಕ್ಷ್ಯ ನೀಡಲಾಗುತ್ತಿದೆ. ಏಕಕಾಲದಲ್ಲಿ ಸುಮಾರು 300 ಮಂದಿ ಕುಳಿತು ಊಟ ಮಾಡುವ ಸೌಲಭ್ಯ, ಬಟ್ಟಲು ಊಟ ಹಾಗೂ ವಿಶೇಷವಾಗಿ ನೆಲದಲ್ಲಿ ಕುಳಿತು ಊಟ ಮಾಡುವ ವಿಶಾಲವಾದ ಅನ್ನಛತ್ರವಿದೆ. ಬೆಳಿಗ್ಗೆ ಹಾಗೂ ಸಂಜೆ ವಿವಿಧ ಬಗೆಯ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ವಿವಿಧ ಭಕ್ಷಗಳೊಂದಿಗೆ ಊಟದ ವ್ಯವಸ್ಥೆಯಿದ್ದು ಪ್ರತಿ ದಿನ ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸುತ್ತಿದ್ದಾರೆ. ನಾನಾ ಸಂಘ ಸಂಸ್ಥೆಗಳು ಮತ್ತು ಊರವರು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದು, ಸ್ವಚ್ಛತೆ ಮತ್ತು ಅಚ್ಚುಕಟ್ಟುತನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಬಟ್ಟಲು, ಗ್ಲಾಸ್‌ಗಳನ್ನು ಬಿಸಿ ನೀರಿನಲ್ಲಿ ತೊಳೆದೇ ಬಳಸುತ್ತಿದ್ದು ಶುಚಿ ಮತ್ತು ರುಚಿಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ.

ಉತ್ತಮ ಸ್ವಯಂಸೇವಕರ ತಂಡ:
ಚಹಾ, ತಿಂಡಿಯಿಂದ ಹಿಡಿದು ಅನ್ನಸಂತರ್ಪಣೆ, ಪಾನೀಯ ವ್ಯವಸ್ಥೆ ಹಾಗೂ ವೈದಿಕ ಕಾರ್ಯಕ್ರಮಗಳಿಗೆ ಬೇಕಾದ ಸುವಸ್ತುಗಳನ್ನು ಸಾಗಿಸುವುದು, ಸ್ವಚ್ಛತೆ, ಶುಚಿತ್ವ ಇತ್ಯಾದಿ ಎಲ್ಲಾ ಕೆಲಸಗಳಿಗೂ ಸ್ವಯಂಸೇವಕರ ತಂಡವೇ ಇಲ್ಲಿದೆ. ಸಂಪ್ಯ ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರತಿದಿನ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಸದಸ್ಯರುಗಳು, ಶೌರ್ಯ ವಿಪತ್ತು ನಿರ್ವಹಣಾ ತಂಡ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಲ್ಲದೆ ಗ್ರಾಮದ ಭಕ್ತಾಧಿಗಳು ಕೂಡ ಸ್ವಯಂಸೇವಕರಾಗಿ ರಾತ್ರಿ, ಹಗಲು ದುಡಿಯುತ್ತಿದ್ದಾರೆ. ಸ್ವಯಂ ಸೇವಕ ಸಮಿತಿಯ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ನಿರ್ವಹಣೆಯಾಗುತ್ತಿದೆ.

ವ್ಯವಸ್ಥಿತವಾದ ಪಾರ್ಕಿಂಗ್ ವ್ಯವಸ್ಥೆ:
ಬ್ರಹ್ಮಕಲಶೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥಿತವಾದ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ದೇವಸ್ಥಾನದಿಂದ ಅಣತಿ ದೂರದಲ್ಲೇ ಪಾರ್ಕಿಂಗ್‌ಗೆ ಜಾಗ ಮಾಡಲಾಗಿದೆ. ಇದಲ್ಲದೆ ರಸ್ತೆಯ ಒಂದು ಬದಿಯಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟಿನಲ್ಲಿ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ಪಾರ್ಕಿಂಗ್ ನಿರ್ವಹಣಾ ಸಮಿತಿಯ ನೇತೃತ್ವದಲ್ಲಿ ವ್ಯವಸ್ಥೆ ಮಾಡುತ್ತಿದ್ದಾರೆ.

