ಶಾಸಕನಾಗಿ ವರ್ಷ ಪೂರ್ಣಗೊಳಿಸಿದ ಸಂಭ್ರಮ-ನಡಿಗೆ ತಿಳಿಯಲು ಜನರ ಬಳಿಗೇ ನಡೆದ ಅಶೋಕ್ ಕುಮಾರ್ ರೈ

0

ಬಿಜೆಪಿ ಪ್ರಮುಖರ ಸಹಿತ ಉದ್ಯಮಿಗಳು, ಕೃಷಿಕರ ಭೇಟಿ
ಪುತ್ತೂರು ಕ್ಷೇತ್ರದ ಅಭಿವೃದ್ದಿಯ ಬಗ್ಗೆಯೂ ಚರ್ಚೆ

ಪುತ್ತೂರು:ತಾನು ಶಾಸಕನಾಗಿ ಆಯ್ಕೆಯಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈಯವರು,ತನ್ನ ಕಾರ್ಯಶೈಲಿ, ಒಂದು ವರ್ಷದ ತನ್ನ ಕಾರ್ಯಚಟುವಟಿಕೆ,ಜನರೊಂದಿಗೆ ಬೆರೆಯುವ ರೀತಿ, ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು,ಮುಂದೆ ಆಗಬೇಕಾಗಿರುವ ಪ್ರಮುಖ ಕೆಲಸಗಳು ಸೇರಿದಂತೆ ತನ್ನ ನಡಿಗೆ ಬಗ್ಗೆ ತಿಳಿಯಲು ಉದ್ಯಮಿಗಳು, ಪ್ರಗತಿಪರ ಕೃಷಿಕರು ಸೇರಿದಂತೆ ಕ್ಷೇತ್ರದ ಕೆಲವು ಗಣ್ಯರನ್ನು ಖುದ್ದು ಭೇಟಿಯಾಗಿ ಮಾತುಕತೆ ನಡೆಸಿ ಸಲಹೆಗಳನ್ನು ಪಡೆದುಕೊಳ್ಳುವ ಮೂಲಕ ಹೊಸ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದ್ದಾರೆ.ಬಿಜೆಪಿ ಪ್ರಮುಖರನ್ನೂ ಶಾಸಕರು ಭೇಟಿಯಾಗಿ ಮಾತುಕತೆ ನಡೆಸಿ ಸಲಹೆ ಪಡೆದುಕೊಂಡು ರಾಜಕೀಯ ಸೌಹಾರ್ದತೆಗೆ ಮಾದರಿಯಾಗಿದ್ದಾರೆ.


ಪ್ರಮುಖರನ್ನು ಭೇಟಿಯಾದ ಶಾಸಕರು ಕೇಳಿದ್ದಿಷ್ಟು:
ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಒಂದು ವರ್ಷ ಪೂರೈಸಿದ್ದೇನೆ.ನಾನು ಶಾಸಕನಾದ ಬಳಿಕ ನನ್ನ ನಡಿಗೆ, ಜನರೊಂದಿಗೆ ಬೆರೆಯುವ ರೀತಿ ಹೇಗಿದೆ?,ನನ್ನಲ್ಲಿ ಏನಾದರೂ ತಪ್ಪಾಗಿದೆಯೇ? ತಿದ್ದಿಕೊಳ್ಳುವಂಥ ವಿಚಾರ ಏನಾದರೂ ಇದೆಯೇ?ಪುತ್ತೂರು ಅಭಿವೃದ್ದಿಯಾಗಬೇಕಾದರೆ ನಾನು ಏನು ಮಾಡಬೇಕು? ಪುತ್ತೂರು ಕ್ಷೇತ್ರದಲ್ಲಿರುವ ಮುಖ್ಯ ಸಮಸ್ಯೆಯಾದರೂ ಏನು? ಚುನಾವಣೆಗೆ ಮೊದಲು ನಾನು ನಿಮ್ಮಲ್ಲಿ ಹೇಳಿದ ವಿಚಾರವನ್ನು ಪಾಲನೆ ಮಾಡಿದ್ದೇನೆಯೇ? ಮೊದಲಾದ ವಿಚಾರಗಳನ್ನು ಮುಂದಿಟ್ಟುಕೊಂಡು ಶಾಸಕ ಅಶೋಕ್ ಕುಮಾರ್ ರೈಯವರು, ಧಾರ್ಮಿಕ ನೇತಾರರು, ಉದ್ಯಮಿಗಳು,ಪ್ರಗತಿಪರ ಕೃಷಿಕರ ಬಳಿ ನೇರವಾಗಿ ತೆರಳಿ ಮಾತುಕತೆ ನಡೆಸಿದ್ದಾರೆ.

