ಬಿಜೆಪಿಯಲ್ಲಿ ರಘುಪತಿ ಭಟ್, ಹರೀಶ್ಚಂದ್ರ ಆಚಾರ್ಯ ಬಂಡಾಯ
ಪುತ್ತೂರು:ಜೂನ್ .3ರಂದು ನಡೆಯಲಿರುವ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ಚನ್ನಗಿರಿ ತಾಲೂಕು ವ್ಯಾಪ್ತಿಯನ್ನು ಒಳಗೊಂಡಿರುವ ನೈರುತ್ಯ ಪದವೀಧರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ಮೇ 13ರಂದು ಈರ್ವರು,ಮೇ 14ರಂದು ನಾಲ್ವರು ಮತ್ತು ಮೇ 15ರಂದು 8 ಮಂದಿ ಸೇರಿ ಈವರೆಗೆ 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಮೇ 16 ಕೊನೆಯ ದಿನವಾಗಿದ್ದು ಮೇ 17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.ನಾಮಪತ್ರ ಹಿಂತೆಗೆದುಕೊಳ್ಳಲು ಮೇ 20 ಕೊನೆಯ ದಿನವಾಗಿದೆ.ಜೂನ್ 3ರಂದು ಮತದಾನ ಪ್ರಕ್ರಿಯೆ ಪ್ರತೀ ತಾಲೂಕು ಕೇಂದ್ರಗಳಲ್ಲಿ ನಡೆಯಲಿದ್ದು ಪುತ್ತೂರು ತಾಲೂಕಿಗೆ ಸಂಬಂಧಿಸಿ ಆಡಳಿತ ಸೌಧದಲ್ಲಿರುವ ತಾಲೂಕು ಕಚೇರಿಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ.ಜೂನ್ 6ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ, ಪರಿಶೀಲನೆ, ವಾಪಸ್ ಪಡೆಯುವಿಕೆ ಮತ್ತು ಮತ ಎಣಿಕೆ ನಡೆಯಲಿದೆ.ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಚುನಾವಣಾಽಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತ ಡಾ|.ಜಿ.ಸಿ. ಪ್ರಕಾಶ್ ಅವರು ಚುನಾವಣಾಧಿಕಾರಿಯಾಗಿದ್ದಾರೆ.
ನಾಮಪತ್ರ ಸಲ್ಲಿಸಿದವರು:
ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿ ಮುಖಂಡರಾದ ಶಿವಮೊಗ್ಗ ವಿನೋಭನಗರ ಬನಶಂಕರಿ ನಿಲಯದ ಡಾ|ಧನಂಜಯ ಸರ್ಜಿ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿರುವ ಜೆಡಿಎಸ್ ಮುಖಂಡ, ಹಾಲಿ ಪರಿಷತ್ ಸದಸ್ಯರಾಗಿರುವ ಚಿಕ್ಕಮಗಳೂರು ಹೊಸಮನೆ ಬಡಾವಣೆಯ ಎಸ್.ಎಲ್. ಬೋಜೇಗೌಡ ಅವರು ಮೇ 13ರಂದು ನಾಮಪತ್ರ ಸಲ್ಲಿಸಿದ್ದಾರೆ. ಮೇ 14ರಂದು ಶಿಕ್ಷಕರ ಕ್ಷೇತ್ರದಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕೊಡಗು ಜಿಲ್ಲೆಯ ಕುಶಾಲನಗರದ ಕೂಡ್ಲಾರು ನಿವಾಸಿ ಕೆ.ಕೆ. ಮಂಜುನಾಥ ಕುಮಾರ್, ಪಕ್ಷೇತರ ಅಭ್ಯರ್ಥಿಗಳಾಗಿ ಉಡುಪಿ ಜಿಲ್ಲೆಯ ಕುಂದಾಪುರ ಕುಂಭಾಶಿಯ ಭಾಸ್ಕರ ಶೆಟ್ಟಿ ಟಿ. ಮತ್ತು ಉಡುಪಿ ಶಿವಳ್ಳಿಯ ಡಾ|ನರೇಶ್ಚಂದ್ರ ಹೆಗ್ಡೆ ನಾಮಪತ್ರ ಸಲ್ಲಿಸಿದ್ದಾರೆ.
ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಮಂಗಳೂರು ಉಲ್ಲಾಳ ತಾಲೂಕಿನ ಪೆರ್ಮನ್ನೂರಿನ ಪಡ್ಡಲ ನಿವಾಸಿ ದಿನಕರ ಉಳ್ಳಾಲ್ ನಾಮಪತ್ರ ಸಲ್ಲಿಸಿದ್ದಾರೆ.ಮೇ ೧೫ರಂದು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಬೆಂಗಳೂರು ಕನಕಪುರದ ಎಂ. ಸತೀಶ್ ಕಾರಂತ್, ಮಂಗಳೂರು ನಾಗುರಿಯ ಡಾ|ಎಸ್.ಆರ್. ಹರೀಶ್ ಆಚಾರ್ಯ, ಶಿವಮೊಗ್ಗ ತೀರ್ಥಹಳ್ಳಿಯ ಅರುಣ್ ಎಚ್.ಟಿ, ಶಿವಮೊಗ್ಗ ಶಂಕರಘಟ್ಟದ ಎಂ.ರಮೇಶ್, ನೈರುತ್ಯ ಪದವೀಧರ ಕ್ಷೇತ್ರದಿಂದ ಶಿವಮೊಗ್ಗ ವಿನೋಬಾನಗರದ ಎಸ್.ಪಿ.ದಿನೇಶ್, ಬಂಟ್ವಾಳ ಕಳ್ಳಿಗೆಯ ಬಿ. ಮಹಮ್ಮದ್, ಮಂಗಳೂರು ಎಮ್ಮೆಕೆರೆಯ ಶೇಖ್ ಬಾವಾ ಮತ್ತು ಶಿವಮೊಗ್ಗದ ಉರುಗದೂರು ಶಹರಾಜ್ ಮುಜಾಯಿದ್ ಸಿದ್ದೀಕ್ ನಾಮಪತ್ರ ಸಲ್ಲಿಸಿದ್ದಾರೆ.ಮೇ 15ರಂದು ನಾಮಪತ್ರ ಸಲ್ಲಿಸಿರುವ ಎಲ್ಲರೂ ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ.ಈ ಮೂಲಕ 14 ಅಭ್ಯರ್ಥಿಗಳು ಇದುವರೆಗೆ ನಾಮಪತ್ರ ಸಲ್ಲಿಸಿದಂತಾಗಿದೆ.ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್, ಸ್ವತಂತ್ರ ಅಭ್ಯರ್ಥಿ ರಘುಪತಿ ಭಟ್ ಮೇ 16ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ರಘುಪತಿ ಭಟ್ ಬಂಡಾಯ:
ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯೊಳಗೆ ಬಂಡಾಯದ ಕಹಳೆ ಕಾಣಿಸಿಕೊಂಡಿದೆ.ಪದವೀಧರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು ಚುನಾವಣೆಗೆ ಸ್ಪಽಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದ ಬಿಜೆಪಿಯ ಪ್ರಭಾವಿ ನಾಯಕರಾದ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರು ಪರಿಷತ್ ಟಿಕೆಟ್ ವಂಚಿತರಾಗಿರುವುದರಿಂದ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಬಂಡಾಯದ ಧ್ವನಿ ಮೊಳಗಿಸಿರುವ ರಘುಪತಿ ಭಟ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.
ಈಗಿನ ಬಿಜೆಪಿಯಲ್ಲಿ ಚಮಚಾಗಿರಿಗೆ ಅವಕಾಶ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಘುಪತಿ ಭಟ್ ಅವರನ್ನು ಮನವೊಲಿಸಲು ಪಕ್ಷದ ನಾಯಕರು ಅವಿರತ ಶ್ರಮ ವಹಿಸಿದ್ದಾರೆ.ಮನವೊಲಿಕೆ ಸಾಧ್ಯವಾಗದೇ ಇದ್ದಲ್ಲಿ ರಘುಪತಿ ಭಟ್ ಅವರು ಸ್ಪರ್ದಿಸುವುದು ಬಹುತೇಕ ಖಚಿತವಾಗಿದ್ದು ಅವರು ಮೇ 16ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.ನಾಮಪತ್ರ ಸಲ್ಲಿಸಿದ್ದೇ ಆದಲ್ಲಿ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಡಾ|ಧನಂಜಯ ಸರ್ಜಿ, ಕಾಂಗ್ರೆಸ್‌ನ ಆಯನೂರು ಮಂಜುನಾಥ್ ಮತ್ತು ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ನಡುವೆ ಹಣಾಹಣಿ ನಡೆಯುವುದು ನಿಶ್ಚಿತವಾಗಿದೆ.
ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಹರೀಶ್ ಆಚಾರ್ಯ ಬಂಡಾಯ:
ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದು ಟಿಕೆಟ್ ನಿರಾಕರಿಸಲ್ಪಟ್ಟಿರುವ ಹರೀಶ್ ಆಚಾರ್ಯ ಅವರು ಕೂಡ ಬಂಡಾಯ ಮೊಳಗಿಸಿದ್ದಾರೆ.ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಮಾಜಿ ಮುಖಂಡ, ಸಹಕಾರ ಭಾರತಿಯ ಸದಸ್ಯ, ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರೂ ಆಗಿರುವ ಮಂಗಳೂರಿನ ಹರೀಶ್ ಆಚಾರ್ಯ ಅವರು ಶಿಕ್ಷಕರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.ಹರೀಶ್ ಆಚಾರ್ಯ ಅವರನ್ನೂ ಮನವೊಲಿಸಲು ಪ್ರಯತ್ನ ನಡೆದಿದೆಯಾದರೂ ಅವರು ಸ್ಪರ್ಧೆಯಿಂದ ಹಿಂದೆ ಸರಿಯಲು ನಿರಾಕರಿಸಿದ್ದಾರೆ.ಹರೀಶ್ ಅವರು ಸ್ಪರ್ಧೆ ಮಾಡಿದ್ದೇ ಆದಲ್ಲಿ ಶಿಕ್ಷಕರ ಕ್ಷೇತ್ರದ ಕಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಎಸ್.ಎಲ್.ಬೋಜೇಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೆ.ಕೆ.ಮಂಜುನಾಥ ಕುಮಾರ್ ಮತ್ತು ಸ್ವತಂತ್ರ ಅಭ್ಯರ್ಥಿ ಹರೀಶ್ ಆಚಾರ್ಯ ನಡುವೆ ಪೈಪೋಟ ಏರ್ಪಡಲಿದೆ.