ಕೊಕ್ಕಡ: ಕ್ಷುಲ್ಲಕ ವಿಚಾರಕ್ಕೆ ಕೈಯಿಂದ ಹಲ್ಲೆ- ವ್ಯಕ್ತಿ ಸಾವು – ಕೊಲೆ ಕೇಸು ದಾಖಲು-ಹಲ್ಲೆ ಆರೋಪಿ ಹಿರಿಯ ಪಶುವೈದ್ಯ ಪರೀಕ್ಷಕ ಬಂಧನ

0

ನೆಲ್ಯಾಡಿ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಕೈಯಿಂದ ಹಲ್ಲೆ ನಡೆಸಿದ ಪರಿಣಾಮ ವ್ಯಕ್ತಿಯೋರ್ವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕೊಕ್ಕಡ ಪಶುಚಿಕಿತ್ಸಾಲಯದ ಹಿರಿಯ ಪಶುವೈದ್ಯ ಪರೀಕ್ಷಕ ಕುಮಾರ್(52 ವ.) ಎಂಬವರ ವಿರುದ್ಧ ಧರ್ಮಸ್ಥಳ ಪೊಲೀಸರು ಕೊಲೆ ಕೇಸು ದಾಖಲಿಸಿಕೊಂಡು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಘಟನೆ ಮೇ.13ರಂದು ಸಂಜೆ ಕೊಕ್ಕಡ ಜೋಡುಮಾರ್ಗದಲ್ಲಿ ನಡೆದಿದ್ದು ಸ್ಥಳಕ್ಕೆ ಎಎಸ್‌ಪಿ ಜಗದೀಶ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಪಟ್ರಮೆ ನಿವಾಸಿ ಕೃಷ್ಣಪ್ಪ (56 ವ.)ಮೃತಪಟ್ಟ ದುರ್ದೈವಿ. ಕೂಲಿಕಾರ್ಮಿಕರಾಗಿದ್ದ ಕೃಷ್ಣಪ್ಪ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಮೇ.12ರಂದು ಪುತ್ತೂರು ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಂಡು ಮೇ.13ರಂದು ರಾತ್ರಿ ವಾಪಾಸ್ಸು ಕೊಕ್ಕಡಕ್ಕೆ ಬಂದಿದ್ದರು. ಅವರು ಕೊಕ್ಕಡ ಜೋಡುಮಾರ್ಗ ಜಂಕ್ಷನ್ ಬಳಿ ನಿಂತಿದ್ದಾಗ ಕೊಕ್ಕಡ ಪಶು ಚಿಕಿತ್ಸಾಲಯದ ಹಿರಿಯ ಪಶುವೈದ್ಯ ಪರೀಕ್ಷಕರಾದ ಹಾಸನ ಮೂಲದ ಕುಮಾರ್ ಎಂಬವರು ಯಾವುದೋ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಕೈಯಿಂದ ಹಲ್ಲೆ ಮಾಡಿದ್ದಾರೆ. ಮೊದಲೇ ಅನಾರೋಗ್ಯ ಪೀಡಿತರಾಗಿ ಬಳಲುತ್ತಿದ್ದ ಕೃಷ್ಣಪ್ಪ ಅವರು ಹಲ್ಲೆಯ ಪರಿಣಾಮ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದೆ. ಘಟನೆ ಕುರಿತಂತೆ ಮೃತ ಕೃಷ್ಣಪ್ಪ ಅವರ ಪತ್ನಿ ಭಾರತಿ ಅವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 34/2024 ಕಲಂ: 302 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡ ಪೊಲೀಸರು ಹಲ್ಲೆ ಆರೋಪಿ ಹಿರಿಯ ಪಶುವೈದ್ಯ ಪರೀಕ್ಷಕ ಕುಮಾರ್ ಅವರನ್ನು ಬಂಧಿಸಿ ಮೇ.14ರಂದು ಬೆಳ್ತಂಗಡಿ ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ಸಂದೇಶ್ ಅವರ ಎದುರು ಹಾಜರುಪಡಿಸಿದರು. ನ್ಯಾಯಾಲಯ ಆರೋಪಿಗೆ 15 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕ ಪುತ್ತೂರಿನ ದಿವ್ಯರಾಜ್ ಹೆಗ್ಡೆ ಹಾಗೂ ಆರೋಪಿ ಪರ ವಕೀಲ ಶಿವಯ್ಯ ಹಾಜರಾಗಿದ್ದರು. ಹಾಸನ ಮೂಲದ ಕುಮಾರ್ ಅವರು ಕೊಕ್ಕಡ ಪಶುಚಿಕಿತ್ಸಾಲಯದಲ್ಲಿ ಹಲವು ವರ್ಷಗಳಿಂದ ಹಿರಿಯ ಪಶುವೈದ್ಯ ಪರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಅರಸಿನಮಕ್ಕಿ ಪಶುಚಿಕಿತ್ಸಾಲಯದಲ್ಲೂ ಪ್ರಭಾರ ಕರ್ತವ್ಯದಲ್ಲಿದ್ದರು. ಇವರು ಕುಟುಂಬ ಸಮೇತ ಕೊಕ್ಕಡದಲ್ಲಿ ವಾಸ್ತವ್ಯವಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಎಎಸ್ಪಿ ಭೇಟಿ: ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಂ.ಜಗದೀಶ್, ಬಂಟ್ವಾಳ ಡಿವೈಎಸ್‌ಪಿ ವಿಜಯಪ್ರಕಾಶ್, ವೃತ್ತ ನಿರೀಕ್ಷಕ ವಸಂತ ಆರ್.ಆಚಾರ್, ಧರ್ಮಸ್ಥಳ ಠಾಣೆ ಪಿಎಸ್‌ಐಗಳಾದ ಅನಿಲ್‌ಕುಮಾರ್ ಡಿ., ಸಮರ್ಥ್ ಕೆ.ಗಾಣಿಗೇರ ಹಾಗೂ ಸಿಬ್ಬಂದಿಗಳು ಮೇ.13ರಂದು ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮರಣೋತ್ತರ ಪರೀಕ್ಷೆ: ಕೃಷ್ಣಪ್ಪ ಅವರ ಮೃತದೇಹವನ್ನು ಮೇ.13ರಂದು ರಾತ್ರಿಯೇ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಮೇ.14ರಂದು ಅಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಬಿಟ್ಟುಕೊಡಲಾಗಿದೆ. ಮೃತ ಕೃಷ್ಣಪ್ಪ ಅವರು ಪತ್ನಿ ಭಾರತಿ, ಪುತ್ರಿ ಗಾಯತ್ರಿ ಅವರನ್ನು ಅಗಲಿದ್ದಾರೆ.