ಅಭಿವೃದ್ಧಿ ವಿಚಾರದಲ್ಲಿ ನಿಮಗೆ ನೂರು ಮಾರ್ಕ್
ಎಲ್ಲಾ ಜಾತಿ, ಧರ್ಮದವರನ್ನು ಒಂದೇ ರೀತಿಯಾಗಿ ಕಾಣುವ ನಿಮ್ಮ ಶೈಲಿ ಅತ್ಯುತ್ತಮವಾಗಿದೆ.ಬಡವ-ಬಲ್ಲಿದನೆಂಬ ಭೇದವಿಲ್ಲದೆ ಎಲ್ಲರನ್ನೂ ಗೌರವಿಸುವ ನಿಮ್ಮ ಪೃವೃತ್ತಿ ಎಲ್ಲರೂ ಮೆಚ್ಚುವಂಥದ್ದಾಗಿದೆ.ನಿಮ್ಮ ಬಳಿಗೆ ಸಹಾಯ ಕೇಳಿ ಬರುವ ಬಡವರಿಗೆ ಸ್ಥಳದಲ್ಲೇ ಸ್ಪಂದನೆ ನೀಡುವುದನ್ನು ಮುಂದುವರೆಸಿ, ನಿಮ್ಮಲ್ಲಿ ನಾಯಕತ್ವ ಗುಣವಿದ್ದ ಕಾರಣಕ್ಕೆ ನೀವು ಕಡಿಮೆ ಅವಽಯಲ್ಲಿ ಹೆಚ್ಚು ಜನರನ್ನು ತಲುಪುವುದಕ್ಕೆ ಸಾಧ್ಯವಾಗಿದೆ.ಈಗಿನ ನಿಮ್ಮ ಶೈಲಿ ಅತ್ಯುತ್ತಮವಾಗಿದ್ದು ಅದನ್ನೇ ಮುಂದುವರೆಸಿ.ಪುತ್ತೂರಿಗೆ ಒಂದು ಹೆಲಿಪ್ಯಾಡ್‌ನ ಅಗತ್ಯವಿದೆ ಅದು ನಿಮ್ಮ ಅವಧಿಯಲ್ಲಿ ನಿರ್ಮಾಣವಾಗಬೇಕು ಮತ್ತು ನಗರದಲ್ಲಿ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕಬೇಕು.ಅಭಿವೃದ್ದಿಯ ವಿಚಾರದಲ್ಲಿ ನಿಮಗೆ ನೂರು ಮಾರ್ಕ್ ಕೊಡುತ್ತೇವೆ-