ಅಚ್ಚುಕಟ್ಟಾದ ವ್ಯವಸ್ಥೆಗಳು:
ಕಾರ್ಪಾಡಿಯ ಬ್ರಹ್ಮಕಲಶೋತ್ಸವದಲ್ಲಿ ಅನ್ನಸಂತರ್ಪಣೆಯಿಂದ ಹಿಡಿದು ವೈದ್ಯಕೀಯ ವ್ಯವಸ್ಥೆಯ ತನಕ ಎಲ್ಲವೂ ಬಹಳ ಅಚ್ಚುಕಟ್ಟಾಗಿ ಮಾಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಸಭೆಗಳನ್ನು ವೀಕ್ಷಿಸಲು ವಿಶಾಲವಾದ ಸಭಾ ವೇದಿಕೆ, ಸಭಾಂಗಣ ನಿರ್ಮಾಣ ಮಾಡಲಾಗಿದೆ. ಇಲ್ಲಿ ಭಕ್ತಾಧಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವ್ಯವಸ್ಥೆಗಳನ್ನು ಮಾಡಲಾಗಿದೆ. ಶುದ್ಧವಾದ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಎಲ್ಲವನ್ನು ಮಾಡಲಾಗಿದೆ. ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ವಿವಿಧ ಉಪ ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಹಗಲಿರುಳು ದುಡಿಯುತ್ತಿರುವ ಕರಸೇವಕರು, ಭಕ್ತಾಧಿಗಳು, ಗ್ರಾಮಸ್ಥರು ದೇವರ ಬ್ರಹ್ಮಕಲಶೋತ್ಸವವನ್ನು ಅದ್ಧೂರಿಯಾಗಿ ನೆರವೇರಿಸುವಲ್ಲಿ ಪಣತೊಟ್ಟಿದ್ದಾರೆ.

ಎ.26 ಪ್ರತಿಷ್ಠೆ, ಎ.27 ಬ್ರಹ್ಮಕಲಶಾಭಿಷೇಕ:
ಕ್ಷೇತ್ರದ ಬ್ರಹ್ಮಕಲಶೋತ್ಸವದಲ್ಲಿ ಎ.26ರಂದು ಪ್ರಾತಃಕಾಲದಿಂದ ವಿವಿಧ ವೈದಿಕ, ತಾಂತ್ರಿಕ ವಿಧಿ ವಿಧಾನಗಳು, ಬೆಳಿಗ್ಗೆ ಗಂಟೆ 9.24ರಿಂದ 10.15ರ ವಿಥುನ ಲಘ್ನ ಶುಭಮುಹೂರ್ತದಲ್ಲಿ ಶ್ರೀ ಸುಬ್ರಹಣ್ಯ, ಶ್ರೀಗಣಪತಿ ಹಾಗೂ ಶ್ರೀ ದುರ್ಗಾದೇವಿಯ ಪ್ರತಿಷ್ಠೆ, ಅಷ್ಟಬಂಧ ಕ್ರಿಯೆ, ಕುಂಭೇಶ ಕಲಶಾಭಿಷೇಕ, ನಿದ್ರಕಲಶಾಭಿಷೇಕ, ಶಿಖರ ಪ್ರತಿಷ್ಠೆ, ದೈವಗಳ ಪ್ರತಿಷ್ಠೆ, ತಂಬಿಲ ಸೇವೆ, ನಿತ್ಯ ನೈಮಿತ್ಯಾದಿಗಳ ನಿರ್ಣಯ ನಡೆಯಲಿದೆ. ಎ.27ರಂದು ದೇವರಿಗೆ ಬ್ರಹ್ಮಕಲಶಾಭಿಷೇಕ, ರಾತ್ರಿ ರಂಗಪೂಜೆ, ದೇವರ ಬಲಿ ಹೊರಟು, ಶ್ರೀಭೂತ ಬಲಿ, ವಸಂತ ಕಟ್ಟೆಪೂಜೆ, ಸಂಪ್ಯ ಶ್ರೀ ಗಣೇಶ ಸುಬ್ರಹ್ಮಣ್ಯ ಕಟ್ಟೆಗೆ ದೇವರ ಸವಾರಿ, ಎ.28ರಂದು ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಧ್ಯಾಹ್ನ ವ್ಯಾಘ್ರ ಚಾಮುಂಡಿ ಹಾಗೂ ಗುಳಿಗ ದೈವದ ನೇಮ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here