ನೆಲ್ಯಾಡಿ: ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಚಾಲಕರೊಳಗೆ ವಾಗ್ವಾದ ನಡೆದಿರುವ ಘಟನೆ ನೆಲ್ಯಾಡಿ ಸಮೀಪದ ಪೆರಿಯಶಾಂತಿಯಲ್ಲಿ ಎ.27ರಂದು ಮಧ್ಯಾಹ್ನ ನಡೆದಿದೆ.
ಕಾಪುಗೆ ಚುನಾವಣೆ ಕರ್ತವ್ಯಕ್ಕೆ ಆಗಮಿಸಿದ ಬೆಂಗಳೂರಿನಲ್ಲಿ ಸಿಐಡಿಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿರುವ ಆಂಜನಪ್ಪ ಹಾಗೂ ಇತರೇ ಇಬ್ಬರು ಸಿಬ್ಬಂದಿಗಳು ಎ.27ರಂದು ಬೆಳಿಗ್ಗೆ ತಮ್ಮ ಖಾಸಗಿ ಕಾರಿನಲ್ಲಿ ಧರ್ಮಸ್ಥಳ, ಸೌತಡ್ಕ ದೇವಸ್ಥಾನಕ್ಕೆ ಭೇಟಿ ನೀಡಿ ಸುಬ್ರಹ್ಮಣ್ಯಕ್ಕೆಂದು ಹೋಗುತ್ತಿದ್ದವರು ರಾಷ್ಟ್ರೀಯ ಹೆದ್ದಾರಿ 75ರ ಪೆರಿಯಶಾಂತಿ ತಲುಪುತ್ತಿದ್ದಂತೆ ಉಪ್ಪಿನಂಗಡಿಯಿಂದ ಶಿರಾಡಿ ಕಡೆಗೆ ಶಿರಾಡಿ ನಿವಾಸಿ ಅಶ್ವಿನ್ರವರು ಚಲಾಯಿಸಿಕೊಂಡು ಬರುತ್ತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ.
ಕಾರು ಡಿಕ್ಕಿಯಾದರೂ ಪೊಲೀಸ್ ಸಿಬ್ಬಂದಿಗಳು ಕಾರು ನಿಲ್ಲಿಸದೆ ತುಸು ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದರು. ಹಿಂಬಾಲಿಸಿದ ಅಶ್ವಿನ್ ಅವರು ಪೊಲೀಸರಿದ್ದ ಕಾರು ತಡೆದು ಅವರ ವಿರುದ್ಧ ಅವಾಚ್ಯ ಶಬ್ದ ಬಳಸಿದರೆಂದು ಹಾಗೂ ಇದರಿಂದ ಕುಪಿತರಾದ ಹೆಡ್ ಕಾನ್ಸ್ಟೇಬಲ್ ಆಂಜನಪ್ಪ ಅವರು ತನ್ನಲ್ಲಿದ್ದ ಲಾಠಿಯಿಂದ ಅಶ್ವಿನ್ ಅವರಿಗೆ ಹೊಡೆದರೆಂದು ಹೇಳಲಾಗಿದೆ. ಬಳಿಕ ಈ ವಿಚಾರವಾಗಿ ಎರಡೂ ಕಡೆಯವರ ನಡುವೆ ಪರಸ್ಪರ ವಾಗ್ವಾದ ನಡೆದಿದ್ದು ಸ್ಥಳಕ್ಕೆ ಆಗಮಿಸಿದ ನೆಲ್ಯಾಡಿ ಹೊರ ಠಾಣೆ ಪೊಲೀಸರು ಎರಡೂ ಕಡೆಯವರನ್ನು ವಾಹನ ಸಮೇತ ಠಾಣೆಗೆ ಕರೆದೊಯ್ದಿದ್ದು ಠಾಣೆಯಲ್ಲಿ ಮಾತುಕತೆ ಮೂಲಕ ಪ್ರಕರಣ ಇತ್ಯರ್ಥಗೊಂಡಿದೆ ಎಂದು ವರದಿಯಾಗಿದೆ.