ರೆ|-|ಲಾರೆನ್ಸ್ ಮಸ್ಕರೇನ್ಹಸ್,
ಪ್ರಧಾನ ಧರ್ಮಗುರುಗಳು, ಮಾಯಿದೆ ದೇವುಸ್ ಚರ್ಚ್, ಪುತ್ತೂರು

ನಿಮ್ಮ ಬಗ್ಗೆ ಯಾರಿಗೂ ಇದುವರೆಗೆ ಕೆಟ್ಟ ಅಭಿಪ್ರಾಯವೇ ಇಲ್ಲ
ನೀವು ಶಾಸಕರಾದ ಬಳಿಕ ನಿಮ್ಮ ಕೊರತೆಯನ್ನು ಯಾರೂ ಹೇಳುತ್ತಿಲ್ಲ ಮತ್ತು ಹೇಳಿದ್ದು ನನ್ನ ಗಮನಕ್ಕೆ ಬಂದಿಲ್ಲ,ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ,ಮನೆ ಇಲ್ಲದವರಿಗೆ ಗ್ರಾಮದಲ್ಲಿ ಜಾಗ ಗುರುತಿಸಿ ಅವರಿಗೆ ಸೂರು ಕಲ್ಪಿಸುವ ಯೋಜನೆ ಅತ್ಯುತ್ತಮವಾಗಿದೆ.ನೀವು ಎಂದೂ ಕಾರ್ಯಕರ್ತರನ್ನು ಕಡೆಗಣಿಸಬೇಡಿ, ಕಾರ್ಯಕರ್ತರನ್ನು ಕಡೆಗಣಿಸಿದರೆ ಮುಂದೆ ಬರಲು ಯಾರಿಗೂ ಸಾಧ್ಯವಿಲ್ಲ.ಸಭೆ ಸಮಾರಂಭಗಳಲ್ಲಿ ಹೆಚ್ಚು ಹೊತ್ತು ಕಾಲ ಕಳೆಯಬೇಡಿ,ವಾರಕ್ಕೊಂದು ಬಾರಿ ಅಥವಾ ತಿಂಗಳಿಗೊಂದು ಬಾರಿ ಒಂದೊಂದು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆ, ರಸ್ತೆ, ಸೇರಿದಂತೆ ಎಲ್ಲವನ್ನೂ ಅರಿತುಕೊಳ್ಳುವ ಕೆಲಸವನ್ನು ಮಾಡಿ, ಮೆಡಿಕಲ್ ಕಾಲೇಜು ನಿಮ್ಮ ಅವಧಿಯಲ್ಲಿ ಆಗಿಯೇ ಆಗ್ತದೆ ಎಂಬ ಪೂರ್ಣ ನಂಬಿಕೆ ಇದೆ.ಗ್ರಾಮದಲ್ಲಿ ನಡೆಯುವ ಕಾಮಗಾರಿಯನ್ನು ಗ್ರಾಮದವರಿಗೆ ನೀಡಬೇಕು ಮತ್ತು ಎಸ್‌ಸಿ,ಎಸ್‌ಟಿ ಸಮುದಾಯದವರು ಜಾಗವನ್ನು ಇತರರಿಗೆ ಮಾರಾಟ ಮಾಡಬಾರದು ಎಂಬ ಕಾನೂನಿನಲ್ಲಿ ಬದಲಾವಣೆ ಮಾಡಬೇಕು. ಅವರೂ ಅಭಿವೃದ್ಧಿಯಾಗಬೇಕು,ಅವರೂ ನಮ್ಮ ಹಾಗೇ.ಈ ಬಗ್ಗೆ ಸರಕಾರದ ಗಮನಸೆಳೆಯುವ ಕೆಲಸವನ್ನು ಮಾಡಬೇಕು.ನಿಮ್ಮ ಬಗ್ಗೆ ಯಾರಿಗೂ ಇದುವರೆಗೂ ಕೆಟ್ಟ ಅಭಿಪ್ರಾಯವೇ ಇಲ್ಲ-

