ಪುತ್ತೂರು: ತಿಂಗಳಾಡಿ ಸಮೀಪದ ದರ್ಬೆ ನಿವಾಸಿ ದುಬೈಯಲ್ಲಿ ಪ್ರತಿಷ್ಠಿತ ಕಂಪೆನಿಯಲ್ಲಿ ಉದ್ಯೋಗದಲ್ಲಿರುವ ಅಬ್ದುಲ್ ಲತೀಫ್ ಟಿ.ಎ ಅವರು ಮತದಾನ ಮಾಡಲೆಂದೇ ಊರಿಗೆ ಆಗಮಿಸಿ ಮಾದರಿಯಾದರು. ಅಬ್ದುಲ್ ಲತೀಫ್ ಟಿ.ಎ ಅವರು ಮತದಾನದ ದಿನದಂದೇ(ಎ.26) ದುಬೈಯಿಂದ ಸ್ವದೇಶಕ್ಕೆ ಆಗಮಿಸಿದ್ದು ನೇರವಾಗಿ ತಿಂಗಳಾಡಿ ಶಾಲೆಯ ಬೂತ್ ಸಂಖ್ಯೆ 188ಕ್ಕೆ ತೆರಳಿ ಮತದಾನ ಮಾಡಿದ್ದಾರೆ. ಮತದಾನ ಮಾಡುವ ಉದ್ದೇಶಕ್ಕೆ ದುಬೈಯಿಂದ ತಾಯ್ನಾಡಿಗೆ ಹೊರಟ ಲತೀಫ್ ಟಿ.ಎ ಅವರು ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡಿದ್ದು ಆ ಮೂಲಕ ಮತದಾನದ ಮಹತ್ವದ ಬಗ್ಗೆ ಸಮಾಜಕ್ಕೆ ಉತ್ತಮ ಸಂದೇಶವನ್ನು ಅವರು ಸಾರಿದಂತಾಗಿದೆ. ಮತದಾನ ಕೇಂದ್ರಕ್ಕೆ ಆಗಮಿಸಿದ ಲತೀಫ್ ಟಿ.ಎ ಅವರನ್ನು ಅವರ ಗೆಳೆಯರು ಸ್ವಾಗತಿಸಿದರು.
ನಾನು ಮತದಾನ ಮಾಡುವ ಉದ್ದೇಶಕ್ಕೆ ದುಬೈಯಿಂದ ಆಗಮಿಸಿದ್ದು ನಾಳೆ(ಎ.27) ವಾಪಸ್ ದುಬೈಗೆ ಹೋಗುತ್ತೇನೆ. ಮತದಾನ ಪ್ರತಿಯೊಬ್ಬರ ಹಕ್ಕಾಗಿದ್ದು ಅದರ ಮಹತ್ವ ತಿಳಿದು ಮತದಾನ ಮಾಡಲು ಊರಿಗೆ ಬಂದಿರುವುದಾಗಿ ಲತೀಫ್ ಟಿ.ಎ ತಿಳಿಸಿದ್ದಾರೆ. ಇವರು ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಮತದಾನ ಮಾಡಲು ದುಬೈಯಿಂದ ಊರಿಗೆ ಆಗಮಿಸಿ ಸುದ್ದಿಯಾಗಿದ್ದರು.