ಇಬ್ಬರೂ ಚಿರಪರಿಚಿತರು
ಮೃತ ಕೃಷ್ಣಪ್ಪ ಹಾಗೂ ಹಲ್ಲೆ ಆರೋಪಿ ಕುಮಾರ್ ಚಿರಪರಿಚಿತರು. ಇಬ್ಬರೂ ಪರಸ್ಪರ ಸಲುಗೆಯಿಂದ ಇದ್ದರು. ಜ್ವರ ಇದ್ದರೂ ಒಂದೇ ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಕೊಕ್ಕಡಕ್ಕೆ ಬಂದಿದ್ದ ಕೃಷ್ಣಪ್ಪ ಅವರ ಜೊತೆ ಕುಮಾರ್ ಅವರು ಮಾತನಾಡುತ್ತಾ, ಜ್ವರ ಇದ್ದರೂ ಇಷ್ಟು ಬೇಗ ಡಿಸ್ಚಾರ್ಜ್ ಆಗಿ ಯಾಕೆ ಬಂದೆ? ಎಂದು ಪ್ರಶ್ನಿಸಿ ಎಡಕೈಯಿಂದ ಕೃಷ್ಣಪ್ಪ ಅವರ ಬಲಕೆನ್ನೆಗೆ ಹೊಡೆದಿದ್ದಾರೆ ಎನ್ನಲಾಗಿದೆ. ಮೊದಲೇ ಸಣಕಲು ದೇಹ ಹೊಂದಿದ್ದ ಹಾಗೂ ಜ್ವರದಿಂದಲೂ ಬಳಲುತ್ತಿದ್ದ ಕೃಷ್ಣಪ್ಪ ಅವರು ಕುಮಾರ್ ಅವರು ಹೊಡೆದ ಒಂದೇ ಏಟಿಗೆ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕುಮಾರ್ ಅವರು ಪಾನಮತ್ತರಾಗಿ ಕೃಷ್ಣಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದೂ ಹೇಳಲಾಗಿದೆ.

LEAVE A REPLY

Please enter your comment!
Please enter your name here