ಜನಾರ್ದನ ಭಟ್ ಸೇಡಿಯಾಪು, ಪ್ರಗತಿಪರ ಕೃಷಿಕರು

ಪಕ್ಷ ಭೇದವಿಲ್ಲದೆ ಜನರ ಸೇವೆ ಮಾಡಿದ್ದೀರಿ
ಪುತ್ತೂರಿನಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದೀರಿ
ನಿಮ್ಮ ಗುರಿ ಚೆನ್ನಾಗಿಯೇ ಇದೆ ಅದನ್ನು ಮುಂದುವರೆಸಿ, ಶಾಸಕರಾಗಿ ಉತ್ತಮ ಕೆಲಸವನ್ನು ಮಾಡುತ್ತಿದ್ದೀರಿ, ಪುತ್ತೂರಿನಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದೀರಿ, ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ನಿಮ್ಮ ಅವಧಿಯಲ್ಲೇ ಆಗಲಿದೆ ಎಂಬ ವಿಶ್ವಾಸ ನಮಗಿದೆ.ಒಂದು ವರ್ಷದ ಶಾಸಕತ್ವದ ಅವಧಿಯಲ್ಲಿ ಚೆನ್ನಾಗಿ ಕೆಲಸ ಮಾಡಿದ್ದೀರಿ, ಎಲ್ಲರೊಂದಿಗೂ ಬೆರೆತು, ಪಕ್ಷ ಭೇದವಿಲ್ಲದೆ ಜನರ ಸೇವೆ ಮಾಡಿದ್ದೀರಿ.
ಪುತ್ತೂರಿನಲ್ಲಿ ವಿದ್ಯುತ್ ಸಮಸ್ಯೆ ಸರಿಯಾಗಬೇಕಿದೆ,ನಗರಸಭೆಯಲ್ಲಿ ಉತ್ತಮ ಸೇವೆ ಸಿಗುವಂತೆ ನೋಡಿಕೊಳ್ಳಬೇಕು.ಪುತ್ತೂರಿನಲ್ಲಿ ಟೂರಿಸಂ ಸೃಷ್ಟಿಯಾಗಬೇಕು.ಟೂರಿಸಂ ಅಭಿವೃದ್ದಿಯಾದರೆ ಪುತ್ತೂರು ತನ್ನಿಂತಾನೆ ಅಭಿವೃದ್ದಿಯಾಗುತ್ತದೆ.ಹೆಚ್ಚು ಜನರನ್ನು ಆಕರ್ಷಿಸುವ ಕೇಂದ್ರವಾಗಿ ಪುತ್ತೂರು ರೂಪುಗೊಳ್ಳಬೇಕು ಇದಕ್ಕಾಗಿ ನಿಮ್ಮ ನೆರವು ಅಗತ್ಯವಿದೆ.ಪುತ್ತೂರಿನ ವಿದ್ಯಾವಂತರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವ ಉದ್ಯಮಗಳು ಇಲ್ಲಿ ಹೆಚ್ಚು ಬರಬೇಕಿದೆ-

