ಪುತ್ತೂರು:ಯಥಾಸ್ಥಿತಿ ಕಾಪಾಡಲು ನ್ಯಾಯಾಲಯದ ಆದೇಶವಿದ್ದರೂ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿಕೊಂಡಿದ್ದರೂ, ಮೇ 2ರಂದು ನಮ್ಮ ವರ್ಗ ಸ್ಥಳಕ್ಕೆ ಅಕ್ರಮವಾಗಿ ಪ್ರವೇಶಿಸಿ ರಸ್ತೆ ನಿರ್ಮಾಣ ಮಾಡಿದ್ದಲ್ಲದೇ ತಡೆಯಲು ಹೋದ ವೇಳೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿಕೊಂಡು ಉಪ್ಪಿನಂಗಡಿ ಗ್ರಾಮದ ಬೆತ್ತೋಡಿ ನಿವಾಸಿ ರಾಜೇಶ್ ಎಂಬವರು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
‘ನನ್ನ ತಾಯಿ ಸುಮಾರು 85 ವರ್ಷದ ಜಾನಕಿ ಅವರ ಹೆಸರಿನಲ್ಲಿರುವ ವರ್ಗ ಸ್ಥಳಕ್ಕೆ ಹರೀಶ್ ಹಾಗೂ ಇನ್ನಿತರರು ಅಕ್ರಮವಾಗಿ ಪ್ರವೇಶಿಸಿ ಜೆಸಿಬಿ ಬಳಸಿ ರಸ್ತೆ ನಿರ್ಮಾಣಕ್ಕೆ ಈ ಹಿಂದೆಯೇ ಮುಂದಾಗಿದ್ದರು.ಈ ಬಗ್ಗೆ ಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ ಯಥಾಸ್ಥಿತಿ ಕಾಪಾಡಲು ಏ.15ರಂದು ಕೋರ‍್ಟ್ ಆದೇಶ ನೀಡಿತ್ತು.ಆದರೂ ಹರೀಶ್ ಅವರು ಮತ್ತೆ ಮತ್ತೆ ತಕಾರರು ತೆಗೆದ ಹಿನ್ನೆಲೆಯಲ್ಲಿ ಮೇ 1ರ ರಾತ್ರಿ ನಾವು ಪೊಲೀಸರಿಗೆ ದೂರು ನೀಡಿದ್ದು ಅಲ್ಲಿಯೂ, ಯಥಾಸ್ಥಿತಿ ಕಾಪಾಡಲು ಎರಡೂ ಕಡೆಯವರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದರು.ಆದರೆ ಹರೀಶ್ ಅವರು ನ್ಯಾಯಾಲಯದ ಆದೇಶವನ್ನು ಉಲ್ಲಂಸಿ, ಪೊಲೀಸ್ ಠಾಣೆಯಲ್ಲಿನ ಮುಚ್ಚಳಿಕೆಗೂ ಬೆಲೆ ಕೊಡದೆ ಮೇ 2ರಂದು ಬೆಳಿಗ್ಗೆ ಸುಮಾರು 25 ಮಂದಿಯ ತಂಡದೊಂದಿಗೆ ನಮ್ಮ ಜಾಗಕ್ಕೆ ಅಕ್ರಮ ಪ್ರವೇಶಿಸಿ ಜೆಸಿಬಿಯಿಂದ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದರು.ಇದನ್ನು ತಡೆಯಲು ಹೋದ ನನಗೆ ಹಲ್ಲೆ ನಡೆಸಿದ್ದಾರೆ’ ಎಂದು ಆಸ್ಪತ್ರೆಯಲ್ಲಿ ದಾಖಲಾಗಿರುವ ರಾಜೇಶ್ ಅವರು ಆರೋಪಿಸಿದ್ದಾರೆ.ಹರೀಶ್, ದಿನೇಶ್, ನೀಲಪ್ಪ ಪೂಜಾರಿ, ಗಿರಿಯಪ್ಪ ಪೂಜಾರಿ, ಚರಣ್, ಕರ್ವೇಲು ಮುನ್ನಾ ಅವರು ನಮ್ಮ ವರ್ಗ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿದ್ದಾರೆ. ತಡೆಯಲು ಬಂದ ನನ್ನ ಅಕ್ಕನ ಮಗ ಅಜೇಯ್ ಅವರಿಗೂ ಹಲ್ಲೆ ನಡೆಸಿದ್ದಾರೆ.ಜೆಸಿಬಿ ಮಾಲಕ ಕರಾಯದ ಅಬ್ದುಲ್ ರಹಿಮಾನ್ ಎಂಬವರು ಜೆಸಿಬಿಯನ್ನು ಅಕ್ರಮವಾಗಿ ಚಲಾಯಿಸಿ ಜಮೀನಿಗೆ ಹಾನಿ ಮಾಡಿದ್ದಾರೆ ಎಂದೂ ರಾಜೇಶ್ ಆರೋಪಿಸಿದ್ದಾರೆ.