ಮೇ.2-4: ಬೆಟ್ಟಂಪಾಡಿ ಕಜೆ ಅನವುಗಾರ್ ಕುಟುಂಬದ ತರವಾಡು ಮನೆ ಪ್ರವೇಶೋತ್ಸವ,ನಾಗಪ್ರತಿಷ್ಠೆ, ಧರ್ಮದೈವ ಪಂಜುರ್ಲಿ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶ, ನೇಮೋತ್ಸವ

0

ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಕಜೆ ಅನವುಗಾರ್ ಕುಟುಂಬದ ತರವಾಡು ಮನೆ ಪ್ರವೇಶೋತ್ಸವ, ನಾಗಪ್ರತಿಷ್ಠೆ, ರಕ್ತೇಶ್ವರಿ, ಧರ್ಮದೈವ ಪಂಜುರ್ಲಿ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ಮೆ.2ರಿಂದ 4ರವರೆಗೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಕಜೆ ತರವಾಡು ಮನೆಯಲ್ಲಿ ನಡೆಯಲಿದೆ.

ಕಜೆ ಅನವುಗಾರ್ ಕುಟುಂಬದ ಇತಿಹಾಸ:
ಪೂರ್ವ ಕಾಲದಲ್ಲಿ ಕಜೆ ಎಂಬ ಸ್ಥಳವು ಜೈನ ಮನೆತನದ ಒಡೆತನದಲ್ಲಿದ್ದು ನಂತರ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯಕ್ಕೆ ಸಂಬಂಧಿಸಿದ ಜಾಗವಾಗಿತ್ತು. ತದನಂತರದಲ್ಲಿ ಕುಟುಂಬದ ಹಿರಿಯರಾದ ಕೀರ್ತಿಶೇಷ ಅಪ್ಪು ನಾಯ್ಕರವರು ಈ ಸ್ಥಳವನ್ನು ಖರೀದಿಸಿ ದೈವ ದೇವರುಗಳ ಆರಾಧನೆ ನಡೆಸುತ್ತಾ ಇಲ್ಲಿ ನೆಲೆಸಿದ್ದರು. ವರುಷಗಳು ಉರುಳಿದಂತೆ ಸಾನಿಧ್ಯವು ಜೀರ್ಣಾವಸ್ಥೆಗೆ ತಲುಪಿದಾಗ ಅನವುಗಾರ್ ಕುಟುಂಬದಲ್ಲಿ ನಾನಾ ರೀತಿಯ ದೋಷಗಳು ಕಂಡು ಬಂತು. ಸ್ಥಳ ಸಾನಿಧ್ಯದಲ್ಲಿ ಜೀರ್ಣೋದ್ಧಾರ ಮಾಡುವ ಸಲುವಾಗಿ ದೈವಜ್ಞರ ಮೂಲಕ ನಡೆಸಲಾದ ಪ್ರಶ್ನಾ ಚಿಂತನೆಯಲ್ಲಿ ನಾಗದೇವರು, ರಕ್ತೇಶ್ವರಿ, ವರ್ಣರ ಪಂಜುರ್ಲಿ ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಭೈರವ, ರಾಹುಗುಳಿಗ, ಗುಳಿಗ ಮುಂತಾದ ದೈವಗಳು ಅನಾದಿಕಾಲದಿಂದಲೇ ಆರಾಧನೆಗೊಳಪಟ್ಟಿದ್ದವು ಎಂದು ತಿಳಿದು ಬಂದಿತ್ತು. ದೈವಜ್ಞರಾದ ಜಯಚಂದ್ರನ್ ಕಾಸರಗೋಡು ಮತ್ತು ಲಕ್ಷ್ಮೀನಾರಾಯಣ ಮಲ್ಲಿರವರ ಮುಖೇನ ನಡೆದ ಅಷ್ಟಮಂಗಲ ಪ್ರಶ್ನಾ ಚಿಂತನೆಯ ಪ್ರಕಾರ ಕುಟುಂಬದ ತರವಾಡು ಮನೆ ಮತ್ತು ಎಲ್ಲಾ ದೈವ ದೇವರುಗಳ ಸಾನಿಧ್ಯ ಪುನರ್‌ನಿರ್ಮಾಣವಾಗಬೇಕೆಂದು ತಿಳಿದು ಬಂತು. ಆ ಪ್ರಕಾರ ಅನವುಗಾರ್ ಕುಟುಂಬ ತರವಾಡು ಟ್ರಸ್ಟ್(ರಿ.) ಕಜೆ ಎಂಬ ನಾಮಾಂಕಿತದೊಂದಿಗೆ ಕುಂಟಾರು ರವೀಶ ತಂತ್ರಿಗಳು ಹಾಗೂ ವಾಸ್ತುಶಿಲ್ಪ ತಜ್ಞ ಶಶಿ ಮಾವುಂಗಲ್ ಪೈಯ್ಯನ್ನೂರುರವರ ಮಾರ್ಗದರ್ಶನದೊಂದಿಗೆ ತರವಾಡು ಮನೆ ಹಾಗೂ ಧರ್ಮದೈವ, ಪರಿವಾರ ದೈವಗಳ ದೈವಸ್ಥಾನಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಕುಟುಂಬದ ಹಿರಿಯರಾದ ಕಜೆ ನಾರಾಯಣ ನಾಯ್ಕರ ಗೌರವಾಧ್ಯಕ್ಷತೆಯಲ್ಲಿ ಅನುಗಾರ್ ಕುಟುಂಬದ ಸರ್ವಸದಸ್ಯರ ಸಹಕಾರದೊಂದಿಗೆ ಜೀರ್ಣೋದ್ಧಾರ ಕಾರ್ಯ ನೆರವೇರಿಸಿ ಇದೀಗ ಸಮಾಜಭಾಂಧವರು, ಊರ ಪರವುರ ದಾನಿಗಳ ಸಹಕಾರದಿಂದ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಅಣಿಯಾಗಿದೆ.

ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ:
ಮೇ.2ರಂದು ಸಂಜೆ 4ರಿಂದ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ಸ್ಥಳ ಶುದ್ಧಿ, ಪುಣ್ಯಾಹವಾಚನ, ರಕ್ಷೋಘ್ನ ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ, ಪ್ರಸಾದ ವಿತರಣೆ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ. ಮೇ.3ರಂದು ಬೆಳಿಗ್ಗೆ 8ರಿಂದ ಗಣಪತಿ ಹೋಮ, ಭಜನೆ, ಬ್ರಹ್ಮಕಲಶ ಪೂಜೆ, ಗಂಟೆ 11.51ರ ಕರ್ಕಾಟಕ ಲಗ್ನ ಸುಮುಹೂರ್ತದಲ್ಲಿ ತರವಾಡುಮನೆ ಗೃಹಪ್ರವೇಶ, ಶ್ರೀವೆಂಕಟರಮಣ ದೇವರ ಮುಡಿಪು ಪೂಜೆ, ರಕ್ತೇಶ್ವರಿ, ಗುಳಿಗ, ನಾಗಪ್ರತಿಷ್ಠೆ, ಧರ್ಮದೈವ, ಪರಿವಾರ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಮಹಾಪೂಜೆ, ನಿತ್ಯನೈಮಿತ್ತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.

ನೇಮೋತ್ಸವ:
ಮೇ.3ರಂದು ಸಂಜೆ 6ರಿಂದ ದೈವಗಳ ಭಂಡಾರ ತೆಗೆಯುವುದು, ಎಣ್ಣೆಬೂಳ್ಯ ನೀಡುವುದು, ರಾತ್ರಿ ಅನ್ನಸಂತರ್ಪಣೆ ಬಳಿಕ ಕಲ್ಲುರ್ಟಿ, ಕುಪ್ಪೆಪಂಜುರ್ಲಿ ದೈವದ ನರ್ತನ ಸೇವೆ ನಡೆಯಲಿದೆ. ಮೇ.4ರಂದು ಬೆಳಿಗ್ಗೆ 7ರಿಂದ ಕುಟುಂಬದ ಧರ್ಮದೈವ ವರ್ಣರ ಪಂಜುರ್ಲಿ ನರ್ತನ ಸೇವೆ ಬಳಿಕ ಗುಳಿಗ ದೈವದ ನರ್ತನ ಸೇವೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಟ್ರಸ್ಟ್ ಗೌರವಾಧ್ಯಕ್ಷ ನಾರಾಯಣ ನಾಯ್ಕ ಕಜೆ, ಅಧ್ಯಕ್ಷ ಕೆ. ಸೇಸಪ್ಪ ನಾಯ್ಕ ಕಜೆ ಹಾಗೂ ಪ್ರಧಾನ ಕಾರ್ಯದರ್ಶಿ ಜಯಪ್ರಸಾದ ಸಿ. ಸನ್ನಿಧಿ ಚೆಲ್ಯಡ್ಕರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here