ಜಿ.ಎಲ್.ಬಲರಾಮ ಆಚಾರ್ಯ, ಸ್ವರ್ಣೋದ್ಯಮಿಗಳು ಪುತ್ತೂರು

ಬಿಜೆಪಿಯವರು ಸ್ವಲ್ಪ ತಲೆ ಖರ್ಚು ಮಾಡುತ್ತಿದ್ದರೆ
ನೀವು ನಮ್ಮ ಜೊತೆ ಇರುತ್ತಿದ್ರಿ
ಡಿ.ವಿ.ಸದಾನಂದ ಗೌಡರು ಪ್ರಥಮ ಬಾರಿಗೆ ಶಾಸಕರಾದಾಗ ನಿಮ್ಮ ಹಾಗೆ ಪಕ್ಷ ಭೇದವಿಲ್ಲದೆ ಎಲ್ಲರ ಮನೆಗೂ ಭೇಟಿ ನೀಡುತ್ತಿದ್ದರು. ಬಿಜೆಪಿಯವರು ಸ್ವಲ್ಪ ತಲೆ ಖರ್ಚು ಮಾಡುತ್ತಿದ್ದರೆ ನೀವು ನಮ್ಮ ಜೊತೆ ಇರುತ್ತಿದ್ರಿ.ಕಾಲ ಮಿಂಚಿ ಹೋಗಿದೆ.ನೀವು ಶಾಸಕನಾಗಿದ್ದೇ ದೊಡ್ಡ ಸಾಧನೆ, ಪುತ್ತಿಲ ವೋಟಿಗೆ ನಿಂತ ಕಾರಣ ನೀವು ಗೆದ್ದಿದ್ದಲ್ಲ ನಿಮಗೆ ದೈವ ಬಲವಿದೆ.ನಿಮಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿದ್ದೇ ದೊಡ್ಡ ಸಾಧನೆಯಾಗಿದೆ.ಬಿಜೆಪಿ ಭದ್ರಕೋಟೆಯನ್ನು ಭೇದಿಸಿದ್ದೀರಿ,ನಿಮ್ಮ ನಾಯಕತ್ವ ಚೆನ್ನಾಗಿಯೇ ನಡೆಯುತ್ತಿದೆ.ಡಿ.ವಿ.ಇದೇ ರೀತಿ ಮಾಡಿದ ಕಾರಣ ಎರಡನೇ ಬಾರಿಗೂ ಶಾಸಕರಾಗಿ ಆಯ್ಕೆಯಾದರು. ಅಡಿಕೆ ಬೋರ್ಡು ಸ್ಥಾಪನೆ ಮಾಡುವಲ್ಲಿ ಮುತುವರ್ಜಿವಹಿಸಿ,ಸಬ್ಸಿಡಿ ಕೃಷಿ ಮೆಕ್ಯಾನಿಸಂ ಆರಂಭವಾಗಬೇಕು, ಸಿಪಿಸಿಆರ್‌ಐ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.ಅದನ್ನು ಹೇಗಾದರೂ ಮಾಡಿ ಕೃಷಿಕರಿಗೆ ಪ್ರಯೋಜನವಾಗುವ ರೀತಿಯಲ್ಲಿ ಮಾಡಬೇಕು.ನಿಮ್ಮ ನಡೆ ಅತ್ಯುತ್ತಮವಾಗಿದೆ.ಗುಡ್ ಲಕ್

ವಿಶ್ವೇಶ್ವರ ಭಟ್ ಬಂಗಾರಡ್ಕ, ಪ್ರಗತಿಪರ ಕೃಷಿಕರು (ಬಿಜೆಪಿ ಪ್ರಮುಖರು)

ಭ್ರಷ್ಟಾಚಾರ ಸ್ಥಗಿತವಾಗಿದೆ-ಅಧಿಕಾರಿಗಳಿಗೆ ಭಯವಿದೆ
ನಿಮ್ಮ ಸ್ಪೀಡ್ ಸ್ವಲ್ಪ ಕಮ್ಮಿಯಾದ ಹಾಗೆ ಅನಿಸುತ್ತಿದೆ
ನೀವು ಶಾಸಕರಾಗಿ ಆರಂಭದಲ್ಲಿ ಇದ್ದ ಸ್ಪೀಡ್ ಈಗ ಕಮ್ಮಿಯಾಗಿದೆ ಎಂಬ ಅನಿಸಿಕೆ ನನ್ನದು.ಶಾಸಕರಾಗಿ ನಿಮ್ಮ ಬಗ್ಗೆ ಯಾರೂ ಕೆಟ್ಟ ಕಮೆಂಟ್ ಮಾಡಿಲ್ಲ ಮತ್ತು ಕೆಟ್ಟದಾಗಿ ಹೇಳಿದ್ದನ್ನು ನಾನು ಕೇಳಿಲ್ಲ.ನೀವು ಶಾಸಕರಾದ ಬಳಿಕ ಅದ್ಭುತ ನಿರೀಕ್ಷೆ ಇತ್ತು ಎಲ್ಲೋ ಎಡವಿದ ಹಾಗೆ ಕಾಣುತ್ತಿದೆ.ಪುತ್ತೂರು ನಗರಸಭೆಯಲ್ಲಿ ವ್ಯವಸ್ಥಿತ ಆಡಳಿತವಿಲ್ಲ,ನಗರಸಭಾ ವ್ಯಾಪ್ತಿಯ ಅನೇಕ ಕಾಮಗಾರಿಗಳು ಪೆಂಡಿಂಗ್ ಇದೆ.ಜಲಸಿರಿ ಯೋಜನೆಯ ಕೆಲಸಗಳು ವ್ಯವಸ್ಥಿತವಾಗಿ ಆಗುತ್ತಿಲ್ಲ ಹೀಗೇ ಕೆಲವೊಂದು ವಿಚಾರದಲ್ಲಿ ಸ್ವಲ್ಪ ಹಿನ್ನಡೆಯಾದಂತಿದೆ.
ನಿಮ್ಮ ಶಾಸಕತ್ವದ ಒಂದು ವರ್ಷದ ಅವಧಿ ತೃಪ್ತಿದಾಯಕವಾಗಿದೆ.ನಿಮ್ಮ ತಾಳ್ಮೆಗೆ ನಾನು ಮೆಚ್ಚಿದ್ದೇನೆ, ಸಮಾಧಾನದಿಂದ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದೀರಿ, ಪುತ್ತೂರಿನಲ್ಲಿ ಭ್ರಷ್ಟಾಚಾರಗಳು ಸ್ಥಗಿತವಾಗಿದೆ,ಅಧಿಕಾರಿಗಳಿಗೆ ಭಯವಿದೆ, ನೀವು ಭ್ರಷ್ಟಾಚಾರಿಯಲ್ಲ ಎಂದು ಪುತ್ತೂರಿನ ಪ್ರತಿಯೊಬ್ಬ ನಾಗರಿಕನಿಗೂ ಗೊತ್ತಿರುವ ವಿಚಾರವಾಗಿದೆ ಮತ್ತೆ ನಿಮ್ಮ ಜನಸ್ಪಂದನೆ ಸೂಪರ್ ಆಗಿದೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ದಿಯಾಗುವ ನಿಮ್ಮ ಕನಸು ನನಸಾಗಲಿ, ಮೆಡಿಕಲ್ ಕಾಲೇಜು ನಿಮ್ಮ ಅವಧಿಯಲ್ಲೇ ಆಗಲಿ.ಪುತ್ತೂರಿನಲ್ಲಿ ಒಳಚರಂಡಿ ವ್ಯವಸ್ಥೆ ಅಭಿವೃದ್ದಿಯಾಗಬೇಕು ಮತ್ತು ಪುತ್ತೂರಿನಲ್ಲಿ ಟೂರಿಸಂ ಬೆಳೆಯಬೇಕು

ಗೋಪಾಲಕೃಷ್ಣ ಹೆರಳೆ, ಹೋಟೇಲ್ ಉದ್ಯಮಿಗಳು, ಪುತ್ತೂರು
(ಕ್ಷೇತ್ರ ಬಿಜೆಪಿ ಮಾಜಿ ಅಧ್ಯಕ್ಷರು)

ಒಂದು ವರ್ಷದ ಅವಧಿ ಕಳಂಕರಹಿತವಾಗಿದೆ
ನಿಮ್ಮ ಒಂದು ವರ್ಷದ ಶಾಸಕ ಅವಧಿ ಕಳಂಕರಹಿತವಾಗಿದೆ.ಅಭಿವೃದ್ದಿಯೇ ಸಕ್ಸಸ್‌ಗೆ ದಾರಿಯಾಗುತ್ತದೆ. ನಿಮ್ಮ ಬಳಿ ಸಹಾಯ ಕೇಳಿ ಬರುವ ಜನರಿಗೆ ನೀವು ಕೊಡುವ ಸ್ಪಂದನೆ ಗ್ರೇಟ್ ಅದನ್ನೇ ಮುಂದುವರೆಸಿ.ಸಹಾಯ ಕೇಳಿ ಯಾರೇ ಬಂದರೂ ಅವರನ್ನು ಸಮಾಧಾನ ಮಾಡಿ ಕಳುಹಿಸುವ ನಿಮ್ಮ ಮನಸ್ಸು ಉತ್ತಮವಾಗಿದೆ. ಯಾರನ್ನೂ ಬಯ್ಯಬಾರದು, ಬಯ್ಯುವುದು ರಾಜಕೀಯದಲ್ಲಿ ಇರಬಾರದು ನೀವು ಯಾವತ್ತೂ ಇದನ್ನು ಮೈಗೂಡಿಸಿಕೊಳ್ಳಬೇಡಿ, ನೀವು ಈಗ ಪಾಲಿಸಿಕೊಂಡು ಬರುತ್ತಿರುವ ನಡೆಯನ್ನೇ ಮುಂದುವರೆಸಿದರೆ ಅದುವೇ ನಿಮ್ಮ ಗೆಲುವಿಗೆ ಹಾದಿಯಾಗಲಿದೆ.
ಪುತ್ತೂರಿನಲ್ಲಿ ಉದ್ಯಮ ಬೆಳೆಯಬೇಕು, ಕೆಎಂಎಫ್ ತಂದಿರುವುದು ಉತ್ತಮ ಯೋಜನೆಯಾಗಿದೆ. ಪುತ್ತೂರಿನಲ್ಲಿ ಇಂಡಸ್ಟ್ರಿಯಲ್ ಎಸ್ಟೇಟ್ ಆರಂಭ ಮಾಡುವ ಮೂಲಕ ಒಂದಷ್ಟು ಜನರಿಗೆ ಉದ್ಯೋಗವನ್ನು ಕೊಡುವುದಕ್ಕೆ ಪ್ರಯತ್ನ ಮಾಡಿದರೆ ಉತ್ತಮ.

ಸತ್ಯಶಂಕರ್ ಕೆ., ಮೆನೇಜಿಂಗ್ ಡೈರೆಕ್ಟರ್, ಶಂಕರ್ ಗ್ರೂಪ್ ಆಫ ಕಂಪೆನೀಸ್

ಎಲ್ಲಾ ಸಮುದಾಯದವರಿಗೂ ಒಳ್ಳೆಯ ಅಭಿಪ್ರಾಯವಿದೆ
ನೀವು ಶಾಸಕರಾದ ಬಳಿಕ ಬಹಳಷ್ಟು ಅಭಿವೃದ್ದಿ ಕೆಲಸಗಳು ನಡೆದಿದೆ.ನೀವು ಕರ್ನಾಟಕದ ಮುಖ್ಯಮಂತ್ರಿಯಾಗಲೂ ಯೋಗ್ಯತೆಯನ್ನು ಹೊಂದಿದ್ದೀರಿ.ಪುತ್ತೂರಿಗೆ ಮೆಡಿಕಲ್ ಕಾಲೇಜು ಬರಬೇಕು, ಮಾಣಿಯಿಂದ ಚತುಷ್ಪಥ ರಸ್ತೆ ನಿರ್ಮಾಣವಾಗಬೇಕು, ಪುತ್ತೂರಿನಲ್ಲಿ ಉದ್ಯಮಗಳು ಬೆಳೆಯುವಲ್ಲಿ ನೀವು ಮುತುವರ್ಜಿ ವಹಿಸಬೇಕು.ನಿಮ್ಮ ಬಗ್ಗೆ ಎಲ್ಲಾ ಸಮುದಾಯದವರಿಗೂ ಒಳ್ಳೆಯ ಅಭಿಪ್ರಾಯವಿದೆ.ನಿಮ್ಮ ಈಗಿನ ನಡೆ ಚೆನ್ನಾಗಿಯೇ ಇದೆ

– ಮಹಮ್ಮದ್ ಹಾಜಿ, ಪುತ್ತೂರು ಟಿಂಬರ್, ಉದ್ಯಮಿಗಳು

LEAVE A REPLY

Please enter your comment!
Please enter your name here